ಮಾನಭಂಗ ಯತ್ನ: ವ್ಯಕ್ತಿ ವಿರುದ್ಧ ದೂರು
ಬೆಳ್ತಂಗಡಿ: ಮಾನಭಂಗ ಯತ್ನ ಪ್ರಕರಣದಲ್ಲಿ ವ್ಯಕ್ತಿ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಳದಂಗಡಿಯ ಸುಖೇಶ್ ಎಂಬಾತನೇ ಮಹಿಳೆಯ ಮಾನಭಂಗಕ್ಕೆ ಪ್ರಯತ್ನಿಸಿದ ಆರೋಪಿ. ಈತ ತನ್ನ ಶಾಮಿಯಾನ ಸೆಂಟರ್ನಲ್ಲಿ ಕೆಲಸಕ್ಕಿದ್ದ ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿ ಆಕೆಯಿಂದಲೇ ಚಪ್ಪಲಿ ಏಟು ತಿಂದಿದ್ದಾನೆ. ಮಂಗಳವಾರ ಈ ಘಟನೆ ನಡೆದಿದ್ದು ಒಕ್ಕಲಿಗ ಸಮುದಾಯದ ನೊಂದ ಮಹಿಳೆ ವೇಣೂರು ಠಾಣೆಗೆ ದೂರು ನೀಡಿದ್ದಾರೆ. ಪ್ರತಿಷ್ಠಿತ ಕುಟುಂಬದ ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲಾಗಿದೆ. ಅಳದಂಗಡಿಯಲ್ಲಿ ಶಾಮಿಯಾನ ವ್ಯವಹಾರ ನಡೆಸುತ್ತಿರುವ ಸುಖೇಶ್ ಸೋಮವಾರ ಮಧ್ಯಾಹ್ನ ಊಟದ ವೇಳೆ ತನ್ನ ಅಂಗಡಿಯ ಕೆಲಸದ ವಿವಾಹಿತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣ ಆಕೆ ಮಂಗಳವಾರ ಕೆಲಸ ಬಿಡುವುದಾಗಿ ತಿಳಿಸಿದ್ದು ಸಂಬಳ ಕೇಳುತ್ತಿದ್ದಾಗ ಮತ್ತೆ ಚಾಳಿ ಮುಂದುವರಿಸಿದ ಸಂದರ್ಭ ತನ್ನ ಕಾಲಿನಿಂದ ಚಪ್ಪಲಿ ಕಳಚಿ ಆರೋಪಿಯ ಕೆನ್ನೆಗೆ ಬಾರಿಸಿದ್ದಾಗಿ ತಿಳಿದುಬಂದಿದೆ.
ಪೊಲೀಸರಿಗೆ ಹಲ್ಲೆ ನಡೆಸಿದ
ಕಾರ್ಪೊರೇಟರ್ ಭೂಗತ
ಮಂಗಳೂರು: ಅಳಕೆ ಮೈದಾನ ಬಳಿ ಪೊಲೀಸರ ಲಾಠಿ, ವಾಕಿಟಾಕಿ ತೆಗೆದುಕೊಂಡು ಇಬ್ಬರು ಪೊಲೀಸರಿಗೆ ಹಲ್ಲೆ ನಡೆಸಿದ್ದ ಕಾರ್ಪೊರೇಟರ್ ಮತ್ತು ನಾಲ್ವರು ದುಷ್ಕರ್ಮಿಗಳು ಊರಿನಿಂದಲೇ ಪಲಾಯನ ಮಾಡಿದ್ದಾರೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಬಂಧನ ಭೀತಿ ಎದುರಿಸುತ್ತಿರುವ ಕಾರ್ಪೊರೇಟರ್ ಮತ್ತು ನಾಲ್ವರು ಊರು ಬಿಟ್ಟಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಳಕೆಯಲ್ಲಿ ಭಾನುವಾರ ಮಧ್ಯರಾತ್ರಿ ಮದ್ಯ ಸೇವಿಸಿ, ಗಲಾಟೆಯಲ್ಲಿ ತೊಡಗಿದ್ದರಿಂದ ಸ್ಥಳೀಯರು ಕಂಟ್ರೋಲ್ ರೂಮ್ಗೆ ದೂರು ನೀಡಿದ್ದರು. ಅಲ್ಲಿಗೆ ಬಂದಾಗ ಜನಪ್ರತಿನಿಧಿಯೇ ಜನರಿಗೆ ಕಂಟಕ ನೀಡುತ್ತಿರುವುದು ಬೆಳಕಿಗೆ ಬಂದಿತ್ತು. ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು.
