ಕೊರಗ ಸಮುದಾಯ ವ್ಯಸನ ವಿಮುಕ್ತಿ ಶಿಬಿರ
ಉಡುಪಿ: ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕರ್ನಾಟಕ/ಕೇರಳ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ಇಲ್ಲಿನ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಗಳ ಜಂಟಿ ಆಶ್ರಯದಲ್ಲಿ 16ರಿಂದ 25ರವರೆಗೆ ನಡೆಯುತ್ತಿರುವ 8ನೇ ಕೊರಗ ಸಮುದಾಯದ ವ್ಯಸನ ವಿಮುಕ್ತಿ ಶಿಬಿರವನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದು ಶೈಕ್ಷಣಿಕವಾಗಿ ಹಿಂದುಳಿಕೆ ಹಾಗೂ ಮಾದಕ ವ್ಯಸನ ಕೊರಗ ಸಮುದಾಯದಲ್ಲಿ ಕಂಡುಬರುತ್ತಿರುವ ಬಹುಮುಖ್ಯ ಸಮಸ್ಯೆಯಾಗಿದೆ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಡಾ.ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಇಲಾಖೆಯ ವ್ಯವಸ್ಥಾಪಕ ವಿಶ್ವನಾಥ ಶೆಟ್ಟಿ ಹಾಗೂ ಒಕ್ಕೂಟ ಅಧ್ಯಕ್ಷೆ ಸುಶೀಲ ಕೊರಗ ನಾಡ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಡಾ.ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ರಾಜೇಂದ್ರ ಬೈಕಾಡಿ ಸ್ವಾಗತಿಸಿ, ಪವಿತ್ರ ವಂದಿಸಿದರು.