ಬಿಗ್ಎಫ್ಎಂ ಪಾನಿ ಬಚಾವೊ ಅಭಿಯಾನ
ಮಂಗಳೂರು: ನೀರಿನ ಜಾಗೃತಿಗೆ 92.7 ಬಿಗ್ ಎಫ್ಎಂ ರೇಡಿಯೇ ಸ್ಟೇಶನ್ಗಳಲ್ಲಿ ಮೇ 31ರಂದು ಪಾನಿ ಬಚಾವೊ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಬಿಗ್ಎಫ್ಎಂ ಕಚೇರಿಯಲ್ಲಿ ಪಾನಿ ಬಚಾವೊ ಅಭಿಯಾನ ಸಮಾಜ ಕಳಕಳಿಗೆ ಹೆಸರಾದ ಆರ್.ಜೆ. ಎರಾಲ್ ಗೋನ್ಸಾಲಿಸ್ ಸತತ 15 ಗಂಟೆಗೆಳ ಆರ್.ಜೆ. ಮ್ಯಾರಥಾನ್ ನಡೆಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಆರಂಭವಾಗುವು ಮ್ಯಾರಥಾನ್ ರಾತ್ರಿ 10 ಗಂಟೆಗೆ ಕೊನೆಗೊಳ್ಳಲಿದೆ. ಕ್ರೀಡಾಪಟುಗಳು, ಪತ್ರಕರ್ತರು, ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ನೀರಿನ ಹಿತ ಮಿತವಾಗಿ ಬಳಸುವ ಬಗ್ಗೆ ಆರ್.ಜೆ. ಜತೆ ಚರ್ಚೆ ನಡೆಸಲಿದ್ದಾರೆ ಎಂದು ಬಿಗ್ ಎಫ್ಎಂ ಪ್ರಕಟಣೆ ತಿಳಿಸಿದೆ.
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಚಿತ್ರ ನಟಿ ರಿಶಿಕಾ ಸಿಂಗ್, ಹರ್ಷಿಕಾ ಪೂಣಚ್ಚ, ಶ್ವೇತಾ ಪಂಡಿತ್, ರಕ್ಷಿತ್ ಶೆಟ್ಟಿ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಎಂ.ಮೋಹನ ಆಳ್ವ, ಹಿರಿಯ ಪತ್ರಕರ್ತರಾದ ಶೇಷಗಿರಿ ರಾವ್, ಮನೋಹರ ಪ್ರಸಾದ್ ಇನ್ನಿತರ ಗಣ್ಯರು ಭಾಗವಹಿಸುವರು. ಬಿಗ್ಎಫ್ ಎಂ ಕೇಳುಗರಿಗೆ ಆ ದಿನ ಭಾರತ ಮಾಲ್ನ 2ನೇ ಮಹಡಿಯಲ್ಲಿರುವ ಸ್ಟುಡಿಯೋಗೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಬೆಳ್ತಂಗಡಿ ರು. 15 ಲಕ್ಷ ಬಿಡುಗಡೆ
ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ 2012-13ನೇ ಸಾಲಿನ ಪ್ರಥಮ ಕಂತಿನ ರು. 20ಲಕ್ಷ ಅನುದಾನದಲ್ಲಿ ಬೆಳ್ತಂಗಡಿಯ 5 ಕಾಮಗಾರಿಗೆ ರು. 15ಲಕ್ಷ ಬಿಡುಗಡೆಗೊಂಡಿದೆ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದ್ದಾರೆ.
ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಗುರುವಾಯನಕೆರೆ ಪಾಂಡೇಶ್ವರ ರಸ್ತೆ ಅಭಿವೃದ್ಧಿ ರು. 3.75 ಲಕ್ಷ, ಕೆಯ್ಯೂರು ಗ್ರಾಮದ ಮಲೆಬೆಟ್ಟು ನಿನ್ನಕಲ್ಲು ರಸ್ತೆ ಅಭಿವೃದ್ಧಿಗೆ ರು. 3.75 ಲಕ್ಷ, ಬಾರ್ಯ ಗ್ರಾಮದ ಮುಚ್ಚಾಲೆ ಸುಣ್ಣಾಜೆ ರಸ್ತೆ ಅಭಿವೃದ್ಧಿಗೆ ರು. 1.50 ಲಕ್ಷ, ಕಾಣಿಯೂರು ಗ್ರಾಮದ ಗುಂಪುಕಲ್ಲು ಬೊಲ್ಪೋಡಿ ಬೊಳ್ಳಮಜಲು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ ರು. 3.75 ಲಕ್ಷ ಹಾಗೂ ಶಿಬಾಜೆ ಗ್ರಾಮದ ಬಳ್ಳಡ್ಕ-ಪತ್ತಿಮಾರು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಬಿವೃದ್ಧಿಗೆ ರು. 2.25 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.