ಪ್ರತ್ಯೇಕ ದುರಂತ, ಅಪಘಾತ: 7 ಸಾವು
ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರ ಸಾವು
ಮಣಿಪಾಲ: ಶಾಲೆಗೆ ರಜೆಯ ಮಜಾ ಇಬ್ಬರು ಎಳೆಯ ಮಕ್ಕಳ ಸಾವಿಗೆ ಕಾರಣವಾದ ಘಟನೆ ಇಲ್ಲಿನ ಕರ್ವಾಲು ಗ್ರಾಮದಲ್ಲಿ ನಡೆದಿದೆ. ಮೃತ ಮಕ್ಕಳು ದಿ. ಕೃಷ್ಣ ನಾಯಕ್ ಎಂಬವರ ಮಗ ಪ್ರತೀಕ್ (8) ಮತ್ತು ಮೋಹನ ನಾಯಕ್ ಎಂಬವರ ಮಗ ಕಾರ್ತೀಕ್ (6)
ಅವರಿಬ್ಬರೂ ಶನಿವಾರ ಮಧ್ಯಾಹ್ನ 12 ಗಂಟೆಗೆ ಕರ್ವಾಲು ಪ್ರಾಥಮಿಕ ಶಾಲೆಯ ಬಳಿ ಇರುವ ಹೊಳೆಗೆ ಸ್ನಾನಕ್ಕೆಂದು ಹೋಗಿದ್ದರು. ಆದರೆ, 3 ಗಂಟೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಮನೆಯವರು ನದಿಯ ಬಳಿಗೆ ಹೋಗಿ ನೋಡಿದಾಗಲೂ ಪತ್ತೆಯಾಗಲಿಲ್ಲ. ಅಲ್ಲೆ ಇದ್ದ ಬಟ್ಟೆಗಳನ್ನು ನೋಡಿ, ನದಿಯಲ್ಲಿ ಹುಡುಕಾಡಿದಾಗ ಇಬ್ಬರೂ ನೀರಿನೊಳಗೆ ಪತ್ತೆಯಾಗಿದ್ದಾರೆ. ತಕ್ಷಣ ಅವರಿಬ್ಬರನ್ನೂ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಮಕ್ಕಳಿಬ್ಬರೂ ಅದಾಗಲೇ ನೀರು ಕುಡಿದು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇಷ್ಟು ಚಿಕ್ಕ ಪ್ರಾಯದ ಇಬ್ಬರೇ ಮಕ್ಕಳು ನದಿಯಲ್ಲಿ ಸ್ನಾನಕ್ಕೆ ಹೋಗಿರುವುದು, ಅದಕ್ಕೆ ಮನೆಯವರು ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮಕ್ಕಳು ನೀರಲ್ಲಿ ಆಟವಾಡುತ್ತಾ ಆಕಸ್ಮಿಕವಾಗಿ ಮುಳುಗಿ ಮೇಲಕ್ಕೆ ಬರಲಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಕಾಂತ ನಾಯಕ್ ಎಂಬವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಮುಳುಗಿ ಯುವಕ ಸಾವು
ಕೋಟ: ಇಲ್ಲಿನ ಗುಂಡ್ಮಿ ಗ್ರಾಮದ ಬೆಳ್ಳಿಬೆಟ್ಟು ಎಂಬಲ್ಲಿ ಯುವಕನೊಬ್ಬ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರು ಗುರುರಾಜ್ (25), ಇಲ್ಲಿನ ನಿವಾಸಿ ಬಸವ ಪೂಜಾರಿ ಎಂಬವರ ತಮ್ಮ. ಈತ ಶುಕ್ರವಾರ ರಾತ್ರಿ ಚಿತ್ರಪಾಡಿ ಗ್ರಾಮದ ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಪ್ಪು: ಟ್ರಾನ್ಸ್ಫಾರ್ಮರ್ ಸ್ಪರ್ಶಿಸಿ ಬಾಲಕ ಸಾವು
