ಅಕ್ರಮ ಕೊಳವೆ ಬಾವಿ ನಿರ್ಮಾಣದಿಂದ ನೀರಿನ ಸಮಸ್ಯೆ
ಮೂಲ್ಕಿ: ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಪಂಜಿನಡ್ಕ- ಮೊಯಿಲೊಟ್ಟು ರಸ್ತೆಯಲ್ಲಿ ಖಾಸಗಿ ಜಾಗದ ನೀರು ಹರಿಯುವ ಕಿರು ಸೇತುವೆ ಕೆಳಗಡೆ ಪಂಚಾಯಿತಿ ವತಿಯಿಂದ ಆಕ್ರಮವಾಗಿ ಕೊಳವೆ ಬಾವಿಯನ್ನು ತೋಡಿದ್ದು ಇದರಿಂದ ಪರಿಸರದಲ್ಲಿರುವ ಸುಮಾರು 30 ಮನೆಗಳಿಗೆ ತೊಂದರೆಯಾಗಿದೆ. ಹತ್ತಿರದಲ್ಲಿರುವ ಬಾವಿಯ ನೀರು ಬತ್ತಿಹೋಗಿದ್ದು ಜನರಿಗೆ ಸಮಸ್ಯೆಯಾಗಿದೆ.
ಕಿಲ್ಪಾಡಿಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದು, ಚುನಾವಣೆ ಮುಗಿದ ಕೂಡಲೇ ನೂತನ ಕೊಳವೆ ಬಾವಿಯ ನಿರ್ಮಾಣ ಆಗಿದ್ದು, ನೀರನ್ನು ಸ್ಥಳೀಯರಿಗೆ ನೀಡದೆ ಮಟ್ಟು ಪರಿಸರಕ್ಕೆ ನೀಡುತ್ತಿದ್ದು ಜನರನ್ನು ರೊಚ್ಚಿಗೆಬ್ಬಿಸಿದೆ. ಕಳೆದ ಬಾರಿ ಸಮೀಪದಲ್ಲಿ ರಸ್ತೆಯ ಬದಿಯ ಚರಂಡಿಯಲ್ಲಿ ಕೊಳವೆ ಬಾವಿ ನಿರ್ಮಿಸಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯಾಗಿದ್ದು ನೀರು ಹರಿಯುವ ಮೋರಿಯ ಕೆಳಗಡೆ ಕೊಳವೆ ಬಾವಿ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಕೃತಕ ನೆರೆಯಾಗುವು ಸಾಧ್ಯತೆಯಿದೆ. ಹೀಗಾಗಿ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.