ಕರಾವಳಿ ಪ್ರದೇಶದಲ್ಲಿ 5 ಲಕ್ಷ ಕಾಂಡ್ಲಾ ಗಿಡ ನಾಟಿ
ಮಂಗಳೂರು: ಕರಾವಳಿ ಭಾಗದ ನದಿ ಸಮುದ್ರಕ್ಕೆ ಸೇರುವ ಪ್ರದೇಶದಲ್ಲಿ ಕಡಲ್ಕೊರೆತ ತಡೆಗಟ್ಟಲು ಕಳೆದ 3 ವರ್ಷದಲ್ಲಿ ಸುಮಾರು 5 ಲಕ್ಷ ಕಾಂಡ್ಲಾ ಗಿಡಗಳನ್ನು ನೆಡಲಾಗಿದೆ.
ಗುರುಪುರ, ಬೆಂಗ್ರೆ, ನೇತ್ರಾವತಿ, ಅಳಿವೆ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದ್ದು, ಸೊಂಪಾಗಿ ಬೆಳೆಯುತ್ತಿದೆ. ಬ್ರಹ್ಮಾವರದ ಕರಾವಳಿ ತೀರದಲ್ಲಿ ಗಿಡಗಳು ಬೆಳೆಯುತ್ತಿದ್ದು, ಅಲ್ಲಿಂದ ಗಿಡಗಳನ್ನು ತರಲಾಗುತ್ತಿದೆ.
ಈ ಗಿಡಗಳು ಮಣ್ಣು ಸವೆತವನ್ನು ನಿಯಂತ್ರಿಸುವುದಲ್ಲದೆ, ಮೀನುಗಳಿಗೆ ಮೊಟ್ಟೆಗಳನ್ನು ಇಡಲು ಸೂಕ್ತ ಸ್ಥಳಾವಕಾಶ ಒದಗಿಸುತ್ತದೆ. ಕಾಂಡ್ಲಾದಲ್ಲಿ ಸಂಗ್ರಹವಾದ ಮಣ್ಣು ಉಪ್ಪು ನೀರು ಸಿಹಿ ನೀರಿಗೆ ಸೇರದಂತೆ ಸೋಸುವ ಕೆಲಸವನ್ನು ನಿರ್ವಹಿಸುತ್ತದೆ. ಜತೆಗೆ ಪರಿಸರ ಸಂರಕ್ಷಣೆ ನಿರ್ಮಾಣಗೊಳ್ಳುತ್ತದೆ ಎನ್ನುತ್ತಾರೆ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪದ್ಮನಾಭ ಗೌಡ.
ಗಿಡಗಳು ನೀರಿನಿಂದ ಮೇಲ್ಭಾಗದಲ್ಲಿ ಬೆಳೆದು, ಬೇರುಗಳ ಬೃಹತ್ ಕೋಷ್ಟಕವನ್ನು ನಿರ್ಮಾಣ ಮಾಡುತ್ತದೆ. ಇದರಿಂದ ಮಣ್ಣಿನ ಸೆಳೆದ ಕಡಿಮೆಯಾಗುತ್ತದೆ. 1 ಹೆಕ್ಟೇರ್ ಪ್ರದೇಶಕ್ಕೆ ಗಿಡ ನೆಡಲು ಸುಮಾರು ರು. 25ಸಾವಿರ ವೆಚ್ಚವಾಗುತ್ತದೆ. ನೇತ್ರಾವತಿ ತೀರದಲ್ಲಿ ಸುಮಾರು 15 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾಗಿಡ ನೆಡಲಾಗಿದೆ ಎಂದು ಪದ್ಮನಾಭ್ ಹೇಳುತ್ತಾರೆ.
ನೇತ್ರಾವತಿ ನದಿಯ ಪಕ್ಕದಲ್ಲಿ ಹೂಳು ತುಂಬಿರುವ ಮಣ್ಣಿನಲ್ಲಿ ಇವುಗಳನ್ನು ನೆಡಲಾಗಿದೆ. ನೀರಿನ ಇಳಿತ ಕಡಿಮೆಯಾಗಿ, ಮಣ್ಣಿನ ಮೇಲ್ಭಾಗ ಒಣಗಿರುವ ಸಮಯದಲ್ಲಿ ಗಿಡವನ್ನು ನೆಡಲಾಗುತ್ತದೆ.