ಮಂಗಳೂರು: ಚೆಂಡು ಹೆಕ್ಕಲು ಹೋಗಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಪರ್ಶಿಸಿ ಎಂಟು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ನಗರದ ಜೆಪ್ಪು ಕುಡ್ಪಾಡಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೃತಪಟ್ಟ ಬಾಲಕ ನದೀಮ್(8). ಅಬ್ದುಲ್ ಸತ್ತಾರ್ರ ಪುತ್ರನಾದ ಈತ ಕಂಕನಾಡಿ ಅರೇಬಿಕ್ ಸ್ಕೂಲ್ನ 3ನೇ ತರಗತಿ ವಿದ್ಯಾರ್ಥಿ. ಮನೆಯಲ್ಲಿ ಆಟವಾಡುತ್ತಿದ್ದಾಗ ಚೆಂಡು ಟ್ರಾನ್ಸ್ಫಾರ್ಮರ್ನಲ್ಲಿ ಸಿಕ್ಕಿಕೊಂಡಿತ್ತು. ಅದನ್ನು ಬಿಡಿಸಲು ನದೀಮ್ ಬೇಲಿ ದಾಟಿ ಕಟ್ಟೆ ಏರಿ ಟ್ರಾನ್ಸ್ಫಾರ್ಮರ್ನ ಬುಶ್ಗೆ ಕೈಹಾಕಿದ್ದ. ಟ್ರಾನ್ಸ್ಫಾರ್ಮರ್ನಲ್ಲಿ 11 ಕೆ.ವಿ. ವಿದ್ಯುತ್ ಪ್ರವಹಿಸುತ್ತಿತ್ತು ಎನ್ನಲಾಗಿದೆ. ಟ್ರಾನ್ಸ್ಫಾರ್ಮರ್ ಕೈಗೆಟಕುವಂತೆ ಇದ್ದಿದ್ದರಿಂದ ಬಾಲಕ ವಿದ್ಯುತ್ ಅಘಾತಕ್ಕೊಳಗಾಗಿದ್ದ. ಘಟನೆಯಲ್ಲಿ ಬಾಲಕನ ಕೈ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿತ್ತು.ಬಾಲಕನ ಕೈ ತುಂಡಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಫಲಕಾರಿಯಾಗದೆ ಮೃತಪಟ್ಟ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.
ಬಸ್-ಸ್ಕೂಟರ್ ಡಿಕ್ಕಿ; ಸವಾರರಿಬ್ಬರ ಸಾವು
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಪುತ್ತೂರು ಬೆಳ್ಳಾರೆ ರಸ್ತೆಯ ತಿಂಗಳಾಡಿ ಎಂಬಲ್ಲಿ ನಡೆದಿದೆ.
ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ಸವಾರ ಕೆಯ್ಯೂರು ಗ್ರಾಮದ ಕಟ್ಟತ್ತಾರು ಸಮೀಪದ ಅರೆಕ್ಕಿಲ ಬಂಗಾರುಗುಡ್ಡೆ ನಿವಾಸಿ ಮಹಮ್ಮದ್ (41) ಮತ್ತು ಹಿಂದೆ ಕೂತಿದ್ದ ಅರೆಕ್ಕಿಲ ನಿವಾಸಿ ಲಲಿತಾ ಅವರ ಪುತ್ರ ಕರುಣಾಕರ(18) ಮೃತರು.
ಕಟ್ಟತ್ತಾರಿನಿಂದ ಕುಂಬ್ರ ಕಡೆಗೆ ಮಹಮ್ಮದ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಪುತ್ತೂರು ಬೆಳ್ಳಾರೆ ರಸ್ತೆಯಲ್ಲಿನ ತಿಂಗಳಾಡಿಯಲ್ಲಿ ಮುಂದೆ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಬಸ್ಸಿಗೆ ಡಿಕ್ಕಿ ಹೊಡೆಯಿತು.
ಈ ಘಟನೆಯಲ್ಲಿ ಗಂಭೀರ ಗಾಯಗೊಂಡು ಚಿಂತಾಜಕ ಸ್ಥಿತಿಯಲ್ಲಿದ್ದ ಮಹಮ್ಮದ್ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಅಸುನೀಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕರುಣಾಕರ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಮ್ಮದ್ ಅವರ ಕುಟುಂಬ ನಿರ್ಗತಿಕವಾಗಿದೆ. ಈ ಹಿಂದೆ ಪತಿಯನ್ನು ಕಳೆದುಕೊಂಡು ಮಗನನ್ನೇ ಆಶ್ರಯಿಸಿದ್ದ ಲಿಲಿತಾ ಅವರು ಕರುಣಾಕರ ಅವರ ಸಾವಿನಿಂದ ಕಂಗಾಲಾಗಿದ್ದಾರೆ.
ರಿಕ್ಷಾ ಮಗುಚಿ ಚಾಲಕ ಸಾವು
ಪುತ್ತೂರು: ಪುತ್ತೂರು ಜಾತ್ರಾ ಉತ್ಸವದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ರಿಕ್ಷಾವೊಂದು ಬೆಳ್ಳಿಪ್ಪಾಡಿ ಸಮೀಪದಲ್ಲಿ ಮಗುಚಿ ಬಿದ್ದು ರಿಕ್ಷಾ ಚಾಲಕ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ಮಾನಡ್ಕ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ಮಗುಚಿ ಬಿದ್ದ ಪರಿಣಾಮ ರಿಕ್ಷಾದಡಿಯಲ್ಲಿ ಸಿಲುಕಿಕೊಂಡ ಚಾಲಕ ಚೆನ್ನಪ್ಪ ಗೌಡ (35) ಸ್ಥಳದಲ್ಲಿಯೇ ಮೃತಪಟ್ಟರು. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆಕ್ ಬೌನ್ಸ್ ಕೇಸ್: ಜೆಡಿಎಸ್ ಮುಖಂಡ ಧನರಾಜ್ ಜೈಲ್ಗೆ
ಮಂಗಳೂರು: ಎರಡು ಬಾರಿ ಉಚ್ಚಾಟಿತ ಜೆಡಿಎಸ್ ಮುಖಂಡ ಧನರಾಜ್ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದಾರೆ. ಬ್ರಹ್ಮಾವರ ಚಾಂತಾರು ನಿವಾಸಿ ಸಂತೋಷಲತಾ ದೇವಿ ಎಂಬವರಿಗೆ 14 ಲಕ್ಷ ಮೌಲ್ಯದ 3 ಚೆಕ್ ನೀಡಿದ್ದು, ಬೌನ್ಸ್ ಆಗಿತ್ತು. ಈ ಕುರಿತು ಉಡುಪಿ ಜೆಎಂಎಫ್ಸಿ ಕೋರ್ಟ್ಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿತ್ತು. ಇದರ ವಿರುದ್ಧ ಧನರಾಜ್ ಹೈಕೋರ್ಟ್ಗೆ ತೆರಳಿ ತಡೆಯಾಜ್ಞೆ ತಂದಿದ್ದರು. ಶುಕ್ರವಾರ ಉಡುಪಿ ಪೊಲೀಸರು ಮಂಗಳೂರು ಪೊಲೀಸರ ಜತೆ ಧನರಾಜ್ ಅವರನ್ನು ಬಂಧಿಸಲು ತೆರಳಿದಾಗ ಹೈಕೋರ್ಟ್ನ ತಡೆಯಾಜ್ಞೆ ತೋರಿಸಿದರು. ಮೇ 19ರೊಳಗೆ ಅರ್ಧದಷ್ಟು ಹಣ (7 ಲಕ್ಷ) ನೀಡಿದರೆ ಮಾತ್ರ ಶಿಕ್ಷೆಗೆ ತಡೆಯಾಜ್ಞೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಬರೆಯಲಾಗಿತ್ತು. ಆದ್ದರಿಂದ ಪೊಲೀಸರು ಬಂಧಿಸಿ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದ್ದು, ಆರೋಪಿಯನ್ನು ಕೋರ್ಟ್ ಜೈಲಿಗೆ ಕಳುಹಿಸಿದೆ. ಈ ಹಿಂದೆ ಧನರಾಜ್ ಅವರು ಅಬಕಾರಿ ಸಚಿವ ರೇಣುಕಾಚಾರ್ಯ ವಿರುದ್ಧ ಲಂಚದ ಆರೋಪ ಮಾಡಿದ್ದರು.
ಕಾರು- ಬೈಕ್ ಡಿಕ್ಕಿ: ಸವಾರ ಗಂಭೀರ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೆಮ್ಮಾರ ಸೇತುವೆಯಲ್ಲಿ ಶುಕ್ರವಾರ ರಾತ್ರಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ಕೆಮ್ಮಾರ ಶಾಲಾ ಬಳಿ ನಿವಾಸಿ, ಪೈಂಟರ್ ವೃತ್ತಿ ಮಾಡುತ್ತಿರುವ ಶ್ರೀಶ ಎಂದು ಗುರುತಿಸಲಾಗಿದೆ. ಅವರು ತನ್ನ ಬೈಕ್ನಲ್ಲಿ ಉಪ್ಪಿನಂಗಡಿಯಿಂದ ಕೆಮ್ಮಾರ ಮನೆ ಕಡೆಗೆ ಬರುತ್ತಿದ್ದಾಗ ಆಲಂಕಾರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಕ್ತಿಗೆ ಕತ್ತಿಯಿಂದ ಕಡಿದು ಗಾಯ
ಪುತ್ತೂರು: ಭೂತ ತಂಬಿಲದ ಕಾರ್ಯಕ್ರಮದ ವೇಳೆ ಮಾತಿನ ಚಕಮಕಿ ನಡೆದು ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ಇರ್ದೆ ಗ್ರಾಮದ ನಿಡ್ಪಳಿ ಎಂಬಲ್ಲಿ ನಡೆದಿದೆ. ತಂಬಿಲ ಕಾರ್ಯಕ್ರಮದಲ್ಲಿ ಕೆಲವು ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ನಡೆದು ಸುಂದರ ನಿಡ್ಪಳ್ಳಿ ಎಂಬವರಿಗೆ ಕತ್ತಿಯಿಂದ ಕಡಿದು ತಲೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.
ಸಂಶಯಾಸ್ಪದ ವ್ಯಕ್ತಿಯ ಬಂಧನ
ಕಾರ್ಕಳ: ಸಂಶಯಸ್ಪದವಾಗಿ ತಿರುಗಾಡುತ್ತಿದ್ದ ಕಾರ್ಕಳ ತಾಲೂಕು ಚಿಕ್ಕಲ್ಬೆಟ್ಟು ನಿವಾಸಿ ಪ್ರವೀಣ್ ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಕಸಬ ಗ್ರಾಮದ ಗೋಮಟೇಶ್ವರ ದೇಗುಲದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇತನನ್ನು ಪೊಲೀಸರು ಬಂಧಿಸಿದ್ದಾರೆ.
ಹೃದಯಾಘಾತ: ಬಾಲಕಿ ಸಾವು
ಸುಳ್ಯ: ಹೃದಯಾಘಾತದಿಂದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಇಲ್ಲಿನ ಮುಪ್ಪೇರಿಯ ಎಂಬಲ್ಲಿ ನಡೆದಿದೆ. ಮುಪ್ಪೇರಿಯ ಗ್ರಾಮದ ಕಾಯರ ಸುಂದರ ಮುಗೇರ ಮತ್ತು ನೀಲಮ್ಮ ದಂಪತಿ ಪುತ್ರಿ ಗುಣಶ್ರೀ (12) ಮೃತ ಬಾಲಕಿ. ಈಕೆ ಪುತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ವ್ಯಕ್ತಿ ನಾಪತ್ತೆ: ದೂರು
ಬಂಟ್ವಾಳ: ಕೆಲಸಕ್ಕೆಂದು ಹೋದ ವ್ಯಕ್ತಿಯೊಬ್ಬರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಲ್ಲಡ್ಕದ ಸೆಲೂನ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರಾಘವ ಭಂಡಾರಿ 2012 ಆಗಸ್ಟ್ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಈ ಹಿಂದೆಯೂ ಮನೆ ಬಿಟ್ಟು ಹೋದವರು ಆರು ತಿಂಗಳ ಬಳಿಕ ವಾಪಸ್ ಬಂದಿದ್ದರು. ಇದೀಗ ಮತ್ತೆ ಅವರು ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಕುಂದಾಪುರ: ಇಲ್ಲಿನ ಕೋಟೇಶ್ವರದ ನಂಬಿಯಾರ್ ಕ್ಲಿನಿಕ್ ಹತ್ತಿರವಿರುವ ಕಟ್ಟಡದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತರು ಶಕ್ತಿ ಕುಮಾರ್ (52). ಅವರಿಗೆ ವಿಪರೀತ ಮದ್ಯಪಾನ ಅಭ್ಯಾಸವಿತ್ತು. ಜೊತೆಗೆ ಒಬ್ಬಂಟಿಗರಾಗಿ ವಾಸಿಸುತ್ತಿದ್ದರು. ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಶುಕ್ರವಾರ ಕೊಟೇಶ್ವರದ ನಂಬಿಯಾರ್ ಕ್ಲಿನಿಕ್ ಹತ್ತಿರದ ಕಟ್ಟಡದಲ್ಲಿ ತನ್ನ ಪಂಚೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾವುಂದ: ವ್ಯಕ್ತಿ ಆತ್ಮಹತ್ಯೆ
ಬೈಂದೂರು: ಇಲ್ಲಿನ ನಾವುಂದ ಗ್ರಾಮದ ಚಟ್ನಿಹಿತ್ಲು ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರು ಪಂಜು ಪೂಜಾರಿ (48). ಹಗಲು ಕೂಲಿ ಕೆಲಸ ಮಾಡಿ ರಾತ್ರಿ ಶರಾಬು ಕುಡಿದು ಬಂದು ಗಲಾಟೆ ಮಾಡುತ್ತಿದ್ದು, ಯಾವಾಗಲು ತಾನು ಸಾಯುತ್ತೇನೆ ಎಂದು ಹೇಳುತ್ತಿದ್ದರು. ಎಂದಿನಂತೆ ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದರು. ಮನೆಯವರು ಶನಿವಾರ ಬೆಳಗ್ಗೆ ಎದ್ದು ನೋಡುವಾಗ ಮನೆಯ ಅಡುಗೆ ಕೋಣೆಯಲ್ಲಿ ಪಕ್ಕಾಸಿಗೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮೃತರ ಪತ್ನಿ ಲಕ್ಷ್ಮೀ ಪೂಜಾರ್ತಿ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.