ಮೌಖಿಕ ಕಾವ್ಯ ಪರಂಪರೆ ರಾಜ್ಯದಲ್ಲಿ ಜೀವಂತ
ಕಾಂತಾವರ: ಅನೇಕ ದೇಶಗಳಲ್ಲಿ ಮೌಖಿಕ ಪರಂಪರೆ ಬೇರೆಬೇರೆ ಕಾರಣಗಳಿಂದಾಗಿ ಇಂದು ಅಳಿದುಹೋಗಿದ್ದರೂ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಈ ಮೌಖಿಕ ಕಾವ್ಯದ ಪರಂಪರೆ ಇಂದಿಗೂ ಜೀವಂತವಾಗಿದೆ. ಕಾವ್ಯ ಕಟ್ಟಿ ಹಾಡುವ ಅನೇಕ ಜಾನಪದ ಕಲಾವಿದರು ನಮ್ಮಲ್ಲಿದ್ದಾರೆ ಎಂದು ಖ್ಯಾತ ಜಾನಪದ ವಿದ್ವಾಂಸ, ಮಂಗಳೂರು ವಿವಯ ಕನ್ನಡ ಪ್ರಾಧ್ಯಾಪಕ ಡಾ.ಕೆ. ಚಿನ್ನಪ್ಪ ಗೌಡ ಹೇಳಿದರು.
ಅವರು ಕಾಂತಾವರ ಅಲ್ಲಮಪ್ರಭು ಪೀಠದ ಅನುಭವದ ನಡೆ ಅನುಭಾವದ ನುಡಿ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮದಲ್ಲಿ 'ಮೌಖಿಕ ಕಾವ್ಯ- ಮುರಿದು ಕಟ್ಟುವ ಕಾಯಕದ ಅರಿವು' ಕುರಿತು ಭಾನುವಾರ ಮಾತನಾಡಿದರು.
ನುಡಿಗೆಟ್ಟ ನುಡಿ ಎಂಬ ಅಲ್ಲಮ ಪ್ರಭುವಿನ ಒಂದು ನುಡಿಯಂತೆ ಒಂದು ನುಡಿಯ ಅರ್ಥ ಮತ್ತು ವಿನ್ಯಾಸವನ್ನು ಮುರಿದು ಹೊಸ ಅರ್ಥದೊಂದಿಗೆ ಕಟ್ಟುವ ಕ್ರಿಯೆಯೇ ಮುರಿದು ಕಟ್ಟುವ ಕ್ರಿಯೆ. ಮೌಖಿಕ ಪರಂಪರೆಯಲ್ಲಿ ಇಂತಹ ಮುರಿದು ಕಟ್ಟುವ ಕ್ರಿಯೆಗಳಿಂದಾಗಿಯೇ ಅನೇಕ ಮಹಾಕಾವ್ಯಗಳು ನಿರ್ಮಾಣಗೊಂಡಿವೆ. ಎಂದು ತಿಳಿಸಿದರು.
ಮೌಖಿಕ ಕಾವ್ಯವೂ ಕೇವಲ ಸಮಯ ಕಳೆಯಲೆಂದು ಅಥವಾ ಮನೋರಂಜನೆಗಾಗಿ ಸೃಷ್ಟಿಯಾಗಿರದೆ ಅದಕ್ಕೆ ವಿಸ್ತಾರವಾದ ಅರ್ಥವ್ಯಾಪ್ತಿಯಿರುತ್ತದೆ ಮತ್ತು ಜನರ ಕೆಲಸದ ಸ್ವರೂಪಕ್ಕೂ ಕಾವ್ಯದ ಆಶಯಕ್ಕೂ ನಿಕಟ ಸಂಬಂಧವಿರುವುದರಿಂದಲೇ ತಮ್ಮ ಅನುಭವ ತುಂಬಿದ ನುಡಿಗಳನ್ನು ಅರ್ಥ ತುಂಬಿದ ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ಮುರಿದು ಮಹಾ ಕಾವ್ಯಗಳನ್ನು ಕಟ್ಟು ಕಾರ್ಯ ಕಲಾವಿದರಿಂದಾಗಿದೆ. ಇದರಿಂದಾಗಿಯೇ ಬೇರೆಬೇರೆ ಕಲಾವಿದರ ವಿಭಿನ್ನ ಪ್ರಕಾರದ ಪಠ್ಯಗಳು ದೊರೆಯುವಂತಾಗಿದೆ ಎಂದು ಹೇಳಿದರು.
ಮೌಖಿಕ ಕಾವ್ಯವನ್ನು ಕಟ್ಟಿ ಸಂದರ್ಭಕ್ಕನುಗುಣವಾಗಿ ಅದನ್ನು ಬಳಸಿದಾಗ ಆ ಕಾವ್ಯಕ್ಕೆ ಚಲನಶೀಲತೆ ಬರುತ್ತದೆ. ಸಿರಿ ಪಾಡ್ದನದಂತಹ ಮಹಾಕಾವ್ಯ ಹಾಡುವುದಕ್ಕೆ, ಕೇಳುವುದಕ್ಕೆ ಮಾತ್ರವಲ್ಲ ಸಾಮಾಜಿಕ ಸ್ವಾಸ್ಥ್ಯದ ನೆಲೆಯಲ್ಲಿ ಒಂದು ಚಿಕಿತ್ಸಾ ಕ್ರಮವಾಗಿಯೂ ಬಳಸಲ್ಪಡುತ್ತದೆ. ಅಕ್ಷರದ ಅಹಂ ಇಲ್ಲದವರಿಂದ ರಚನೆಗೊಂಡು ಮೌಖಿಕ ಪರಂಪರೆಯಾಗಿ ಬಂದ ಸಿರಿ, ಕೋಟಿ ಚೆನ್ನಯ ಮತ್ತಿತರ ದೈವಗಳ ಕುರಿತಾದ ಕಾವ್ಯಗಳು ಇಡೀ ತುಳುನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟುವ ಆಕರಗಳಾಗಿ ಉಳಿದಿವೆ. ಅನೇಕ ನಿಗೂಢತೆಗಳನ್ನು ಇನ್ನೂ ತನ್ನಲ್ಲಿಯೇ ಬಚ್ಚಿಟ್ಟುಕೊಂಡಿರುವ ಈ ಮೌಖಿಕ ಮಹಾಕಾವ್ಯ ಪರಂಪರೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ವಿವರಿಸಿದರು. ಈ ಸಂದರ್ಭ ಚಿನ್ನಪ್ಪ ಗೌಡರನ್ನು ಸನ್ಮಾನಿಸಲಾಯಿತು. ಬಾಬು ಶೆಟ್ಟಿ ನಾರಾವಿ ವಚನಗಾಯನದೊಂದಿಗೆ ವಿಠಲ ಬೇಲಾಡಿ ನಿರ್ವಹಿಸಿದರು. ಕಲ್ಲೂರು ನಾಗೇಶ್ ಸ್ವಾಗತಿಸಿ, ಯಶೋಧರ್ ಕರ್ಕೇರ ವಂದಿಸಿದರು.