ಮನೆ ಕೆಡವಿ ಅತಂತ್ರರಾಗಿದ್ದ ಫಲಾನುಭವಿಗಳೀಗ ನಿರಾತಂಕ
ಮೂಲ್ಕಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನೀಂತಿ ಸಂಹಿತೆ ಜಾರಿಯಲ್ಲಿದ್ದರಿಂದ ನೆನಗುದಿಗೆ ಬಿದ್ದಿದ್ದ ಬಡವರ ಕನಸಿನ ಸೂರಿನ ಯೋಜನೆಗಳಾದ ನಮ್ಮ ಮನೆ, ವಾಜಪೇಯಿ ವಸತಿ ಯೋಜನೆ, ಬಸವ ಶ್ರೀ ಮುಂತಾದ ಯೋಜನೆಗಳು ಇದೀಗ ಕಾರ್ಯಗತಗೊಳ್ಳುತ್ತಿವೆ. ಈ ಯೋಜನೆಗಳಡಿ ಫಲಾನುಭವಿಗಳಿಗೆ ಅನುದಾನ ಮಂಜೂರಾಗಿದ್ದು ಕಾಮಗಾರಿಗಳು ಭರದಿಂದ ಸಾಗುತ್ತಿವೆ.
ನಮ್ಮ ಮನೆ, ವಾಜಪೇಯಿ ವಸತಿ ಯೋಜನೆಯಲ್ಲಿ ಸರ್ಕಾರ ಪ್ರತಿ ಫಲಾನುಭವಿಗಳಿಗೆ ತಲಾ 75000 ಅನುದಾನ ನೀಡುತ್ತದೆ. ಇದನ್ನೇ ನಂಬಿ ಮೂಲ್ಕಿ- ಮೂಡುಬಿದಿರೆ ವ್ಯಾಪ್ತಿಯಲ್ಲಿ ಸುಮಾರು 100 ಮಂದಿ ಫಲಾನುಭವಿಗಳು ತಮ್ಮ ಹಳೆಯ ಮನೆಗಳನ್ನು ಕೆಡವಿ ಹೊಸ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಅದೇ ಸಮಯಕ್ಕೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ನಮ್ಮ ಮನೆ ಯೋಜನೆಯಡಿ ಸರ್ಕಾರದಿಂದ ಅನುದಾನ ಬಿಡುಗಡೆಗೆ ತಡೆ ಬಂದಿತ್ತು. ಅನುದಾನವನ್ನೇ ನಂಬಿ ಇದ್ದ ಮನೆಗಳನ್ನೂ ಕೆಡವಿ ಫಲಾನುಭವಿಗಳು ಅತಂತ್ರರಾಗಿದ್ದರು. ಚುನಾವಣೆ ಪೂರ್ಣಗೊಂಡು ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ವೇಳೆಗೆ ಮಳೆಗಾಲ ಆರಂಭಗೊಳ್ಳುವ ಸೂಚನೆ ಇದ್ದಿದ್ದರಿಂದ ಸೂರಿಲ್ಲದೆ ಮತ್ತಷ್ಟು ಕಂಗಾಲಾಗಿದ್ದರು.ಈ ಬಗ್ಗೆ 'ಕನ್ನಡಪ್ರಭ' ಆರಂಭಿಸಿದ್ದ 'ನೀತಿ ಭೀತಿ' ಸರಣಿ ಆಂದೋಲನದಲ್ಲಿ ವರದಿ ಪ್ರಕಟಿಸಲಾಗಿತ್ತು.
ಭರದಿಂದ ಸಾಗುತ್ತಿದೆ ಕಾಮಗಾರಿ: ಚುನಾವಣೆ ಮುಗಿದ ಬಳಿಕ ಫಲಾನುಭವಿಗಳಿಗೆ ಪಂಚಾಯತ್, ಪುರಸಭೆ ಮೂಲಕ ಅನುದಾನ ನೀಡುತ್ತಿದ್ದು ಮಳೆಗಾಲ ಆರಂಭಗೊಳ್ಳುವ ಮೊದಲು ಮನೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಫಲಾನುಭವಿಗಳು ಮುಂದಾಗಬಹುದಾದ ತೊಂದರೆಯಿಂದ ಪಾರಾಗಿದ್ದಾರೆ.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ನಮ್ಮ ಮನೆ ಯೋಜನೆಯಡಿ ಸುಮಾರು 100 ಮಂದಿ ಫಲಾನುಭವಿಗಳಿದ್ದು ಫಲಾನುಭವಿಗಳಿಗೆ ಸರ್ಕಾರದ ಅನುದಾನ ಮಂಜೂರಾಗಿದ್ದು ಚೆಕ್ ವಿತರಿಸಲಾಗಿದೆ. ಸುಮಾರು 30 ಮನೆಗಳ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು ಮಳೆಗಾಲದೊಳಗೆ ಮನೆ ಕೆಡವಿದ್ದ ಎಲ್ಲಾ ಫಲಾನುಭವಿಗಳ ಮನೆಗಳು ಸಂಪೂರ್ಣಗೊಳ್ಳುವ ಸಾಧ್ಯತೆಯಿದೆ.
ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಾಜಪೇಯಿ ವಸತಿ ಯೋಜನೆಯಡಿ 15 ಫಲಾನುಭವಿಗಳಿದ್ದು ಅನುದಾನ ಮಂಜೂರಾಗಿದ್ದು ಯಾವುದೇ ಸಮಸ್ಯೆಯಿಲ್ಲ. ಉಳಿದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಫಲಾನುಭವಿಗಳಿಗೆ ಅನುದಾನ ಮಂಜೂರಾಗಿದ್ದು ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ.