ನಗರ ಸಾರಿಗೆಗೆ ಸೂಚನೆ
ಮಂಗಳೂರು: ಕಂಕನಾಡಿ ರೇಲ್ವೆ ನಿಲ್ದಾಣಕ್ಕೆ(ಮಂಗಳೂರು ಜಂಕ್ಷನ್)ಸರ್ಕಾರಿ ಬಸ್ ಸೌಲಭ್ಯ ಒದಗಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ದ.ಕ.ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಜಂಕ್ಷನ್ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ರಿಕ್ಷಾ ಸೌಲಭ್ಯ ಒದಗಿಸುವಂತೆ ಕೋರಿ ನೈಋತ್ಯ ರೇಲ್ವೆ ಮೈಸೂರು ವಿಭಾಗದ ರೇಲ್ವೆ ಸಲಹಾ ಸಮಿತಿ ಸದಸ್ಯ ಸುದರ್ಶನ ಪುತ್ತೂರು ಇವರು ಫಾಲ್ಘಾಟ್ ರೇಲ್ವೆ ಅಧಿಕಾರಿಗಳನ್ನು ಕೋರಿದ್ದರು. ಪ್ರೀಪೇಯ್ಡ್ ಆಟೋ ಸೌಲಭ್ಯ ಹಾಗೂ ಕೆಎಸ್ಆರ್ಟಿಸಿ ನಗರ ಸಾರಿಗೆ ಆರಂಭಿಸುವಂತೆ ಸಂಸದರಿಗೂ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಸದರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದು ಸುದರ್ಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬಯಲಾಟ, ಸನ್ಮಾನ
ಸುಬ್ರಹ್ಮಣ್ಯ: ಕೊಲ್ಲಮೊಗ್ರು ಶಾಲಾ ವಠಾರದಲ್ಲಿ ಶುಕ್ರವಾರ ಹರಕೆ ರೂಪದಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಲಿವೆ. ಅಧ್ಯಕ್ಷತೆಯನ್ನು ಶಾಸಕ ಎಸ್.ಅಂಗಾರ ವಹಿಸಲಿದ್ದಾರೆ. ಅತಿಥಿಗಳಾಗಿ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಪಾಲ್ಗೊಳ್ಳಲಿದ್ದಾರೆ.ಹಿರಿಯ ಹವ್ಯಾಸಿ ಕಲಾವಿದರಾದ ಎಂ.ಆರ್.ಹರಿಯಪ್ಪ ಮತ್ತು ಗಿರಿಧರ ಅಂಬೆಕಲ್ಲು ಅವರನ್ನು ಸನ್ಮಾನಿಸಲಾಗುವುದು.
ನಾಳೆ ತರಬೇತಿ
ಮಂಗಳೂರು: ಯೆಯ್ಯಾಡಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಮಹಿಳಾ ವಿಭಾಗದ ವತಿಯಿಂದ ಜೂ. 1 ರಂದು ಸಂಘದ ಸಭಾಂಗಣದಲ್ಲಿ 'ಸ್ಲಿಂಗ್ ಬ್ಯಾಗ್ ಸ್ಟಿಚ್ಚಿಂಗ್' ತರಬೇತಿ ನಡೆಯಲಿದೆ. ತರಬೇತಿಯು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ತನಕ ನಡೆಯಲಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮಹಿಳಾ ವಿಭಾಗದ ಕಾರ್ಯದರ್ಶಿ ಹರಿಣಾ ಜೆ.ರಾವ್- 9481916119 ಸಂಪರ್ಕಿಸಬಹುದು.
