ಸೋಲನ್ನು ಸವಾಲಾಗಿ ಸ್ವೀಕರಿಸಿ: ಕೋಟ
ಮಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಜನಪರ ಕೆಲಸಗಳು ಮತ್ತು ಅಭಿವೃದ್ಧಿ ಕಾರ್ಯವನ್ನು ಗುರುತಿಸದೆ ಪಕ್ಷದಲ್ಲಿ ನಡೆದಿರುವ ಗೊಂದಲ ಹಾಗೂ ಕಾಂಗ್ರೆಸ್ನ ಅಪಪ್ರಚಾರದಿಂದ ಪಕ್ಷಕ್ಕೆ ಸೋಲಾಗಿದೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಆಗಿರುವ ತಪ್ಪುಗಳ ಬಗ್ಗೆ ಅವಲೋಕನ ಮಾಡಿಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟನಾತ್ಮಕವಾಗಿ ಮತ್ತು ಸರ್ಕಾರ ಜನವಿರೋಧಿ ಆಡಳಿತ ನಡೆಸಿದಲ್ಲಿ ಅದರ ವಿರುದ್ಧ ಹೋರಾಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಆತ್ಮಾವಲೋಕನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಪಕ್ಷ ಮುಂದೆ ಸಾಮಾನ್ಯ ಸದಸ್ಯತ್ವ, ಸಕ್ರಿಯ ಸದಸ್ಯತ್ವ ಹಾಗೂ ಮೇ 27ರಂದು ದೇಶವ್ಯಾಪಿ ಯುಪಿಎ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ರಾಷ್ಟ್ರೀಯ ಸುರಕ್ಷೆ ವಿಷಯಗಳ ಮೇಲೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಜೈಲ್ಭರೋ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಕಳ ಶಾಸಕ, ಯುವಮೋರ್ಚಾ ರಾಜ್ಯಾಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಸೋಲನ್ನು ಸವಾಲಾಗಿ ಸ್ವೀಕರಿಸಿ ಮತದಾರರ ಸೇರ್ಪಡೆ, ಜನಸಾಮಾನ್ಯರ ತೊಂದರೆಗೆ ಸ್ಪಂದಿಸುವ ಮೂಲಕ ಬೂತ್ ಮಟ್ಟದ ಕಾರ್ಯಕರ್ತರನ್ನು ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಲು ಸಿದ್ಧರಾಗಬೇಕು. ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಅಧಿಕಾರ ದರ್ಪ ತೋರಿಸಿದರೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್ ನೂತನ ಶಾಸಕರನ್ನು ಅಭಿನಂದಿಸಿದರು. ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಅಧ್ಯಕ್ಷತೆ ವಹಿಸಿದರು. ಶಾಸಕ ಅಂಗಾರ, ಸಂಸದ, ರಾಜ್ಯ ಉಪಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸುಲೋಚನಾ ಭಟ್, ಸಂಜೀವ ಮಠಂದೂರು, ದೇವದಾಸ್ ಶೆಟ್ಟಿ ಹಾಜರಿದ್ದರು.