ರಸ್ತೆ ಕಾಮಗಾರಿ ಕಳಪೆ: ಗ್ರಾಮಸ್ಥರ ಆಕ್ರೋಶ
ವಿಟ್ಲ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಿಲಕಟ್ಟೆ- ಪೂರ್ಲಪಾಡಿ ರಸ್ತೆ ಡಾಂಬರಿಕರಣ ಕಳಪೆಯಾಗಿದ್ದು, ಬಳಿಕ ಅದಕ್ಕೆ ತೇಪೆ ಹಾಕಿ ವಂಚಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಇಲಾಖೆಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಅನಿಲಕಟ್ಟೆ- ಪೂರ್ಲಪಾಡಿ ರಸ್ತೆಗೆ ಸುಮಾರು 25 ವರ್ಷಗಳಿಂದ ಡಾಂಬರಿಕರಣ ಮಾಡಬೇಕೆಂದು ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಗ್ರಾಮಸ್ಥರು ನಿರಂತರ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಜನರ ಈ ಮನವಿಗೆ 25 ವರ್ಷಗಳ ಬಳಿಕ ಸ್ಪಂದಿಸಿದ ಇಲಾಖೆ ಕಳೆದ 15 ದಿನಗಳ ಹಿಂದೆ ರಸ್ತೆ ಡಾಂಬರಿಕರಣ ಕಾಮಗಾರಿ ಕೈಗೆತ್ತಿಕೊಂಡಿತ್ತು. ರು. 20 ಲಕ್ಷ ಅನುದಾನದಲ್ಲಿ ಸುಮಾರು 800 ಮೀ. ರಸ್ತೆಗೆ ಡಾಂಬರಿಕರಣ ಕಾಮಗಾರಿ ನಡೆಸಿದೆ. ಆದರೆ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮನಗಂಡ ಇಲಾಖೆ, 15 ದಿನಗಳ ಬಳಿಕ ಅದೇ ರಸ್ತೆಗೆ ತೇಪೆ ಹಾಕಿ ಗ್ರಾಮಸ್ಥರನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದೀಗ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ಗ್ರಾಮಸ್ಥರು ಸಿದ್ಧತೆ ನಡೆಸುತ್ತಿದ್ದಾರೆ.