ಉಳ್ಳಾಲದಲ್ಲಿ ಟ್ಯಾಂಕರ್ ನೀರು ಸರಬರಾಜು
ಮಂಗಳೂರು: ಉಳ್ಳಾಲ ಪುರಸಭೆಯ 27 ವಾರ್ಡಿನ ಜನತೆ ನೀರಿಗಾಗಿ ಜನವರಿ ತಿಂಗಳಿನಿಂದ ಪರದಾಡುತ್ತಿದ್ದಾರೆ. ನೀರಿನ ಅಭಾವವನ್ನು ಖಾಸಗಿ ನೀರು ಸರಬರಾಜು ಕಂಪನಿಯಿಂದ ಪೂರೈಸಲಾಗುತ್ತಿದೆ. ಪ್ರತಿ ವರ್ಷದಂತೆ ಉಳ್ಳಾಲ ದರ್ಗಾದಿಂದ ವಿವಿಧ ಕಡೆಗಳಿಗೆ ನೀರು ಪೂರೈಸಲಾಗುತ್ತಿದೆ.
ಉಳ್ಳಾಲ ಪುರಸಭೆ: ಮುಕ್ಕಚೇರಿ, ಉಳಿಯ, ಅಲೇಕಳ, ಕಕ್ಕೆತೋಟ, ಪಾಂಡೆಲ್ಪಕ್ಕ, ಮಾರಂಗಟ್ಟಲೆ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಉಂಟಾಗಿದೆ. ಪ್ರತಿ ವರ್ಷದಂತೆ ಉಳ್ಳಾಲ ಪುರಸಭೆ ಖಾಸಗಿ ಟ್ಯಾಂಕರ್ಗಳಿಗೆ ಗುತ್ತಿಗೆ ನೀಡಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮ ಲೆಕ್ಕಿಗ ಪೂರ್ಣಚಂದ್ರ ತೇಜಸ್ವಿ ಹೇಳಿದ್ದಾರೆ.
ಕೊಣಾಜೆ ಗ್ರಾಮ ಪಂಚಾಯಿತಿ: ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಪ್ರದೇಶದಲ್ಲಿ ಜನವರಿ ತಿಂಗಳಿನಲ್ಲಿ ನೀರಿಗಾಗಿ ಬೋರುವೆಲ್ ಕೊರೆಸಲಾಗಿತ್ತು. ಆದರೆ ಇದರಲ್ಲಿ ಕಳೆದ 15 ದಿನದಿಂದ ನೀರು ಬರಿದಾಗಿದ್ದು, ಜನ ಪರದಾಡುವಂತಾಗಿದೆ.
ಬರುವ ಪ್ರದೇಶ ಗ್ರಾಮಸ್ಥರು ಬೆಳ್ಮ ಪ್ರದೇಶದ ಖಾಸಗಿ ಟ್ಯಾಂಕರ್ನಿಂದ ನೀರು ಪಡೆಯುತ್ತಿದ್ದಾರೆ. ಆದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ಕಡಿಮೆ ಇರುವುದರಿಂದ ನೀರು ಸರಬರಾಜು ಮಾಡಲಾಗುತ್ತಿಲ್ಲ. ಎಲ್ಲದ್ದಕ್ಕೂ ಸರ್ಕಾರದಿಂದ ಅನುಮತಿ ಬರಬೇಕಲ್ಲ ಎನ್ನುತ್ತಾರೆ ಕೊಣಾಜೆ ಗ್ರಾಮ ಪಂಚಾಯಿತಿ ಅಧಿಕಾರಿ.
ಸೋಮೇಶ್ವರ ಗ್ರಾಮ ಪಂಚಾಯಿತಿ: ಸೋಮೇಶ್ವರ ಪಂಚಾಯಿತಿ ವ್ಯಾಪ್ತಿಯ 10 ಪ್ರದೇಶದಲ್ಲಿ ಜನವರಿ ತಿಂಗಳಿನಿಂದ ನೀರಿನ ಸಮಸ್ಯೆ ಉದ್ಬವಿಸಿದ್ದು, ಜನ ಖಾಸಗಿ ಟ್ಯಾಂಕರ್ ನೀರನ್ನು ಆಶ್ರಯಿಸಿದ್ದಾರೆ. ಜನವರಿ ತಿಂಗಳಿನಲ್ಲಿಯೇ ಬೋರುವೆಲ್ನಲ್ಲಿ ನೀರು ಬರಿದಾಗಿದ್ದು, ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.
ಕುಂಪಲ, ಪೀಳಾರು, ಸಂಕೋಲಿಗೆ, ಕಾದಂಗರಗುಡ್ಡೆ, ಸೋಮನಾಥ ಬಡಾವಣೆ, ಮೂರುಕಟ್ಟೆ, ಕೃಷ್ಣನಗರ, ಆಶ್ರಯ ಕಾಲೋನಿ, ಪ್ರಕಾಶ ನಗರ, ಲಕ್ಷ್ಮಿಗುಡ್ಡೆ ಪ್ರದೇಶಗಳಿಗೆ ವಾರಕ್ಕೆ ನಾಲ್ಕು ಬಾರಿ ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗುತ್ತಿದೆ.
'ಪಂಚಾಯಿತಿಯು 6 ಸಾವಿರ ಲೀಟರ್ ನೀರಿನ ಒಂದು ಟ್ಯಾಂಕರ್ಗೆ ರು. 1 ಸಾವಿರ ಹಣ ನೀಡುತ್ತಿದೆ. ಪಂಚಾಯಿತಿ ವತಿಯಿಂದ ಟ್ಯಾಂಕರ್ ಇಲ್ಲ.
ಆದ್ದರಿಂದ ಖಾಸಗಿ ಟ್ಯಾಂಕರ್ಗೆ ಹಣಕೊಟ್ಟು ಪ್ರದೇಶಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ' ಎಂದು ಸೋಮೇಶ್ವರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್.
ಬೆಳ್ಮ, ಹರೇಕಳ, ಪಾವೂರು ಗ್ರಾಮ ಪಂಚಾಯಿತಿನಲ್ಲಿಯೂ ನೀರಿನ ಸಮಸ್ಯೆ ಉದ್ಬವಿಸಿದ್ದು, ಜನರು ಬಾವಿ, ಬೋರುವೆಲ್, ಟ್ಯಾಂಕರ್ ನೀರು ಬಳಸಿಕೊಳ್ಳುತ್ತಿದ್ದಾರೆ.
'ಉಳ್ಳಾಲ ನಗರಸಭೆ ಮತ್ತು ಮಂಗಳೂರು ಪಾಲಿಕೆಯ ಒಪ್ಪಂದದ ಪ್ರಕಾರ ತುಂಬೆ ವೆಂಟೆಂಡ್ ಡ್ಯಾಂನಿಂದ ಪಡೀಲ್-ರಾವಳಕಟ್ಟೆ ಪೈಪ್ಲೈನ್ ಮೂಲಕ 3 ಎಂಎಲ್ಡಿ(ಅಂದರೆ 30ಲಕ್ಷ ಲೀಟರ್ ನೀರು) ನೀರು ಪೂರೈಸಬೇಕು. ಆದರೆ ಬೇಸಿಗೆ ಸಮಯದಲ್ಲಿ 1 ಎಂಎಲ್ಡಿ ನೀರು ಕೂಡ ಸರಬರಾಜಾಗುತ್ತಿಲ್ಲ. ಇದು ಕೇವಲ ನಾಲ್ಕು ವಾರ್ಡಿನ ಜನರಿಗೂ ಸಾಕಾಗುತ್ತಿಲ್ಲ' ಎನ್ನುತ್ತಾರೆ ಉಳ್ಳಾಲ ಪುರಸಭೆ ಸದಸ್ಯ ಮೊಹಮ್ಮದ್ ಮುಕ್ಕಚೇರಿ.
ವಜ್ರಾಕ್ಷಿ ಬಂಟ್ವಾಳ