ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆತ್ಮಹತ್ಯೆ ಸ್ಥಿತಿಯಲ್ಲಿ ಎಂಡೋ ಸಂತ್ರಸ್ತರು

Lingaraj Badiger
Updated On : 29 May 2013, 11:59 am

ಬೆಳ್ತಂಗಡಿ: ಆರೋಗ್ಯ ಸಚಿವರು ಒಂದು ತಿಂಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿರುವುದರಿಂದ ಎಂಡೋ ಸಂತ್ರಸ್ತರು ಜೂ.7 ರಂದು ಆಯೋಜಿಸಿದ್ದ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಜು.7 ರವರೆಗೆ ಮುಂದೂಡಲಾಗಿದೆ. ಜೀವನ ಕಷ್ಟ ಅನುಭವಿಸುತ್ತಿರುವ ಎಂಡೋ ಪೀಡಿತರು ಆತ್ಯಹತ್ಯೆಗೆ ಮನಸ್ಸು ಮಾಡುವ ಸ್ಥಿತಿಯಲ್ಲಿದ್ದಾರೆ ಎಂದು ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆ. ಎಚ್ಚರಿಸಿದ್ದಾರೆ.
 ಅವರು ಮಂಗಳವಾರ ಇಲ್ಲಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಗ್ಯ ಸಚಿವರೊಡನೆ ನಡೆದ ಭೇಟಿಯ ಕುರಿತು ಮತ್ತು ಹೋರಾಟದ ವಿವರ ನೀಡಿದರು.
 ಮೇ 25 ರಂದು ಎಂಡೋ ವಿರೋಧಿ ಹೋರಾಟ ಸಮಿತಿಯ ನಿಯೋಗವು ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಅವರ ಮಂಗಳೂರು ನಿವಾಸದಲ್ಲಿ ಭೇಟಿಯಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಂಡೋ ಸಂತ್ರಸ್ತರು ನಡೆಸುವ ಧರಣಿ ಸಭೆಗೆ ಮುಖ್ಯಮಂತ್ರಿಗಳೊಂದಿಗೆ ಆಗಮಿಸಿ ಸ್ಥಳದಲ್ಲೇ ಎಂಡೋ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿಯ ಆದೇಶ ನೀಡಬೇಕೆಂದು ಆಹ್ವಾನಿಸಲಾಯಿತು.
ತಿಂಗಳೊಳಗೆ ಬೇಡಿಕೆ ಈಡೇರಿಕೆ ಭರವಸೆ: ಈ ಸಂದರ್ಭ ಸಚಿವರು ಎಂಡೋ ಸಂತ್ರಸ್ತರ ಸೂಕ್ತ ಸಮೀಕ್ಷೆಗೆ ಆದೇಶ ಮಾಡಿದ್ದು ಇನ್ನು 15 ದಿವಸದೊಳಗೆ ವರದಿ ತರಸಿಕೊಂಡು ತಿಂಗಳೊಳಗೆ ಎಲ್ಲ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆಯಿತ್ತರು ಮತ್ತು ನಮ್ಮ ಜತೆ ಸಮಾಲೋಚಿಸುತ್ತಾ ಕೇರಳ ಸರ್ಕಾರದ ಪರಿಹಾರದ ವ್ಯವಸ್ಥೆಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇರಳ ಸರ್ಕಾರಕ್ಕೆ ಪರಿಹಾರದ ಆದೇಶದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
 ಎಂಡೋ ವಿರೋಧಿ ಹೋರಾಟ ಸಮಿತಿಯು ಈ ಮಧ್ಯೆ ಎಂಡೋ ಸಂತ್ರಸ್ತರ ಆಯ್ಕೆ ಮತ್ತು ಪರಿಹಾರ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ಸಂತ್ರಸ್ತರ ಮಧ್ಯೆ ಸಂಪರ್ಕ ಸೇತುವಿನಂತೆ ಸಲಹಾ ಸಮಿತಿಯನ್ನು ರಚಿಸಬೇಕು. ಅದರಲ್ಲಿ ಡಾ. ರವೀಂದ್ರನಾಥ್ ಶಾನುಭಾಗ, ಡಾ.ಯು.ವಿ. ಶೆಣೈ, ಡಾ. ನಿತ್ಯಾನಂದ ಪೈ, ಸಂಜೀವ ಕಬಕ ಮತ್ತು ಈ ಹೋರಾಟ ಸಮಿತಿಯನ್ನು ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದಾಗ ಸಚಿವರು ತಮ್ಮ ಅಧ್ಯಕ್ಷತೆಯಲ್ಲಿ ಜಿ.ಪಂ, ತಾ.ಪಂ.ಸದಸ್ಯರು, ಶಾಸಕರು ಮತ್ತು ನಾವು ಮೇಲೆ ತಿಳಿಸಿದವರನ್ನು ಸೇರಿಸಿ ಒಂದು ಆಥಾರಿಟಿಯನ್ನು ಆರಂಭಿಸುವುದಾಗಿ ಭರವಸೆಯಿತ್ತಿದ್ದಾರೆ ಎಂದರು.
