ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂಲ್ಕಿ: ಮೂರು ದಿನಕ್ಕೊಮ್ಮೆ ನೀರು

Rashmi Kasaragodu
Updated On : 22 May 2013, 11:58 am

ಪ್ರಕಾಶ್ ಮೂಲ್ಕಿ
ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿ, ಹಳೆಯಂಗಡಿ, ಮೂಡುಬಿದಿರೆ ಪೇಟೆ ಪರಿಸರದಲ್ಲಿ ನೀರಿನ ಸಮಸ್ಯೆ ಹೆಚ್ಚಿರುವುದು ಕಂಡುಬಂದಿದೆ. ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಮಿತಿಮೀರಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಕಿನ್ನಿಗೋಳಿ, ಐಕಳ, ಮೆನ್ನಬೆಟ್ಟು, ಬಳ್ಕುಂಜೆ, ಕೆಮ್ರಾಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆಯು ಯಶಸ್ವಿಯಾಗಿದ್ದು, ಬೋರ್‌ವೆಲ್ ಹಾಗೂ ಬಾವಿಗಳ ಮೂಲಕ ನೀರು ಸರಬರಾಜು ಆಗುತ್ತಿದೆ, ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಹಳೆಯಂಗಡಿ ಪರಿಸರದಲ್ಲಿ ಸ್ವಲ್ಪ ಸಮಸ್ಯೆಯಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಚಿತ್ರಾಪು ಪರಿಸರದಲ್ಲಿ ಟ್ಯಾಂಕರ್ ನೀರು: ನದಿ ಪರಿಸರ ಹೊಂದಿರುವ ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಚಿತ್ರಾಪು, ಮಾನಂಪಾಡಿ, ಕೊಳಚಿಕಂಬಳ ಪರಿಸರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಇಲ್ಲಿ ಉಪ್ಪು ನೀರು ಇರುವುದರಿಂದ ಬಾವಿ, ಬೋರ್‌ವೆಲ್ ತೋಡಲು ಆಸಾಧ್ಯವಾಗಿದ್ದು, ಹೊರಗಿನಿಂದ ನೀರಿನ ಸರಬರಾಜು ವ್ಯವಸ್ಥೆ ಆಗಬೇಕಿದೆ. ಇದೀಗ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಯುತ್ತಿದ್ದು, ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
3 ದಿನಕ್ಕೊಮ್ಮೆ ನೀರು: ಮೂಲ್ಕಿಯಲ್ಲಿ ಹೆಚ್ಚು ಜನಸಂಖ್ಯೆಯಿರುವ ಕೆ.ಎಸ್. ರಾವ್ ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ. ಇಲ್ಲಿಗೆ ತುಂಬೆಯಿಂದ ಬರುವ ನೀರನ್ನೇ ಅವಲಂಬಿಸಿದ್ದು, ಅಲ್ಲಿಂದ ಬರುವ ನೀರಿನಲ್ಲಿ ವ್ಯತ್ಯಾಸವಾದರೆ ಸಮಸ್ಯೆ ಬಗೆಹರಿಸಲು ಅಸಾಧ್ಯವಾದ ಪರಿಸ್ಥಿತಿಯಿದೆ. ಮೂಲ್ಕಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಹು ಮಹಡಿ ವಸತಿ ಸಂಕೀರ್ಣಗಳಿಗೆ ಪರವಾನಗಿ ನೀಡಲಾಗುತ್ತಿದ್ದು, ನೀರಿನ ಸಮಸ್ಯೆ ಕಂಡುಬಂದಿದೆ.
ಶಾಶ್ವತ ವ್ಯವಸ್ಥೆ ಇಲ್ಲ: ಮೂಲ್ಕಿ ನಗರ ಪಂಚಾಯ್ತಿಯು ತುಂಬೆಯಿಂದ ಬರುವ ಕುಡಿಯುವ ನೀರನ್ನೇ ಅವಲಂಬಿಸಿದ್ದು, ಶಾಶ್ವತವಾಗಿ ನೀರಿನ ಸಮಸ್ಯೆ ನಿವಾರಿಸುವ ಬಗ್ಗೆ ಆಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾರ್ನಾಡು, ಬಪ್ಪನಾಡು ಹಾಗೂ ಗಾಂಧಿ ಮೈದಾನದ ಬಳಿಯ ಕೆರೆಗಳ ಹೂಳೆತ್ತಿದರೆ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ. ಅಲ್ಲದೆ, ನೀರಿನ ಒರತೆಯಿರುವ ಪ್ರದೇಶಗಳಲ್ಲಿ ಬಾವಿ ನಿರ್ಮಿಸುವ ಮೂಲಕ ಸಮಸ್ಯೆ ಬಗೆಹರಿಸಬಹುದಾಗಿದ್ದರೂ ನಗರ ಪಂಚಾಯ್ತಿ ಆಸಕ್ತಿ ವಹಿಸುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದರಿಂದ ಅಧಿಕಾರಿಗಳಿಗೆ ಹಾಗೂ ಆಡಳಿತದವರಿಗೆ ಹೆಚ್ಚಿನ ಆದಾಯ ಸಿಗುವುದರಿಂದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಪ್ರಯತ್ನ ನಡೆಯುತ್ತಿಲ್ಲ ಎನ್ನಲಾಗಿದೆ. ಕೆಲವು ಕಡೆ ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ಸಿಬ್ಬಂದಿ ಜಾಗ್ರತೆ ವಹಿಸುತ್ತಿಲ್ಲ. ಪ್ರತಿವರ್ಷ ಬೇಸಗೆ ಸಂದರ್ಭ ನೀರಿನ ಸಮಸ್ಯೆ ಮಾಮೂಲಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತ ಬರಲಾಗುತ್ತಿದೆ. ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಶಾಂಭವಿ ನದಿಗೆ ಅಣೆಕಟ್ಟು ನಿರ್ಮಿಸಿ ಅದರ ಮೂಲಕ ನೀರನ್ನು ಸಂಗ್ರಹಿಸಿ ಸರಬರಾಜು ಮಾಡುವ ವ್ಯವಸ್ಥೆ ಮಾಡಿದರೆ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲು ಸಾಧ್ಯವಿದೆ. ಕಿನ್ನಿಗೋಳಿ ಹಾಗೂ ಅಸುಪಾಸಿನ ಗ್ರಾಮಗಳಿಗೆ ಈಗಾಗಲೇ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು ಪದವು ಬಳಿ ಬೃಹತ್ ಓವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣವಾಗುತ್ತಿದ್ದು, ಸಂಕಲಕರಿಯದ ಬಳಿ ಶಾಂಭವಿ ನದಿಗೆ ಅಣೆಕಟ್ಟು ನಿರ್ಮಿಸಿ ನೀರು ಸರಬರಾಜು ಮಾಡುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಗತಿಯಲ್ಲಿದೆ. ಅದೇ ಮಾದರಿಯಲ್ಲಿ ಮೂಲ್ಕಿಯಲ್ಲಿ ಯೋಜನೆ ರೂಪಿಸಬೇಕಾದ ಅಗತ್ಯವಿದೆ.


ಮೂಡುಬಿದಿರೆಯಲ್ಲೂ ಸಮಸ್ಯೆ
ಮೂಡುಬಿದಿರೆ ಪೇಟೆ ಮತ್ತು ಲಾಡಿ ಎಂಬಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ. ಪುಚ್ಚಾಡಿ ಅಣೆಕಟ್ಟಿನಲ್ಲಿ ನೀರು ಬರಿದಾಗುತ್ತಿದ್ದು, ಅಣೆಕಟ್ಟಿನ ಕೆಳಭಾಗದಲ್ಲಿ ಹೊಂಡ ಮಾಡಲಾಗಿದೆ. ಈಗ ಬೇಕಾದಷ್ಟು ನೀರಿನ ಒರತೆ ಕಂಡು ಬಂದಿದ್ದು, ಮುಂದಿನ 15 ದಿನಗಳಿಗೆ ಸಾಕಾಗುವಷ್ಟು ನೀರಿದೆ. ಇತರ ಪ್ರದೇಶಗಳಲ್ಲಿ ಅಲ್ಲಲ್ಲಿ ಬಾವಿ, ಬೋರ್‌ವೆಲ್‌ಗಳಿದ್ದು ಅವುಗಳ ಮೂಲಕ ನೀರು ಸರಬರಾಜು ನಡೆಯುತ್ತಿದೆ. ಲಾಡಿ ಪರಿಸರದಲ್ಲಿ ಹಾಗೂ ಪೇಟೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ವ್ಯವಸ್ಥೆ ಮಾಡಲಾಗಿದ್ದು, ಪಂಚಾಯಿತಿ ವತಿಯಿಂದ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement