ಮೀಸಲು ಅರಣ್ಯದಲ್ಲಿ ರಸ್ತೆ: ಗ್ರಾಪಂ ಸದಸ್ಯ ದಸ್ತಗಿರಿ
ಸುಬ್ರಹ್ಮಣ್ಯ: ಮೀಸಲು ಅರಣ್ಯದಲ್ಲಿ ಸುಬ್ರಹ್ಮಣ್ಯದಿಂದ ಕೋಡಿಕಜೆಗೆ ಅಕ್ರಮವಾಗಿ ಹೊಸ ರಸ್ತೆ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಅಶೋಕ್ ಆಚಾರ್ ಎಂಬವರನ್ನು ಶನಿವಾರ ಸಂಜೆ ಸುಬ್ರಹ್ಮಣ್ಯ ಅರಣ್ಯ ಸಿಬ್ಬಂದಿ ದಸ್ತಗಿರಿ ಮಾಡಿದ್ದಾರೆ. ಈ ರಸ್ತೆ ನಿರ್ಮಾಣ ಚುನಾವಣೆ ಪೂರ್ವದಲ್ಲಿ ಆಗಿದ್ದು, ಮೀಸಲು ಅರಣ್ಯದಲ್ಲಿ ರಸ್ತೆ ಮಾಡಿರುವುದರಿಂದ 8 ಮಂದಿ ಮೇಲೆ ಕೇಸು ದಾಖಲಾಗಿತ್ತು, ಆರೋಪಿಗಳು ತಲೆಮರೆಸಿಕೊಂಡಿದ್ದರು. ಶನಿವಾರ ಸಂಜೆ ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಬಾಲಕೃಷ್ಣ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಅಶೋಕ್ ಆಚಾರ್ ಅವರನ್ನು ದಸ್ತಗಿರಿ ಮಾಡಿದ್ದಾರೆ.
ಸುಬ್ರಹ್ಮಣ್ಯ ಪರಿಸರದಲ್ಲಿ ಗುಡುಗು ಮಿಶ್ರಿತ ಮಳೆ
ಮಂಗಳೂರು: ಜಿಲ್ಲೆಯ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ಗುಡುಗಿನಿಂದ ಕೂಡಿದ ಮಳೆಯಾಗಿದೆ. ಪರಿಸರದ ಗುತ್ತಿಗಾರು, ಪಂಜ, ಎಲಿಮಲೆ, ಕೈಕಂಬ, ಏನೆಕಲ್, ಬಾಳಗೋಡು, ಕಮಿಲಗಳಲ್ಲಿ ಸಂಜೆ 5 ರಿಂದ 7 ಗಂಟೆ ವರೆಗೆ ಉತ್ತಮ ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಸಂಜೆ ವೇಳೆ ಕೆಲ ಹೊತ್ತು ಜಿಟಿ ಜಿಟಿಯಾಗಿ ಸುರಿದ ಮಳೆ ಇಳೆಗೆ ತಂಪು ನೀಡಿದೆ. ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ಬಿಸಿಲಿನ ಝಳ ಹೆಚ್ಚಾಗಿತ್ತು. ಆದರೆ ಅಡ್ಯಾರು ಮತ್ತು ಫರಂಗೀಪೇಟೆ ಪರಿಸರದಲ್ಲಿ ಸಂಜೆ ಬಳಿಕ ಉತ್ತಮ ಮಳೆ ಸುರಿದಿದೆ.