 ಇವುಗಳಲ್ಲದೆ ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಮಂಜೂರಾದ ಕಾಮಗಾರಿಯು ಶೀಘ್ರ ಅನುಷ್ಠಾನಗೊಳಿಸಲು ಪ್ರತಿ ತಿಂಗಳು ಕೊಕ್ಕಡ ಪಾಲನಾ ಕೇಂದ್ರಕ್ಕೆ ಮಾನಸಿಕ ತಜ್ಞರು, ಎಲುಬು, ಇ.ಎನ್.ಟಿ. ಮತ್ತು ಸ್ತ್ರೀರೋಗ ತಜ್ಞರು  ಬಂದು ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಲಾಯಿತು ಎಂದರು.
ಸಚಿವರು ಭರವಸೆ ನೀಡಿದ ಪ್ರಕಾರ ಪ್ರಸ್ತುತ ಯೋಜಿಸಿರುವ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಜುಲೈ ತಿಂಗಳಿಗೆ ಮುಂದೂಡಿದ್ದೇವೆ. ಆದರೆ ಪ್ರಸ್ತುತ ನಾವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕೂರುವ ಯೋಜನೆ ಯೋಜಿಸಿದ್ದೇವು. ಇದೀಗ ನಾವು ಸಚಿವರ ಮಾತುಗಳಿಂದ ಪುಳಕಗೊಂಡಿದ್ದೇವೆ. ಆದರೆ ತಿಂಗಳಲ್ಲಿ ನಮ್ಮ ಸಮಸ್ಯೆಗಳು ಈಡೇರದಿದ್ದಲ್ಲಿ ಮುಂದಿನ ನಮ್ಮ ಪ್ರತಿಭಟನೆಯ ಸಂದರ್ಭ ಜೀವನ ಕಷ್ಟ ಸಾಧ್ಯವಾಗಿರುವ ಕೆಲವು ಸಂತ್ರಸ್ತರು ಆತ್ಮಹತ್ಯೆಗೆ ಪ್ರಯತ್ನಿಸಬಹುದೆಂದು ಶಂಕೆ ವ್ಯಕ್ತಪಡಿಸಿದರು. ಸಚಿವರನ್ನು ಭೇಟಿ ಮಾಡಿರುವ ನಿಯೋಗದಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿಯಲ್ಲಿ ವಿಧಾನಸೌಧ ಚಲೋ ಸಂಘಟನಾ ಸಮಿತಿ ಅಧ್ಯಕ್ಷ ಪಿ.ಕೆ. ನಾರಾಯಣ ಗೌಡ, ಇಬ್ರಾಹಿಂ ಕೊಕ್ಕಡ, ಅಲ್ಬರ್ಟ್ ವಿನೇಜಸ್, ಜಿನ್ನಪ್ಪ ಗೌಡ ನಿಡ್ಲೆ, ಪ್ರಶಾಂತ ನಿಡ್ಲೆ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಡಾ. ಮುರಳೀಧರ ನಾಯಕ್, ಹರೀಶ್ ಬಂಟ್ವಾಳ ಇದ್ದರು ಎಂದರು.
 ಸಂತ್ರಸ್ತರ ಅವಶ್ಯಕತೆಗಳ ಬಗ್ಗೆ ವರದಿ ಸಲ್ಲಿಸಲು ಆಗಮಿಸಿದ ಆಯುಷ್ ಇಲಾಖೆಯ ವೈದ್ಯರ ತಂಡ ತಮ್ಮ ವರದಿಯನ್ನು ಬಹಿರಂಗ ಪಡಿಸಬೇಕಾಗಿದೆ ಎಂದು ಗೌಡ ಆಗ್ರಹಿಸಿದರು
 ಸುದ್ದಿಗೋಷ್ಠಿಯಲ್ಲಿ ವಿಧಾನಸೌಧ ಚಲೋ ಸಂಘಟನಾ ಸಮಿತಿ ಅಧ್ಯಕ್ಷ ಪಿ.ಕೆ. ನಾರಾಯಣ ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement