ಬೆಳ್ತಂಗಡಿಯಲ್ಲಿ ಅಂಚೆ ಚೀಟಿ ಕೊರತೆ: ಸಂಸ್ಥೆಗಳ ಪರದಾಟ
ಬೆಳ್ತಂಗಡಿ: ಅಂಚೆ ಚೀಟಿಗಳ ಕೊರತೆಯಿಂದ ಸಾರ್ವಜನಿಕರು, ಸಂಘ ಸಂಸ್ಥೆಗಳು ಪರದಾಡುವಂತಹ ಸ್ಥಿತಿ ತಾಲೂಕಿನಲ್ಲಿ ಉಂಟಾಗಿದೆ.
ಅಂಚೆ ಕಚೇರಿಗಳಿಗೆ ಹೋದರೆ ಅಲ್ಲಿ ಒಂದು, ಎರಡು, ಮೂರು, ನಾಲ್ಕು ಮತ್ತು ಐದು ರುಪಾಯಿ ಮುಖ ಬೆಲೆಯ ಅಂಚೆ ಚೀಟಿಗಳ ಸಂಗ್ರಹವೇ ಇರುವುದಿಲ್ಲ. ಹತ್ತು ಮತ್ತು ಅದಕ್ಕಿಂತ ಹೆಚ್ಚಿನ ಮುಖ ಬೆಲೆಯ ಚೀಟಿಗಳು ಮಾತ್ರ ಇವೆ ಎಂದು ಕಚೇರಿ ಸಿಬ್ಬಂದಿ ಹೇಳುತ್ತಾರೆ. ಈ ಸ್ಥಿತಿ ಸುಮಾರು ಒಂದು ತಿಂಗಳಿನಿಂದ ಇದೆ. ಈ ರೀತಿಯ ಕೊರತೆ ಯಾಕೆ ಎಂದು ಕೇಳಿದರೆ ಕಚೇರಿ ಪ್ರಮುಖರಿಗೂ ತಿಳಿದಿರುವುದಿಲ್ಲ. ಇನ್ನು ಫ್ರಾಂಕಿಂಗ್ ಮಾಡಬಹುದಲ್ಲಾ ಎಂದು ಕೇಳಿದರೆ ಆ ಯಂತ್ರ ನಮ್ಮಲ್ಲಿ ಇಲ್ಲ. ಅದು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಇದೆ. ಪತ್ರಗಳ ಸಂಖ್ಯೆ ದೊಡ್ಡದಿದ್ದರೆ ದನ್ನು ಮಂಗಳೂರಿಗೆ ಕಳುಹಿಸುವ ಏರ್ಪಾಡು ಮಾಡುತ್ತೇವೆ. ಅಲ್ಲಿ ಫ್ರಾಂಕಿಂಗ್ ಮಾಡಲಾಗುತ್ತದೆ ಎಂದು ಸಿಬ್ಬಂದಿ ಉತ್ತರಿಸುತ್ತಾರೆ. ಮೊದಮೊದಲು ರು. 5 ಅಂಚೆ ಚೀಟಿಗಳನ್ನು ಕೇಳಿದರೆ ಅದರ ಬದಲು ರು. 2 ರೂ.ಗಳ ಮತ್ತು ಒಂದು ರುಪಾಯಿಯ ಒಂದು ಚೀಟಿಗಳನ್ನು ಕೊಡುತ್ತಿದ್ದರು. ಆದರೆ ಅದರ ಸಂಗ್ರಹವೂ ಮುಗಿದಿದ್ದು ಇದರಿಂದ ಜಾತ್ರೆಯ, ಸಂಘ, ಸಂಸ್ಥೆಗಳ ಕಾರ್ಯಕ್ರಮಗಳ ಆಮಂತ್ರಣಗಳನ್ನು ಕಳುಹಿಸುವವರು, ಮದುವೆ ಕಾಗದಗಳನ್ನು ಕಳುಹಿಸುವವರು ಭಾರೀ ತೊಂದರೆ ಅನುಭವಿಸುವಂತಾಗಿದೆ.