ದಟ್ಟಾರಣ್ಯ ಪ್ರವೇಶಕ್ಕೆ ಇನ್ನೆರಡು ಕಿರು ವಿದ್ಯುತ್ ಯೋಜನೆ ಸಿದ್ಧ
ಬೆಳ್ತಂಗಡಿ: ಈಗಾಗಲೇ 5 ಕಿರು ವಿದ್ಯುತ್ ಯೋಜನೆಗಳು ಬೆಳ್ತಂಗಡಿ ತಾಲೂಕಿನಲ್ಲಿವೆ. ಇದೀಗ ಇನ್ನೆರಡು ಯೋಜನೆಗಳನ್ನು ದಟ್ಟಾರಣ್ಯದೊಳಗೆ ಪ್ರವೇಶಿಸಲು ಎಲ್ಲಾ ಸಿದ್ಧತೆಗಳನ್ನು ಸಂಬಂಧ ಪಟ್ಟವರು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಚಾರ್ಮಾಡಿ ಸನಿಹದ ಕಾಡಿನಲ್ಲಿ, ಪಶ್ಚಿಮ ಘಟ್ಟದ ತಪ್ಪಲಲ್ಲಿ ವಾಟೆ ಹಳ್ಳ ಮತ್ತು ಅಣಿಯೂರು ಹೊಳೆ ಎಂಬಲ್ಲಿ ಈ ಎರಡು ಯೋಜನೆಗಳ ಅನುಷ್ಠಾನ ಅಕ್ಟೋಬರ್ ತಿಂಗಳಲ್ಲಿ ಆಗಲಿದೆ. ಇಂತಹ ಯೋಜನೆಗಳು ಬಂದರೆ ತಾಲೂಕಿನ ವಿದ್ಯುತ್ ಸಮಸ್ಯೆ ನೀಗಬಲ್ಲುದು ಎಂದು ಹಲವರು ಲೆಕ್ಕ ಹಾಕಿದ್ದರೆ ಅದು ತಪ್ಪಾದೀತು. ಈ ಯೋಜನೆಗಳ ಉದ್ದೇಶ ಜನತೆಗೆ ವಿದ್ಯುತ್ ನೀಡುವುದು ಎಂದು ಅದಕ್ಕೆ ಸಂಬಂಧ ಪಟ್ಟವರ ಪ್ರಚಾರವಾಗಿದ್ದರೂ ಈ ಯೋಜನೆಗಳ ಅನುಷ್ಠಾನದ ಹಿಂದೆ ಕೋಟ್ಯಂತರ ರುಪಾಯಿಗಳನ್ನು ಬಾಚಿಕೊಳ್ಳುವುದೇ ಆಗಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.
ಕಳದೆ 10 ವರ್ಷಗಳಿಂದ ಕಿರು ವಿದ್ಯುತ್ ಯೋಜನಗಳ ಮೂಲಕ ಹಣ ಮಾಡುವ ದಂಧೆ ಎಗ್ಗಿಲ್ಲದೆ ಮುಂದುವರಿಯುತ್ತಿದ್ದು, ಇದೀಗ ಬೆಳ್ತಂಗಡಿ ತಾಲೂಕಿನಲ್ಲಿ ಎರಡು ಯೋಜನೆಗಳ ಮೂಲಕ ಮತ್ತೆ ಮುಂದುವರಿಯಲಿದೆ. ಇವುಗಳಿಂದ ಮತ್ತೆ ಅರಣ್ಯದಲ್ಲಿ ಬೃಹತ್ ಯಂತ್ರಗಳು ಗುಡುಗುಡಿಸಲಿವೆ. ಸುಮಾರು 25 ಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಸಮತಟ್ಟಾಗಲಿದೆ. ನೂರಾರು ಬೃಹತ್ ಅಪೂರ್ವ ಮರಗಳು ಧರಾಶಾಯಿಯಾಗಲಿವೆ. ಅವುಗಳಲ್ಲಿ ಕೆಲವು ಮರಗಳು ಕಳ್ಳದಾರಿಯವ ಮೂಲಕ ಮಾರಾಟವಾದರೆ ಇನ್ನು ಕೆಲವು ಮಣ್ಣಿನೊಳಗೆ ಹುದುಗಿ ಹೋಗಲಿವೆ. ಈ ಹಿಂದೆ ಆದ ಯೋಜನೆಗಳಲ್ಲಿ ಇದೇ ಆಗಿರುವುದು ಕಂಡು ಬಂದಿದೆ. ಅಲ್ಲಿನ ಸರಾಗವಾಗಿ ಹರಿಯುವ ಹಳ್ಳದ ನೀರಿಗೆ ತಡೆಯಾಗಲಿದೆ. ಪ್ರಾಣಿ, ಪಕ್ಷಿ ಸಂಕುಲಗಳು ಬದುಕು ಅಪಾಯದ ಸ್ಥಿತಿಗೆ ಬರಲಿದೆ. ಪ್ರಸ್ತಾವಿತ ಯೋಜನೆಗಳು ಅನುಷ್ಠಾನಗೊಳ್ಳುವ ಸ್ಥಳ ನಿತ್ಯಹರಿದ್ವರ್ಣದ ಕಾಡಾಗಿರುವುದು ಮಾತ್ರವಲ್ಲದೆ ಆನೆಗಳ ಕಾರಿಡಾರ್ ಕೂಡ ಆಗಿದೆ. ಅಕ್ಟೋಬರ್ನಿಂದ ಆನೆಗಳು ತಮ್ಮ ನಿಗದಿತ ಜಾಗವನ್ನು ಬಿಟ್ಟು ಹಳ್ಳಿಗಳತ್ತ ದೌಡಾಯಿಸಲಿವೆ.
ಪ್ರಸ್ತಾವಿತ ಎರಡು ಯೋಜನೆಗಳಿಗೆ ಅರಣ್ಯ ಇಲಾಖೆಯ ವಿರೋಧವಿದ್ದರೂ ಕಂಪನಿ ಹಿಂಬಾಗಿಲಿನಿಂದ ಅರಣ್ಯ ಇಲಾಖೆಯಲ್ಲದೆ ಇನ್ನಿತರ ಹಲವಾರು ಇಲಾಖೆಗಳ ಅನುಮತಿಯನ್ನು ಪಡೆಯುವ ಹಂತಕ್ಕೆ ತಲುಪಿದೆ. ಯೋಜನೆಗೆ ಬೇಕಾದ ಅಧಿಕಾರಿಗಳ ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಅಂತೂ ಪಶ್ಚಿಮ ಘಟ್ಟದ ಜೀವವೈವಿಧ್ಯತೆಗೆ ತೊಂದರೆಯಾಗುವ ಎಲ್ಲಾ ಲಕ್ಷಣ ಗೋಚರಿಸಿದೆ.