ಜೂ.7ರಂದು ಎಂಡೋ ಸಂತ್ರಸ್ತರ ಬೆಂಗಳೂರು ಚಲೋ
ಮಂಗಳೂರು: ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ದ.ಕ. ಜಿಲ್ಲೆಯ ಎಂಡೋ ಸಂತ್ರಸ್ತರು ಜೂ.7ರಂದು ಬೆಂಗಳೂರು ಚಲೋ ನಡೆಸಲಿದ್ದಾರೆ.
ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿ ಮತ್ತು ಎಂಡೋ ಸಂತ್ರಸ್ತರ ವಿಧಾನಸೌಧ ಚಲೋ ಸಂಘಟನಾ ಸಮಿತಿ ಇದನ್ನು ಆಯೋಜಿಸಿದ್ದು, ಬೆಳಗ್ಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಭೆ ನಡೆಸಲಿದೆ. ಅಲ್ಲಿಗೆ ಮುಖ್ಯಮಂತ್ರಿ ಸಚಿವ ಸಂಪುಟ ಸದಸ್ಯರೊಂದಿಗೆ ಆಗಮಿಸಿ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಿದ್ದೇವೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಂಡೋ ಸಂತ್ರಸ್ತರಿಗೆ ಕೇರಳ ರಾಜ್ಯದಲ್ಲಿ ಈಗಾಗಲೇ ಸರ್ಕಾರದಿಂದ ಪರಿಹಾರ ಕ್ರಮ, ಸಮಸ್ಯೆಗೆ ಸ್ಪಂದನ ಸಿಗುತ್ತಿದೆ. ಆದರೆ ಕರ್ನಾಟಕದಲ್ಲಿ ಯಾವುದೇ ನ್ಯಾಯ ಸಿಗುತ್ತಿಲ್ಲ. ಸಮಿತಿಯ ಹೋರಾಟದ ಫಲವಾಗಿ ಬೆಳ್ತಂಗಡಿಯ ಕೊಕ್ಕಡ, ಪಟ್ರಮೆ, ನಿಡ್ಲೆ ಗ್ರಾಮಗಳ 211 ಕುಟುಂಬಗಳಿಗೆ ತಲಾ ರು. 50 ಸಾವಿರ ಪರಿಹಾರ ನೀಡಲಾಗಿದೆ. ಆದರೆ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕುಗಳ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂತ್ರಸ್ತರು ಪರಿಹಾರ ದೊರಕದೆ ವಂಚಿತಗೊಂಡಿದ್ದಾರೆ. ಇದು ಮಾನವ ಹಕ್ಕಿನ ಉಲ್ಲಂಘನೆಯಾಗಿದ್ದು, ಕೊನೆ ಪ್ರಯತ್ನವಾಗಿ ಸರ್ಕಾರದ ಕಣ್ಣು ತೆರೆಸಲು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವರೆಗೆ ಕಾರ್ಡ್, ಎಸ್‌ಎಂಎಸ್ ಚಳುವಳಿ, ಪ್ರತಿಭಟನೆ ನಡೆಸಲಾಗಿದೆ. ಎಂಡೋ ಸಂತ್ರಸ್ತರ ಛಾಯಾ ಚಿತ್ರೀಕರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಈಗ ಸಂತ್ರಸ್ತರಲ್ಲಿ ಸಮಸ್ಯೆ ಉಲ್ಭಣಗೊಂಡಿರುವುದರಿಂದ ಅನಿವಾರ್ಯವಾಗಿ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಜೂ.6ರಂದು ಸಂಜೆ ಕೊಕ್ಕಡ ಶ್ರೀಕ್ಷೇತ್ರ ಸೌತಡ್ಕದಿಂದ ಬೆಂಗಳೂರಿಗೆ 30 ಬಸ್‌ಗಳಲ್ಲಿ ವೈದ್ಯರೊಂದಿಗೆ ಹೊರಡಲಿದ್ದೇವೆ. ದ.ಕ.ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಮಂದಿ ಎಂಡೋ ಸಂತ್ರಸ್ತರಿದ್ದು, ಮೊನ್ನೆ ಡಿಸೆಂಬರ್‌ನಲ್ಲಿ ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಲ್ಲಿ 5,231 ಮಂದಿ ಸಂತ್ರಸ್ತರೆಂದು ಗುರುತಿಸಿದೆ. ಉಳಿದ ಸಂತ್ರಸ್ತರ ಸಮೀಕ್ಷೆ ಆಗಿಲ್ಲ, ಈ ಪ್ರದೇಶದಿಂದ ವಿವಾಹವಾಗಿ ಹೋದವರನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸಂಘಟನಾ ಸಮತಿ ಅಧ್ಯಕ್ಷ ಪಿ.ಕೆ.ನಾರಾಯಣ ಗೌಡ, ಪ್ರಸನ್ನ ಕುಮಾರ್ ಹಾಜರಿದ್ದರು.
12 ಬೇಡಿಕೆಗಳು
ಟಿ ಪ್ರತಿ ಸಂತ್ರಸ್ತರಿಗೆ ತಲಾ ರು. 5 ಲಕ್ಷ ಪರಿಹಾರ ಮತ್ತು ಪ್ರತಿ ತಿಂಗಳು ರು. 5 ಸಾವಿರ ಪಿಂಚಣಿ.
ಟಿ ಪ್ರತಿ ತಾಲೂಕಿಗೊಂದು ಶಾಸ್ವತ ಪುನರ್ವಸತಿ ಕೇಂದ್ರ ಮತ್ತು 5 ಗ್ರಾಮಕ್ಕೊಂದು ಸುಸಜ್ಜಿತ ಡೇ ಕೇರ್ ಸೆಂಟರ್.
ಟಿ ಅವಿವಾಹಿತರಿಗೆ ವಂಶವಾಹಿನಿ ಪರೀಕ್ಷೆ ಮತ್ತು ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್.
ಟಿ ಪ್ರತಿ ಸಂತ್ರಸ್ತರಿಗೆ ಸ್ಮಾರ್ಟ್‌ಕಾರ್ಡ್ ಮತ್ತು ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿ ನೀಡಬೇಕು.
ಟಿ ಸಂಚಾರಿ ಚಿಕಿತ್ಸಾ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು.
ಟಿ ಸಂತ್ರಸ್ತರಿಗೆ ಮತ್ತು ಕುಟುಂಬದವರಿಗೆ ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್ ಪಾಸ್ ನೀಡಬೇಕು.
ಟಿ ಅಂಗವಿಕಲರಿಗೆ ಸಲಕರಣೆ ಮತ್ತು ನಿರಂತರ ಕೌಶಲ್ಯವೃದ್ಧಿಗೆ ತರಬೇತಿ ನೀಡಬೇಕು.
ಟಿ ಪಾಲನಾ ಕೇಂದ್ರಗಳನ್ನು ಸರ್ಕಾರವೇ ನಡೆಸಬೇಕು. ಈ ಕೇಂದ್ರಗಳಿಗೆ ಪ್ರತಿ ತಿಂಗಳು ತಜ್ಞ ವೈದ್ಯರು ಭೇಟಿ ನೀಡಬೇಕು.
ಟಿ ಸಂತ್ರಸ್ತರ ಮನೆಗೊಂದು ಉದ್ಯೋಗ ನೀಡಬೇಕು. ಸಂತ್ರಸ್ತರ ಕುಟುಂಬಗಳ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕು.
ಟಿ ಈ ಪ್ರದೇಶಗಳನ್ನು ಎಂಡೋ ಪೀಡಿತ ಎಂದು ಘೋಷಿಸಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು.
ಟಿ ಸಂತ್ರಸ್ತರ ಆಯ್ಕೆ, ಪರಿಹಾರ ಮತ್ತು ಪುನರ್ವಸತಿಗೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲು ಸರ್ಕಾರ ಮತ್ತು ಸಂತ್ರಸ್ತರ ಮಧ್ಯೆ ಸಂಪರ್ಕ ಸೇತುವೆಯಂತೆ ಸಲಹಾ ಸಮಿತಿಯನ್ನು ರಚಿಸಬೇಕು. ಇದರಲ್ಲಿ ಡಾ.ರವೀಂದ್ರನಾಥ ಶ್ಯಾನುಭಾಗ್, ಡಾ.ಯು.ವಿ.ಶೆಣೈ, ಡಾ.ನಿತ್ಯಾನಂದ ಪೈ, ಸಂಜೀವ ಕಬಕ ಮತ್ತು ಎಂಡೋ ವಿರೋಧಿ ಹೋರಾಟ ಸಮಿತಿಯನ್ನು ಸೇರಿಸಿಕೊಳ್ಳಬೇಕು.