ಸುಳ್ಯದಲ್ಲಿ ಹನಿ ನೀರಿಗೂ ಹಾಹಾಕಾರ
ದುರ್ಗಾಕುಮಾರ್ ನಾಯರ್ಕೆರೆ
ಸುಳ್ಯ: ತಾಲೂಕಿನ ಹಲವೆಡೆ ತುಂತುರು ನೀರಿಗೂ ಆಸೆಗಣ್ಣಿಂದ ನೋಡುವಷ್ಟು, ಜಲ ಕ್ಷಾಮದ ಹಾಡು ಕೇಳುವಷ್ಟು ಈ ಬಾರಿ ಸಮಸ್ಯೆ ಭಯಾನಕವಾಗಿದೆ.
ಬಹುತೇಕ ಕಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪಂಜದಲ್ಲಿ ಟ್ಯಾಂಕರ್ನಲ್ಲಿ ನೀರು ಪೂರೈಸಬೇಕಾದ ಪರಿಸ್ಥಿತಿ ತಲೆದೋರಿದೆ.
ಹಾಹಾಕಾರ: ಹಿಂದೆಂದೂ ಕೇಳರಿಯದ ನೀರಿನ ಸಮಸ್ಯೆ ತಾಲೂಕಿನಾದ್ಯಂತ ಕಾಡುತ್ತಿದ್ದು, ನಾಗರಿಕರು ಕುಡಿಯುವ ನೀರಿಗೂ ತತ್ತರಿಸುವ ಪರಿಸ್ಥಿತಿ ಕಂಡುಬಂದಿದೆ. ಕೃಷಿ, ತೋಟಗಳಿಗೂ ನೀರಿಲ್ಲ. ಮಳೆ ಬರುವ ತನಕ ಕುಡಿಯಲಿಕ್ಕಾದರೂ ನೀರಿರಲಿ ಎಂಬುದು ಕೃಷಿಕರ ಅಭಿಪ್ರಾಯ.
ಜಾಲ್ಸೂರು ಗ್ರಾಮದ ಪಿಲಿಕೋಡಿಯಲ್ಲಿ ಎಲ್ಲ ಬಾವಿಗಳೂ ಬತ್ತಿ ಹೋಗಿವೆ. ಆದರೂ ಈವರಗೆ ಪಂಚಾಯಿತಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಊರವರು ದೂರಿದ್ದಾರೆ.
ಪಂಜದಲ್ಲಿ ಬಾರೀ ಸಮಸ್ಯೆ: ಗ್ರಾಮೀಣ ಪ್ರದೇಶವಾದ ಪಂಜದಲ್ಲಿ ನೇರ ನೀರಿನ ಸಂಪರ್ಕಗಳಿಲ್ಲದಿದ್ದರೂ ಕೊಳವೆ ಬಾವಿ, ಜಾಕ್ವೆಲ್ ನೀರುಗಳ ಸಂಪರ್ಕವನ್ನು ಆಶ್ರಯಿಸಿದ್ದ ಪಂಚಾಯಿತಿ ಪರಿಸರದ ಜನತೆಗೆ ನೀರಿನಾಶ್ರಯವನ್ನು ಒದಗಿಸುತ್ತಿದ್ದ ಬೋರ್ವೆಲ್ಗಳಲ್ಲಿ ನೀರಿನ ಕೊರತೆ, ಮಳೆಯಿಲ್ಲದೆ ಬತ್ತಿದ ನದಿಗಳು, ಅಸಮರ್ಪಕ ಯೋಜನೆಗಳು, ಕೈಕೊಡುವ ವಿದ್ಯುತ್ ನೀರಿನ ಕೊರತೆಗೆ ಮೂಲ ಕಾರಣಗಳು. ಪೇಟೆಯಲ್ಲೇ ಮನೆ ಮಾಡಿಕೊಂಡು ಮೂರು ದಿನಕ್ಕೊಮ್ಮೆಯೂ ನೀರು ಬಾರದೆ ಕುಟುಂಬಗಳು ಪರದಾಡುತ್ತಿವೆ. ನೀರಿಲ್ಲದೆ ಹೋಟೆಲ್ ಉದ್ಯಮಗಳು ಆಗಾಗ ಅಘೋಷಿತ ಬಂದ್ ಆಚರಿಸುತ್ತಿದ್ದು ಇದನ್ನೇ ಆಶ್ರಯಿಸಿದ್ದ ಜನತೆ ಕಕ್ಕಾಬಿಕ್ಕಿಯಾಗಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಮಳೆಯ ಕೊರತೆ ಮೂಲ ಕಾರಣವಾಗಿದ್ದರೂ, ಸಂಬಂಧಿಸಿದ ಆಡಳಿತ ಯಂತ್ರದ ನಿಷ್ಕ್ರಿಯತೆಯೂ ಎದ್ದು ಕಾಣುತ್ತಿದೆ.
ನೀರಿನ ಮೂಲಗಳು: ಕೆಮ್ಮೂರಿನಲ್ಲಿ ನಿರ್ಮಿಸಿದ್ದ ಬೋರ್ವೆಲ್ನಲ್ಲಿ ಹಿಂದೆ ಅತ್ಯಧಿಕ ಜಲಾಶ್ರಯವಿದ್ದು ಇತ್ತೀಚಿಗೆ ನೀರಿನ ಕೊರತೆ ಉಂಟಾಗಿದೆ. ಜತೆಗೆ ಸಮರ್ಪಕ ಯಂತ್ರಗಳ ಬಳಕೆಯೂ ಇಲ್ಲದೆ ನೀರು ಪೂರೈಕೆಗಳಲ್ಲಿ ಆಗಾಗ್ಗೆ ಚ್ಯುತಿ ಉಂಟಾಗುತ್ತಿದೆ. ಇರುವ ನೀರನ್ನು ಮೇಲೆತ್ತಲೂ ವಿದ್ಯುತ್ ಸಮಸ್ಯೆಯೂ ಎದುರಾಗುತ್ತಿದೆ.
ಪಂಜ ಹೊಳೆಯ ಜಾಕ್ವೆಲ್: ಎರಡು ವರ್ಷಗಳ ಹಿಂದೆ ಪಂಚಾಯತ್ ನೀರಿನ ಕೊರತೆಯನ್ನು ಮನಗಂಡು ಪಂಜ ಹೊಳೆಯಲ್ಲಿ ನಿರ್ಮಿಸಿದ್ದ ಜಾಕ್ವೆಲ್ ಪ್ರಸ್ತುತ ದಿನಗಳಲ್ಲಿ ಅತ್ಯಂತ ಉಪಯೋಗಕಾರಿ ನೀರಿನಾಶ್ರಯವಾಗಿದ್ದು ಅದು ಕೂಡ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಆದಾಗ್ಯೂ ಸದ್ಯದ ಪರಿಸ್ಥಿತಿಗೆ ಅದೇ ಜೀವ ನದಿಯಾಗಿದೆ.
ಪ್ರಸ್ತುತ ಜಿಲ್ಲಾ ಪಂಚಾಯಿತಿ ಅನುದಾನದ ಮೂಲಕ ಕುಮಾರಧಾರೆ ನದಿಗೆ ಪುಳಿಕುಕ್ಕು ಎಂಬಲ್ಲಿ ಹೊಸ ಜಾಕ್ವೆಲ್ ನಿರ್ಮಾಣದ ಅನುದಾನ ಮಂಜೂರುಗೊಂಡು ಒಂದೂವರೆ ವರ್ಷ ಕಳೆದರೂ ಆಡಳಿತ ಯಂತ್ರ ಹಾಗೂ ಗುತ್ತಿಗೆದಾರರ ನಿಧಾನಗತಿಯಿಂದ ಈ ಕ್ಲಿಷ್ಟ ಪರಿಸ್ಥಿತಿಯಲ್ಲೂ ಕಾಮಗಾರಿ ಅಭಿವೃದ್ಧಿಯ ಹಂತದಲ್ಲೇ ಇದೆ.
ಜಲ ಯೋಧರು: ಇಷ್ಟೆಲ್ಲಾ ನೀರಿನ ಕೊರತೆ ಕಂಡು ಬಂದಾಗ ಜನರ ಸಮಸ್ಯೆಗೆ ನೇರ ಸ್ಪಂದಿಸುವ ಮನಸ್ಥಿತಿ ಪಂಚಾಯಿತಿ ಸದಸ್ಯ ಲೋಕೇಶ್ ಬರೆಮೇಲು ಅವರದ್ದು. ಪಂಚಾಯತಿಯ ವಿರೋಧ ಪಕ್ಷದಲ್ಲಿ ಇವರಿದ್ದರೂ, ಪಂಚಾಯತಿಯ ನಿಷ್ಕ್ರಿಯತೆಯನ್ನೇ ಎತ್ತಿ ತೋರಿಸದೆ ರಾಜಕೀಯ ರಹಿತವಾಗಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಜಲಕ್ಷಾಮದಿಂದ ತತ್ತರಿಸುವ ಜನತೆಗೆ ತಮ್ಮ ಸ್ವಂತ ಖರ್ಚಿನಲ್ಲೇ ಟ್ಯಾಂಕರ್ ಮೂಲಕ ತಮ್ಮದೇ ಬೋರ್ವೆಲ್ನಿಂದ ನೀರು ಪೂರೈಸುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.
ಅಮರಮುಡ್ನೂರು ಗ್ರಾಮದ ಕುಳ್ಳಾಜೆ ಎಂಬಲ್ಲಿ ನೀರಿನ ಸಮಸ್ಯೆ ತಲೆದೋರಿದಾಗ ಗ್ರಾಪಂ ಮಾಜಿ ಸದಸ್ಯ ಅಶೋಕ್ ಅವರು ತಮ್ಮ ಓಮ್ನಿ ಮೂಲಕ ನೀರು ಪೂರೈಸಿದ್ದನ್ನು 'ಕನ್ನಡಪ್ರಭ' ವರದಿ ಮಾಡಿತ್ತು.