ಕೃಷ್ಣ ಮಠ, ಗೋಕರ್ಣ ದೇಗುಲ ಸರ್ಕಾರ ವಶಪಡಿಸಿದರೆ ಹೋರಾಟ: ಕಟೀಲ್
ಮಂಗಳೂರು: ಉಡುಪಿ ಕೃಷ್ಣ ಮಠ ಮತ್ತು ಗೋಕರ್ಣ ದೇಗುಲವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಜನರ ಧಾರ್ಮಿಕ ಭಾವನೆ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಠಗಳಿಗೆ ಅದರದ್ದೇ ಆದ ಪರಂಪರೆ ಇದೆ. ಸಾಂಪ್ರದಾಯಿಕ ಪೂಜಾ ಕ್ರಮಗಳನ್ನು ಅನುಸರಿಸುತ್ತಾ ಬರಲಾಗುತ್ತಿದೆ. ಇದನ್ನು ಸರ್ಕಾರೀಕರಣ ಮಾಡುವ ಮೂಲಕ ಗೊಂದಲ ಸೃಷ್ಟಿ ಮಾಡುವುದು ಸರಿ ಅಲ್ಲ. ಯಾರದೇ ಧಾರ್ಮಿಕ ಭಾವನೆಗೆ ಮಠದ ಪರಂಪರಗೆ ಧಕ್ಕೆ ತರುವ ಕೆಲಸಕ್ಕೆ ಸರ್ಕಾರ ಕೈ ಹಾಕಬಾರದು. ಈ ರೀತಿ ಮಾಡಿದರೆ ಇದರ ವಿರುದ್ಧ ಜನ ಜಾಗೃತಿ ಕೆಲಸಕ್ಕೆ ಬಿಜೆಪಿ ಮುಂದಾಗಲಿದೆ ಎಂದು ನಳಿನ್ ಎಚ್ಚರಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಹೊಸ ತಾಲೂಕು ರಚಿಸಲು ಮುಂದಾಗುವ ಮೂಲಕ ಆ ಭಾಗದ ಜನರ ಕನಸು ನನಸು ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರ ಏಕಾಏಕಿ ಪ್ರಸ್ತಾಪ ರದ್ದುಗೊಳಿಸಿರುವುದು ಜನವಿರೋಧಿ ಕ್ರಮ. ಇದರ ವಿರುದ್ಧವೂ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಕಟೀಲ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.