ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಳೆಯಿಂದ ಡೆಂಘೀ, ಮಲೇರಿಯಾ ನಿಯಂತ್ರಣ ಜಾಗೃತಿ ಅಭಿಯಾನ

Lingaraj Badiger
Updated On : 31 May 2013, 12:39 pm

ಮಂಗಳೂರು: ಜಿಲ್ಲೆಯಲ್ಲಿ ಡೆಂಘೀ, ಮಲೇರಿಯಾ ನಿಯಂತ್ರಣಕ್ಕೆ ವಿಶೇಷ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ ಹೇಳಿದ್ದಾರೆ. ಗುರುವಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗೃತ ಸಮಾಜದಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಎಲ್ಲ ವೈದ್ಯಕೀಯ ಸಂಸ್ಥೆಗಳ ನೆರವು ಅಗತ್ಯವಿದೆ ಎಂದರು. ಜೂ. 1ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಎಲ್ಲ ಸರ್ಕಾರಿ ವೈದ್ಯರುಗಳಿಗೆ ಡೆಂಘೀ ನಿಯಂತ್ರಣದ ಕುರಿತು ವಿಶೇಷ ಮಾಹಿತಿ ಹಾಗೂ ಮಧ್ಯಾಹ್ನ 12 ರಿಂದ 1ರ ತನಕ ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರಿಗೆ ಮಾಹಿತಿ ಮತ್ತು ಕರ್ತವ್ಯ ಬೋಧನೆ ಮಾಡಲಾಗುವುದು. ಮಧ್ಯಾಹ್ನ 2 ರಿಂದ ಸಂಜೆ 4ರವರೆಗೆ ಪುರುಷ ಆರೋಗ್ಯ ಸಹಾಯಕರಿಗೆ ಆರೋಗ್ಯ ಜಾಗೃತಿ ಕುರಿತು ವಿಶೇಷ ತರಬೇತಿ ನೀಡಲಾಗುವುದು ಎಂದು ಹೇಳಿದರು. ಜೂ. 3 ರಿಂದ 7ರ ತನಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಧೀನ ಸಂಸ್ಥೆಗಳಲ್ಲಿ ಸಮುದಾಯ ಆರೋಗ್ಯ ದಿನಾಚರಣೆ ಮಾದರಿಯಲ್ಲಿ ಡೆಂಘೀ, ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಜನಪ್ರತಿನಿಧಿಗಳು ಹಾಗೂ ಪಂಚಾಯ್ತಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಪಾಲ್ಗೊಳ್ಳುವರು.
ಜೂ. 10 ರಿಂದ 15ರವರೆಗೆ ಎಎನ್‌ಎಂ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವಿನಿಂದ ಮನೆ ಮನೆ ತೆರಳಿ ಮಾಹಿತಿ ನೀಡಲಾಗುವುದು. ಎಲ್ಲ ತಾಲೂಕುಗಳಲ್ಲಿ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ವೈದ್ಯಾಧಿಕಾರಿ, ಸಿಡಿಪಿಒ, ಬಿಇಒ ಇವರನ್ನು ಸದಸ್ಯರನ್ನಾಗಿಸಿ ಟಾಸ್ಕ್ ಫೋರ್ಸ್ ರಚಿಸಲಾಗುವುದು.
ಗ್ರಾಮಮಟ್ಟದಲ್ಲಿ ಪಿಡಿಒಗಳು ಹಾಗೂ ತಾಲೂಕು ವೈದ್ಯಾಧಿಕಾರಿ ಹಾಗೂ ಹಿರಿಯ ಆರೋಗ್ಯ ಸಹಾಯಕರ ಸಭೆ ಕರೆದು ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಲು, ಸ್ವಚ್ಛತೆ ಕಾಪಾಡಲು ನಿರ್ದೇಶನ ನೀಡಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement