ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗುಜರಿ ಅಂಗಡಿ ಹುಡುಗನ ಕಾಲೇಜು ಕನಸು ನನಸು!

ಉನ್ನತ ಶಿಕ್ಷಣ ಪಡೆಯಬೇಕು ಎಂಬ ಸುಳ್ಯದ ಬಡ ಹುಡುಗನೊಬ್ಬನ ಕನಸು ಕೊನೆಗೂ ನನಸಾಗಿದೆ.

Rashmi Kasaragodu
Updated On : 28 May 2013, 12:16 pm

ಕ.ಪ್ರ. ವಾರ್ತೆ, ಸುಳ್ಯ, ಮೇ 27-
ಉನ್ನತ ಶಿಕ್ಷಣ ಪಡೆಯಬೇಕು ಎಂಬ ಸುಳ್ಯದ ಬಡ ಹುಡುಗನೊಬ್ಬನ ಕನಸು ಕೊನೆಗೂ ನನಸಾಗಿದೆ.
ಈತನನ್ನು ಪದವಿ ಓದಿಸಲು ಬೆಂಗಳೂರಿನ ಉದ್ಯಮಿಯೊಬ್ಬರು ಮುಂದೆ ಬಂದಿದ್ದು, ಸೋಮವಾರ ಸುಳ್ಯಕ್ಕೆ ಆಗಮಿಸಿದ ಅವರು ಹುಡುಗನನ್ನು ಸುಳ್ಯದ ನೆಹರೂ ಸ್ಮಾರಕ ಕಾಲೇಜಿಗೆ ಸೇರಿಸಿದ್ದಾರೆ.
ಬೆಳ್ಳಾರೆ ಸಮೀಪದ ಪೆರುವಾಜೆಯ ಮನೋಹರ ಎಂಬಾತ ಬಡತನದ ಬೇಗೆಯಿಂದ ಬಳಲುತ್ತಿದ್ದರೂ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ. ಬೆಳಗ್ಗೆ ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಬಳಿಕ ಟ್ಯುಟೋರಿಯಲ್‌ನಲ್ಲಿ ಶಿಕ್ಷಣ ಪಡೆದು ಸಂಜೆಯಿಂದ ರಾತ್ರಿಯವರೆಗೆ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಈ ಕಷ್ಟ ಜೀವನವನ್ನು ಮತ್ತು ಈತ ಹೊಂದಿದ ಉನ್ನತ ಶಿಕ್ಷಣದ ಕನಸನ್ನು 'ಕನ್ನಡಪ್ರಭ' ಕೆಲವು ದಿನಗಳ ಹಿಂದೆ ವರದಿ ಮಾಡಿತ್ತು.
ಇದನ್ನು ಗಮನಿಸಿದ ಬೆಂಗಳೂರಿನ ಉದ್ಯಮಿ ಸುರೇಶ್ ಎಂಬವರು ಈತನನ್ನು ಓದಿಸಲು ಮುಂದೆ ಬಂದಿದ್ದಾರೆ. ವರದಿ ಪ್ರಕಟವಾದ ದಿನವೇ ಮನೋಹರನಿಗೆ ಕರೆ ಮಾಡಿ ಈ ಭರವಸೆ ನೀಡಿದ್ದ ಸುರೇಶ್, ಸೋಮವಾರ ಸುಳ್ಯಕ್ಕೆ ಬಂದು ಇಲ್ಲಿನ ನೆಹರೂ ಸ್ಮಾರಕ ಪದವಿ ಕಾಲೇಜಿಗೆ ಮನೋಹರನನ್ನು ದಾಖಲಾತಿಗೊಳಿಸಿ, ಶುಲ್ಕ ಕಟ್ಟಿ ತೆರಳಿದ್ದಾರೆ. ಮನೋಹರನ ಸಮವಸ್ತ್ರ ಮತ್ತು ಪುಸ್ತಕಗಳಿಗಾಗಿ ಹಣವನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ಭರವಸೆ ನೀಡಿರುವ ಅವರು ಮೂರು ವರ್ಷವೂ ಕಾಲೇಜ್ ಶುಲ್ಕ ಪಾವತಿಸಿ, ಓದಿಸುವ ವಾಗ್ದಾನ ಮಾಡಿದ್ದಾರೆ. ಬೆಂಗಳೂರಿನ ಟಿ.ಟಿ.ಕೆ. ಪ್ರೆಸ್ಟೀಜ್ ಕಂಪನಿಯಲ್ಲಿ ಸಬ್ ಕಾಂಟ್ರಾಕ್ಟರ್ ಆಗಿರುವ ಸುರೇಶ್, ಸುಮಾರು 20ರಷ್ಟು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ವಿವೇಕಾನಂದರಿಂದ ಪ್ರಭಾವಿತರಾಗಿ ರಾಮಕೃಷ್ಣಾಶ್ರಮದ ಸಂಪರ್ಕ ಬೆಳೆಸಿರುವ ಅವರು ತಮ್ಮ ವಿಶ್ರಾಂತಿ ಸಮಯವನ್ನು ಅಲ್ಲಿ ಕಳೆಯುತ್ತಿದ್ದಾರೆ.
ಮನೋಹರನ ದಾಖಲಾತಿಯ ಸಂದರ್ಭದಲ್ಲಿ ಅವರು ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾಕರ ಶಿಶಿಲ ಅವರನ್ನು ಭೇಟಿ ಮಾಡಿದರು. ಸುರೇಶ್ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದ ಡಾ. ಪ್ರಭಾಕರ ಶಿಶಿಲ ಇವರ ಈ ಕಾರ್ಯ ಇತರರಿಗೂ ಮಾದರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.  'ಕನ್ನಡಪ್ರಭ' ಪತ್ರಿಕೆ ವರದಿಯಿಂದ ನಾನು ಪ್ರಭಾವಿತನಾಗಿ ಈ ಕಾರ್ಯ ಮಾಡಿರುವುದಾಗಿ ಸುರೇಶ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement