ಲೈಂಗಿಕ ಕಿರುಕುಳ ದೂರು ನಿವಾರಣೆ ಸಮಿತಿಗೆ ಹೊಣೆ
ಮಂಗಳೂರು: ಮಹಿಳಾ ಎಎಸ್‌ಐಗೆ ರಜೆ ವಿಚಾರದಲ್ಲಿ ಕಿರುಕುಳ ನೀಡಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರದಂತೆ ಮಹಿಳಾ ಅಧಿಕಾರಿ ನೇತೃತ್ವದ ಲೈಂಗಿಕ ಕಿರುಕುಳ ದೂರು ನಿವಾರಣೆ ಸಮಿತಿ ತನಿಖೆ ನಡೆಸಲಿದೆ.
ಸಮಿತಿಯ 9 ಸದಸ್ಯರಲ್ಲಿ ಏಳು ಮಂದಿ ಮಹಿಳೆಯರು. ನಗರ ಎಸಿಪಿ ಕವಿತಾ ಸಮಿತಿ ನೇತೃತ್ವ ವಹಿಸಲಿದ್ದಾರೆ. ಪೊಲೀಸ್ ಅಧಿಕಾರಿಗಳ ಹೊರತಾಗಿ ರೋಶನಿ ನಿಲಯ ಸಮಾಜಕಾರ್ಯ ಕಾಲೇಜು ವಿಭಾಗ ಡೀನ್ ಡಾ.ರಮೀಳಾ ಶೇಖರ್ ಸಮಿತಿಯಲ್ಲಿದ್ದಾರೆ ಎಂದು ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳಾ ಎಎಸ್‌ಐ ಶ್ರೀಕಲಾ ದೂರು ನೀಡಿದ ವೇಳೆ ರಜೆ ನೀಡದ ಬಗ್ಗೆಯೇ ಆರೋಪಿಸಿದ್ದರು. ದೂರಿನಲ್ಲಿರುವ ಸಂಪೂರ್ಣ ವಿಚಾರ ಅವಲೋಕಿಸುವಾಗ ಸುಪ್ರೀಂ ಕೋರ್ಟ್ ಮಾಗದರ್ಶಿ ಸೂತ್ರಗಳ ಪ್ರಕಾರ ಲೈಂಗಿಕ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿರಲಿಲ್ಲ. ಆದರೂ ಮಾಧ್ಯಮಗಳಲ್ಲಿ ಇದು ಲೈಂಗಿಕ ಕಿರುಕುಳ ಎಂದು ಪ್ರಕಟವಾಗಿರುವುದರಿಂದ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಒಂದು ಲೈನ್ ದೂರಿನಲ್ಲಿ ಇರುವುದರಿಂದ ದೂರಿನ ತನಿಖೆಯನ್ನು ಲೈಂಗಿಕ ಕಿರುಕುಳ ದೂರು ನಿವಾರಣೆ ಸಮಿತಿಗೆ ವಹಿಸಲಾಗಿದೆ. ಈ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗ ಡಿಸಿಪಿಗೆ ವಹಿಸಲಾಗಿತ್ತು ಎಂದರು.
ವಿಶಾಖ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1997ರಲ್ಲಿ ಮಾರ್ಗದರ್ಶಿ ಸೂತ್ರ ರೂಪಿಸಲು ಸೂಚಿಸಿತ್ತು. ಆದರೆ ಜಿಲ್ಲೆಯಲ್ಲಿ ಇದುವರೆಗೆ ಸಮಿತಿ ರಚಿಸಲಾಗಿಲ್ಲ. ಈ ಬಾರಿ ದೂರು ಬಂದ ಹಿನ್ನೆಲೆಯಲ್ಲಿ ರಚಿಸಲಾಗಿದೆ ಎಂದರು.
ಪ್ರತ್ಯೇಕ ತನಿಖೆ: ಮಹಿಳಾ ಎಎಸ್‌ಐ ಶ್ರೀಕಲಾ ವಿರುದ್ಧ ಈಗ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮತ್ತು ಅವರ ಗಂಡನ ವಿರುದ್ಧ 2 ವರ್ಷದ ಹಿಂದಿನ ವಂಚನೆ ಪ್ರಕರಣವೂ ನನ್ನ ಗಮನಕ್ಕೆ ಬಂದಿದ್ದು, ಕಾನೂನು ಪ್ರಕಾರ ಪ್ರತ್ಯೇಕವಾಗಿ ತನಿಖೆ ನಡೆಯಲಿದೆ ಎಂದರು.
ಸಮಿತಿಯಲ್ಲಿ ನಗರ ಎಸಿಪಿ ಕವಿತಾ, ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕೆ.ಕಲಾವತಿ, ಕಮಿಷನರ್ ಕಚೇರಿ ಆಡಳಿತಾಧಿಕಾರಿ ಹಿಲ್ಡಾ ಗೋವಿಯಸ್, ಅಪರಾಧ ಶಾಖೆ ಅಧೀಕ್ಷಕಿ ಪೌಲಿನ್ ಮರಿಯಪ್ಪ, ರೋಶನಿ ನಿಲಯ ಡೀನ್ ರಮಿಳಾ ಶೇಖರ್, ಸಿಎಸ್‌ಬಿ ಇನ್‌ಸ್ಪೆಕ್ಟರ್ ವಿನಯ ಗಾಂವ್ಕರ್, ಉರ್ವ ಇನ್‌ಸ್ಪೆಕ್ಟರ್ ರಾಮಚಂದ್ರ ಬಿ.ಮಾಳದೇವರ, ಸಿಎಸ್‌ಬಿ ಎಸ್‌ಐ ಗಿರಿಜಾ, ಉಳ್ಳಾಲ ಠಾಣೆ ಎಎಸ್‌ಐ ನಾಗಿಣಿ ಸಮಿತಿಯಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಮುತ್ತುರಾಯ ಹಾಜರಿದ್ದರು.