ಕಾಂಡ್ಲಾವನ ಇಲಾಖೆಯಿಂದ ಗಿಡಗಳನ್ನು ನೆಡಲಾಗುತ್ತಿದ್ದು, ಮೀನುಗಾರರು ತಮ್ಮ ದೋಣಿಯನ್ನು ದಡಕ್ಕೆ ತರುವ ಸಂದರ್ಭ ಬಲೆಗಳನ್ನು ಎಳೆಯುವ ಸಂದರ್ಭ ಗಿಡಗಳು ಬೇರು ಸಮೇತ ಕಿತ್ತೋಗುತ್ತಿದ್ದವು. ಮೊಗವೀರ ಸಭಾದ ಮೂಲಕ ಮೀನುಗಾರರಿಗೆ ಇಲಾಖೆ ವತಿಯಿಂದ ಕಾಂಡ್ಲಾವನದ ಕುರಿತು ಮಾಹಿತಿ, ಜಾಗೃತಿ ಮೂಡಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಗಿಡಗಳು ಹಾಳಾಗದೆ ಚೆನ್ನಾಗಿ ಬೆಳೆದಿದೆ ಎಂದಿದ್ದಾರೆ. ಆ ಗಿಡಗಳು ಸಮೃದ್ಧವಾಗಿ ಬೆಳೆದು ನಿಲ್ಲಲು ಸುಮಾರು 2 ವರ್ಷಗಳೇ ಬೇಕು. ಈಗಾಗಲೇ ನೆಟ್ಟಿರುವ ಗಿಡಗಳ ಬದಿಯಲ್ಲಿ ತಂತಿಗಳನ್ನು ಕಟ್ಟಲಾಗಿದ್ದು, ಮೀನುಗಾರರು ಅಲ್ಲಿಗೆ ಹೋಗದಂತೆ ತಿಳಿಸಲಾಗಿದೆ. ಅಲ್ಲದೆ ಗಿಡ ನೆಟ್ಟಿರುವ ಕಡೆಯಲ್ಲಿ ದೋಣಿ ಮೂಲಕ ಗಸ್ತು ತಿರುಗಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ವಿಶ್ವವಿದ್ಯಾಲಯ ಸಾಗರ ಭೂ ವಿಜ್ಞಾನಿ ಡಾ. ಶಿವಣ್ಣ ಅವರ ಪ್ರಕಾರ, ಕಾಂಡ್ಲಾ ಗಿಡಗಳು ತಮ್ಮ ಬೇರಿನಲ್ಲಿ ಮಣ್ಣಿನ ಸಂಗ್ರಹವನ್ನು ನಿರ್ಮಿಸಿ ನೀರು ಕೊರೆಯದಂತೆ ತಡೆಗಟ್ಟುತ್ತದೆ. ನದಿ ಪ್ರದೇಶದಲ್ಲಿರುವ ಜನರು ತಮ್ಮ ಪ್ರದೇಶದಲ್ಲಿ ಬೋರ್ವೆಲ್ನ ಸಿಹಿ ನೀರಿಗೆ ಉಪ್ಪು ನೀರು ಸೇರದಂತೆ ತಡೆಗಟ್ಟುತ್ತದೆ. ನದಿ ನೀರಿಗೆ ಸಮುದ್ರ ನೀರು ಸೇರದಂತೆ ತಡೆಗಟ್ಟುತ್ತದೆ. ಆದ್ದರಿಂದ ಕರಾವಳಿ ಪ್ರದೇಶದಲ್ಲಿ ಕಾಂಡ್ಲಾ ಗಿಡಗಳ ಸಂರಕ್ಷಣೆ ಅಗತ್ಯವಿದೆ ಎಂದು ಹೇಳುತ್ತಾರೆ.
ವಜ್ರಾಕ್ಷಿ ಬಂಟ್ವಾಳ