ಎರಡು ಬಾರಿ ಅತ್ಯಾಚಾರ: ಗರ್ಭಿಣಿ ದೂರು
ಮಂಗಳೂರು: ಎರಡು ಬಾರಿ ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಿದ ಯುವಕನ ವಿರುದ್ಧ ಗರ್ಭಿಣಿಯಾದ ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂಲ್ಕಿಯ ಕರ್ನಿರೆಯ 28 ವರ್ಷದ ಯುವತಿ ಅಂಗಡಿಗೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಸಿಕ್ಕಿದ ಸುಧಾಕರ ಎಂಬಾತ ದಾರಿಗೆ ಅಡ್ಡಗಟ್ಟಿ ಕೈ ಹಿಡಿದೆಳೆದು ಕಾಡಿಗೆ ಕರೆದೊಯ್ದು ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಒಂದು ವಾರದ ಬಳಿಕ ಸುಧಾಕರ ಅದೇ ರೀತಿ ಎಳೆದೊಯ್ದು ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಮನೆಯವರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಸಿದ್ದ. ಇದೀಗ 5 ತಿಂಗಳ ಗರ್ಭಿಣಿಯಾಗಿರುವ ಯುವತಿ ಮಹಿಳಾ ಪೊಲೀಸರ ಬಳಿ ಪ್ರಕರಣ ದಾಖಲಿಸಿದ್ದಾರೆ.
ಅಧಿಕಾರಿಗಳ ಸೋಗಿನ
ಸುಲಿಗೆಕೋರರು ಜೈಲ್ಗೆ
ಮಂಗಳೂರು: ಮಿಲಿಟರಿ ಅಧಿಕಾರಿಗಳು ಎಂದು ಹೇಳಿ ಪ್ರವಾಸಿಗರನ್ನು ದೋಚಿ ಸಿಕ್ಕಿಬಿದ್ದ ಇಬ್ಬರು ಆರೋಪಿಗಳಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಸೋಮವಾರ ಮಧ್ಯರಾತ್ರಿ ದಾವಣಗೆರೆಯ ಪ್ರವಾಸಿಗರು ಕಾರ್ನಲ್ಲಿ ಬರುತ್ತಿದ್ದ ವೇಳೆ ಎನ್ಎಂಪಿಟಿ ಕಾಲನಿ ನಿವಾಸಿಗಳಾದ ರಾಹುಲ್ (21), ದೀಪಕ್ (23) ಅಡ್ಡಗಟ್ಟಿ ತಾವು ಮಿಲಿಟರಿ ಅಧಿಕಾರಿಗಳು ಎಂದು ಹೇಳಿ 5 ಸಾವಿರ ಸುಲಿಗೆ ಮಾಡಿದ್ದರು. ಎಟಿಎಂ ಕಸಿದುಕೊಂಡು ಎಟಿಎಂ ಕೇಂದ್ರಕ್ಕೆ ಹೋಗಿದ್ದು, ಅಲ್ಲಿ ಹಣ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ನಂದನೇಶ್ವರ ದೇವಸ್ಥಾನ ಬಳಿ ಇಳಿದು ಓಡಿ ಪರಾರಿಯಾಗಿದ್ದರು.
ಕರಿಮಣಿ ಸರ ಅಪಹರಣ
ಮಂಗಳೂರು: ಶಿಬರೂರು ದೇಲಂತಬೆಟ್ಟು ಬಳಿ ನಡೆದು ಹೋಗುತ್ತಿದ್ದ ಮಹಿಳೆ ಕತ್ತಿನಿಂದ ಬೈಕ್ನಲ್ಲಿ ಬಂದ ಚೋರರು ಕರಿಮಣಿ ಸರ ಕಳವು ಮಾಡಿದ್ದಾರೆ. ದೇಲಂತಬೆಟ್ಟು ನಿವಾಸಿ ವಾರಿಜಾ ಬುಧವಾರ ಬೆಳಗ್ಗೆ 10 ಗಂಟೆಗೆ ಮನೆ ಕಡೆಯಿಂದ ದೇಲಂತಬೆಟ್ಟು ರಾಜೀವನಗರದ ಮದುವೆ ಮನೆಗೆ ತೆರಳುತ್ತಿದ್ದರು ಈ ವೇಳೆ ಮುಟ್ಟಿಕಲ್ಲು ನಾಗಬನ ರಸ್ತೆಯಲ್ಲಿ ಶಿಬರೂರು ಕಡೆಯಿಂದ ಕಪ್ಪು ಬೈಕ್ನಲ್ಲಿ ಆಗಮಿಸಿದ 28 ವರ್ಷದ ಇಬ್ಬರು ಯುವಕರು ಅಡ್ಡಗಟ್ಟಿದ್ದಾರೆ. ಹಿಂಬದಿ ಕುಳಿತ ಯುವಕ ಕರಿಮಣಿ ಸರ ಎಳೆದಿದ್ದಾನೆ. ಕಳ್ಳರು ಬೈಕ್ನಲ್ಲಿ ಕಿನ್ನಿಗೋಳಿ ಕಡೆಗೆ ಹೋಗಿದ್ದಾರೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗುಂಡು ಹಾರಿಸಿಕೊಂಡು ಗೃಹಸ್ಥ ಆತ್ಮಹತ್ಯೆ
ಉಡುಪಿ: ನಗರದ ವಸತಿಗೃಹದಲ್ಲಿ ಗೃಹಸ್ಥರೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ ಘಟನೆ ಮಂಗಳವಾರ ನಡೆದಿದೆ. ಸಂತೋಷ ಮೊಂತೆರೊ (37) ಮೃತರು. ಅವರು 8 ವರ್ಷಗಳ ಕಾಲ ವಿದೇಶದಲ್ಲಿದ್ದು, ಕಳೆದ 2 ವರ್ಷಗಳಿಂದ ಊರಿನಲ್ಲಿ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ 1.30ಕ್ಕೆ ಸಂತೋಷ ಮೊಂತೆರೊ ಮನೆಯಿಂದ ಹೊರಗಡೆ ಹೋದವರು ಸಂಜೆ 6.30ಕ್ಕೆ ಮನೆಗೆ ಬಂದಿದ್ದರು. ರಾತ್ರಿ ಸುಮಾರು 9.30ಕ್ಕೆ ಸಂತೋಷ ಮೊಂತೆರೊ ಮನೆಯಲ್ಲಿ ಕುಳಿತು ಮದ್ಯ ಸೇವನೆ ಮಾಡಿದ್ದರು. ನಂತರ ಪತ್ನಿ ಹಾಗೂ ಮಗು ಮಲಗಲೆಂದು ಒಳಗೆ ಹೋದಾಗ, ಅವರು ಕಪಾಟಿನಿಂದ ಪಿಸ್ತೂಲನ್ನು ತೆಗೆದು ತಾನು ಶೂಟ್ ಮಾಡಿಕೊಳ್ಳುತ್ತೇನೆ ಎಂದು ಹೇಳಿ ತನ್ನ ತಲೆಗೆ ಗುರಿಮಾಡಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ರೇಖಾ ಮೊಂತೆರೊ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಉಡುಪಿ: ಹೆಬ್ರಿ ಕಳತ್ತೂರು ಗ್ರಾಮದ ಚಪಾಲ್ ಜೆಡ್ಡು ಎಂಬಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಮಣಿ (45) ಮೃತರು. ಅವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಉಳ್ಳವರಾಗಿದ್ದು ಅವರ ಮಗಳ ಸಂಸಾರದ ವಿಚಾರದಲ್ಲಿ ಮಾನಸಿಕವಾಗಿ ನೊಂದು ಮಂಗಳವಾರ ರಾತ್ರಿ 7.30ಕ್ಕೆ ಮನೆಯ ಅಂಗಳದಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಬಾಯಿಂದ ನೊರೆ ಕಾರುತ್ತಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ನಡುವೆ ಸಾವು ಸಂಭವಿಸಿದೆ. ಈ ಬಗ್ಗೆ ಮಗ ಮಂಜುನಾಥ ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಿಂದ ನಗ,ನಗದು ಕಳವು
ಕೋಟ: ಇಲ್ಲಿನ ಪಾಂಡೇಶ್ವರ ಗ್ರಾಮದ ಚರ್ಚ್ ಬಳಿಯ ಮನೆಯೊಂದರಲ್ಲಿ ಬುಧವಾರ ಲಕ್ಷಾಂತರ ರು. ಮೌಲ್ಯದ ನಗ, ನಗದು ಕಳವಾಗಿದೆ. ಇಲ್ಲಿನ ನಿವಾಸಿ ವಿನೋದ ನಾಯಕ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ರಾತ್ರಿ 11 ಗಂಟೆಯಿಂದ 12.15ರ ನಡುವೆ ಮನೆಯ ಬಾಗಿಲಿನ ಚಿಲಕದ ಕೊಂಡಿ ಒಡೆದು ಮನೆಯ ಒಳಗೆ ಪ್ರವೇಶಿಸಿ ಬೆಡ್ ರೂಮಿನ ಕಪಾಟಿನಲ್ಲಿದ್ದ ಸುಮಾರು 8.5 ಪವನ್ ತೂಕದ ಚಿನ್ನಾಭರಣ ಹಾಗೂ ಒಂದು ನೋಕಿಯಾ ಮೊಬೈಲ್ ಸೆಟ್ ಕಳವಾಗಿದೆ. ಕಳುವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ರು. 1.30 ಲಕ್ಷ ಎಂದು ನಾಯಕ್ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಕ್ತರ ಚೀಲದಿಂದ ದುಡ್ಡು ಕಳವು
ಕುಂದಾಪುರ: ಇಲ್ಲಿನ ಕುಂಭಾಶಿ ಗ್ರಾಮದ ಆನೆಗುಡ್ಡೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರೊಬ್ಬರ ಪರ್ಸಿನಿಂದ ಲಕ್ಷಾಂತರ ರು. ನಗದು ಎಗರಿಸಿದ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಸರೋಜ ವಿ. ಕುಮಾರ್ ಸುಮಾರು ಮಧ್ಯಾಹ್ನ ಆನೆಗುಡ್ಡೆಯ ಗಣಪತಿ ದೇವರ ದರ್ಶನಕ್ಕೆಂದು ಪರಿವಾರದವರ ಸಮೇತ ಬಂದಿದ್ದರು. ಈ ಸಂದರ್ಭದಲ್ಲಿ ಅವರ ವ್ಯಾನಿಟಿ ಬ್ಯಾಗಿನಲ್ಲಿದ್ದ ಪರ್ಸ್ ಅಪರಹರಣವಾಗಿದೆ. ಅದರಲ್ಲಿ ಸುಮಾರು 63 ಗ್ರಾಂ. ತೂಕದ 3 ಚಿನ್ನದ ಸರಗಳು ಹಾಗೂ 2 ಪೆಂಡೆಂಟ್ಗಳಿದ್ದವು. ಇದರ ಅಂದಾಜು ಮೊತ್ತ 1,76,600 ಆಗಿರುತ್ತದೆ ಎಂದು ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಡಕೋವಿಯೊಂದಿಗೆ ವ್ಯಕ್ತಿ ಸೆರೆ
ಸುಳ್ಯ: ಪರವಾನಗಿ ರಹಿತವಾಗಿ ನಾಡಕೋವಿ ಹೊಂದಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಐವರ್ನಾಡು ಗ್ರಾಮದ ಗುತ್ತಿಗಾರುಮೂಲೆ ಮಂಜುನಾಥ (63) ಬಂಧಿತ ಆರೋಪಿ. ಈತನಿಂದ ಒಂದು ನಾಡಕೋವಿ ವಶಪಡಿಸಿಕೊಳ್ಳಲಾಗಿದೆ. ಮಂಜುನಾಥ ತನ್ನ ಸಮೀಪದ ಮನೆಯವರನ್ನು ಅವಾಚ್ಯ ಪದಗಳಿಂದ ನಿಂದಿಸಿ ನಾಡಕೋವಿ ತೋರಿಸಿ ಬೆದರಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಸಮೀಪದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ದಾಳಿ ನಡೆಸಿದ ಸುಳ್ಯ ಎಸ್.ಐ. ಗಿರೀಶ ಮತ್ತು ಸಿಬ್ಬಂದಿ ಈತನನ್ನು ಬಂಧಿಸಿ ನಾಡಕೋವಿ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿಗೆ ತೆರಳಿದ ಯುವಕ ನಾಪತ್ತೆ
ಮೂಲ್ಕಿ: ಇಲ್ಲಿನ ಕೆ.ಎಸ್. ರಾವ್ ನಗರದ ಬಿಜಾಪುರ ಕಾಲೋನಿಯ ಯುವಕನೋರ್ವ ಬೆಂಗಳೂರಿಗೆಂದು ಹೋದವನು ನಾಪತ್ತೆಯಾಗಿದ್ದಾನೆ. ಮಡಿವಾಳ ಪೂಜಾರಿ ಎಂಬವರ ಪುತ್ರ ಮಂಜುನಾಥ (24) ವ್ಯವಹಾರದ ನಿಮಿತ್ತ ಬೆಂಗಳೂರಿಗೆ ಹೋದವನು ವಾಪಸ್ ಮನೆಗೆ ಬಂದಿಲ್ಲ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಈ ಬಗ್ಗೆ ಸಹೋದರಿ ಭಾಗ್ಯವಂತಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಜುನಾಥ 5 ಅಡಿ 4 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ, ತೆಳು ಮೀಸೆ ಹೊಂದಿದ್ದು, ಕನ್ನಡ, ತುಳು, ಹಿಂದಿ ಭಾಷೆ ಬಲ್ಲವನಾಗಿದ್ದಾನೆ. ಈತನ ಕುರಿತು ಮಾಹಿತಿ ಸಿಕ್ಕಿದಲ್ಲಿ ದೂರವಾಣೆ ಸಂಖ್ಯೆ 0824 2290533 ಸಂಪರ್ಕಿಸುವಂತೆ ಮೂಲ್ಕಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.