ತಾಲೂಕು ಕಚೇರಿಗೆ ದಿಢೀರ್ ಭೇಟಿ
ಸುಳ್ಯ: ಸುಳ್ಯ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಕಚೇರಿ ಕೆಲಸಗಳಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ವಿದ್ಯಾರ್ಥಿಗಳಿಂದ ದೂರು ಬಂದ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ತಾಲೂಕು ಕಚೇರಿಗೆ ಭೇಟಿ ಕೊಟ್ಟರು. ತಹಸೀಲ್ದಾರ್ ಅವರಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದಾಗ ತಹಸೀಲ್ದಾರರು ಅಧಿಕಾರಿಗಳನ್ನು ಕರೆಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಚೇರಿ ಕೆಲಸ ನಿರ್ವಹಿಸಲು ಸೂಚಿಸಿದರು. ಶಾಲೆ ಆರಂಭಗೊಂಡಾಗ ಶಾಲೆಗೆ ಸೇರಲು ಬೇಕಾಗುವ ಜಾತಿ ಮತ್ತು ಆದಾಯ ದಾಖಲಾತಿಗಳನ್ನು ಕೊಡಲು ವಿಳಂಬ ಮಾಡುತ್ತಿರುವವರ ಬಗ್ಗೆ, ತಾಲೂಕು ಕಚೇರಿಗಳಲ್ಲಿ ಮುಖ್ಯವಾಗಿ ದಲ್ಲಾಳಿಗಳ ಹಾವಳಿಗಳನ್ನು ನಿಲ್ಲಿಸುವಂತೆ, ಪಹಣಿಪತ್ರಗಳಲ್ಲಿ ಸಾಲ ನೋಂದಣಿಯಾದುದನ್ನು ತೆಗೆಸಲು ಕೆಲ ಅಧಿಕಾರಿಗಳು ವಿಳಂಬ ಮಾಡಿಕೊಂಡು ಲಂಚಕ್ಕೆ ಕೇಳುವುದು ಮತ್ತು ತಾಲೂಕು ಕಚೇರಿಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಡುವ ವಿಷಯಗಳನ್ನು ಪ್ರಸ್ತಾಪಿಸಲಾಯಿತು. ಸುಧೀರ್ ರೈ ಮೇನಾಲ, ಸತ್ಯಕುಮಾರ್ ಅಡಿಂಜ, ಬೀರಾಮೊದೀನ್, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ಶುಭಕರ ನಾಯಕ್, ಮಹಮ್ಮದ್ ಕುಂಞ ಗೂನಡ್ಕ, ಗಂಗಾಧರ ಮೇನಾಲ, ಲಕ್ಷ್ಮಣ ಶೆಣೈ, ಪುರುಷೋತ್ತಮ ಭಾಗವಹಿಸಿದ್ದರು.
ಪ್ರಸನ್ನ ಕಾಲೇಜ್ಗೆ ಉತ್ತಮ ಫಲಿತಾಂಶ
ಮಂಗಳೂರು: ನಾಲ್ಕು ವಿಭಾಗಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕು ಲಾಯ್ಲದ ಪ್ರಸನ್ನ ಎಂಜಿನಿಯರಿಂಗ್ ಕಾಲೇಜ್ ಈ ವರ್ಷದ ಫಲಿತಾಂಶದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ವಿದ್ಯಾರ್ಥಿಗಳಿಗೆ ಕಾಲೇಜ್ ಶುಲ್ಕವನ್ನು ಕೇವಲ ರು. 40 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನಿಷ್ಠ ಶುಲ್ಕ ಹಾಗೂ ಉತ್ತಮ ಸೌಲಭ್ಯಗಳೊಂದಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನ ಲಾಯ್ಲದಲ್ಲಿ ಸ್ಥಾಪನೆಗೊಂಡಿರುವ ಪ್ರಸನ್ನ ಪಾಲಿಟೆಕ್ನಿಕ್ ಹಾಗೂ ಐದು ವಿಭಾಗಗಳನ್ನು ಹೊಂದಿರುವ ಪ್ರಸನ್ನ ಐಟಿಐ ಸಂಸ್ಥೆ, ಕಳೆದ ಸಾಲಿನಲ್ಲಿ ಆರಂಭಗೊಂಡ ಪ್ರಸನ್ನ ಪದವಿ ಪೂರ್ವ ಕಾಲೇಜ್, ಪ್ರಥಮ ದರ್ಜೆ ಕಾಲೇಜ್, ಎಲ್ಕೆಜಿಯಿಂದ 10ನೇ ತರಗತಿ ವರೆಗೆ ಶಿಕ್ಷಣ ನೀಡುವ ವಸತಿ ಸಹಿತ ವ್ಯವಸ್ಥೆಯಿರುವ ಪ್ರಸನ್ನ ರೆಸಿಡೆನ್ಶಿಯಲ್ ಸ್ಕೂಲ್, ಪ್ರಥಮ ದರ್ಜೆ ಕಾಲೇಜ್, ಬಿಎಡ್, ಡಿಎಡ್ ಕಾಲೇಜ್, ನರ್ಸಿಂಗ್ ಕಾಲೇಜ್ಗಳಲ್ಲಿ 2000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಗಂಗಾಧರ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ-08256 233808.
ಸಿಇಟಿ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ
ಮಂಗಳೂರು: ಈ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶದಲ್ಲಿ ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ 1149 ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು 10 ಸಾವಿರದೊಳಗಿನ ರ್ಯಾಂಕ್ಗಳನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್ನಲ್ಲಿ 2, ವೈದ್ಯಕೀಯದಲ್ಲಿ 9 ಮಂದಿ 100ರೊಳಗಿನ ರ್ಯಾಂಕ್, ಎಂಜಿನಿಯರಿಂಗ್ನಲ್ಲಿ 6, ವೈದ್ಯಕೀಯದಲ್ಲಿ 15 ಮಂದಿ 200ರೊಳಗಿನ ರ್ಯಾಂಕ್, ಎಂಜಿನಿಯರಿಂಗ್ನಲ್ಲಿ 25, ವೈದ್ಯಕೀಯದಲ್ಲಿ 40 ಮಂದಿ 500ರೊಳಗಿನ ರ್ಯಾಂಕ್, ಎಂಜಿನಿಯರಿಂಗ್ನಲ್ಲಿ 65, ವೈದ್ಯಕೀಯದಲ್ಲಿ 75 ಮಂದಿ 1000ದೊಳಗಿನ ರ್ಯಾಂಕ್, ಎಂಜಿನಿಯರಿಂಗ್ನಲ್ಲಿ 331 ಮಂದಿ, ವೈದ್ಯಕೀಯದಲ್ಲಿ 297 ಮಂದಿ 5000ದೊಳಗಿನ ರ್ಯಾಂಕ್, ಎಂಜಿನಿಯರಿಂಗ್ನಲ್ಲಿ 596, ವೈದ್ಯಕೀಯದಲ್ಲಿ 553 ಮಂದಿ 10 ಸಾವಿರದೊಳಗಿನ ರ್ಯಾಂಕ್ ಗಳಿಸಿದ್ದಾರೆ. ವಿನಾಯಕ ಅರೆಗುಳಿ ಎಂಜಿನಿಯರಿಂಗ್ನಲ್ಲಿ 82ನೇ ರ್ಯಾಂಕ್ ಗಳಿಸಿದ್ದಾರೆ. ವೈದ್ಯಕೀಯ ವಿಭಾಗದಲ್ಲಿ ಅನ್ವಿತಾ ಎಂ. 34ನೇ, ಶಿವರಾಜ್ ಬಿ. ಸಜ್ಜನ್ 49, ಸುಕೇಶ್ ಕೆ.ಎಸ್.56, ಮಂಜುನಾಥ ವಿ. ಕುನ್ನಾಲ್ 58, ಆಕಾಶ್ ರಾಮರಡ್ಡಿ ಕುರ್ತಕೋಟಿ 77, ನವೀನ್ ಸಿ.ಹೆಗ್ಡೆ 82, ದಿನಕರ ಎ.ಎಲ್. 84, ಸಹನಾ ಬಿ.92, ವಿಶ್ವಾಸ್ ಎಲ್.94ನೇ ರ್ಯಾಂಕ್ ಗಳಿಸಿದ್ದಾಗಿ ಸಂಸ್ಥೆ ಪ್ರಕಟಣೆ ತಿಳಿಸಿದೆ.