ಕಡಬ ತಾಲೂಕು ಮಾಡಿಯೇ ಸಿದ್ಧ: ಬ್ಲಾಕ್ ಕಾಂಗ್ರೆಸ್ ಸ್ಪಷ್ಟನೆ
ಉಪ್ಪಿನಂಗಡಿ: ಕಡಬವನ್ನು ತಾಲೂಕು ಕೇಂದ್ರವಾಗಿಸುವುದು ಕಡಬದ ಕಾಂಗ್ರೆಸ್‌ನ ಕರ್ತವ್ಯವಾಗಿದ್ದು, ತಾಲೂಕು ಮಾಡಿಯೇ ಸಿದ್ಧ. ಈ ಬಗ್ಗೆ ಜನತೆಗೆ ಯಾವುದೇ ಗೊಂದಲ ಬೇಡ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ. ವರ್ಗಿಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ತಾಲೂಕು ರಚನೆ ಕುರಿತು ರಾಜ್ಯ ಕಂದಾಯ ಇಲಾಖೆ ಸಚಿವರ ಹೇಳಿಕೆ ವಿರುದ್ಧ ಅಪಸ್ವರ ಎತ್ತಿರುವ ಬಿಜೆಪಿಯ ನಡೆ ರಾಜಕೀಯ ಪ್ರೇರಿತವಾಗಿದ್ದು, ಸಚಿವರ ಹೇಳಿಕೆಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದರಿಂದ ಜನತೆಯಲ್ಲಿ ಗೊಂದಲವೇರ್ಪಟ್ಟಿದೆ. ಕಡಬ ತಾಲೂಕು ಕೇಂದ್ರದ ವಿಚಾರದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಒತ್ತಡ ಹೇರಿ ಶೀಘ್ರ ಕಡಬವನ್ನು ತಾಲೂಕಿನ್ನಾಗಿಸುವ ಕಾರ್ಯವನ್ನು ಕಡಬ ಬ್ಲಾಕ್ ಕಾಂಗ್ರೆಸ್ ಮಾಡಲಿದೆ ಎಂದು ತಿಳಿಸಿದರು.
ಬಿಜೆಪಿ ಘೋಷಿಸಿದ ಎಲ್ಲ ತಾಲೂಕುಗಳನ್ನು ರಚಿಸಲು ಸಾಧ್ಯವಿಲ್ಲ. ಒಂದು ತಾಲೂಕು ಘೋಷಣೆಯಾಗಿ ಅನುಷ್ಠಾನವಾಗಬೇಕಾದರೆ ಕನಿಷ್ಠ ರು. ಇನ್ನೂರು ಕೋಟಿ ಅಗತ್ಯವಿದೆ. ಆದರೆ ಬಿಜೆಪಿ ಬಜೆಟ್‌ನಲ್ಲಿ ಕೇವಲ ರು. ಎರಡು ಕೋಟಿ ಇಟ್ಟು ಅವೈಜ್ಞಾನಿಕವಾಗಿ ತಾಲೂಕುಗಳನ್ನು ಘೋಷಿಸಿದೆ ಎಂದ ವರ್ಗಿಸ್, ಒಂದು ವೇಳೆ ಈ ಸರ್ಕಾರದ ಅವಧಿಯ ಒಳಗೆ ತಾಲೂಕು ರಚನೆಯಾಗದಿದ್ದರೆ ನಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋರಾಟಕ್ಕೆ ಧುಮುಕಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮನಮೋಹನ ಗೋಳ್ಯಾಡಿ, ಸುಧೀರ್ ಕುಮಾರ್ ಶೆಟ್ಟಿ, ಎಸ್. ಅಬ್ದುಲ್ ಖಾದರ್, ಎಚ್.ಕೆ. ಇಲ್ಯಾಸ್, ರಾಯ್ ಅಬ್ರಹಾಂ, ಯತೀಶ್ ಕುಮಾರ್ ಬಾನಡ್ಕ, ಫಝಲ್ ಕೋಡಿಂಬಾಳ, ಕೆ.ಎಂ. ಹನೀಫ್, ವಿಜಯಕುಮಾರ್ ರೈ, ಸುಖೇಶ್, ಧರಣೇಂದ್ರ ಜೈನ್, ಸಾವಿತ್ರಿ ಟಿ.ನಾಯ್ಕ್ ಮೊದಲಾದವರು ಇದ್ದರು.