ನೆಟ್ಟಣ ಮುಳುಗು ಸೇತುವೆಗೆ ಮುಕ್ತಿ ಎಂದು?
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಉಪ್ಪಿನಂಗಡಿ ರಸ್ತೆಯಲ್ಲಿ ಕುಕ್ಕೆ ಕ್ಷೇತ್ರದಿಂದ ಸುಮಾರು 11 ಕಿ.ಮೀ. ದೂರದಲ್ಲಿರುವ ಬಿಳಿನೆಲೆ ಗ್ರಾ.ಪಂ. ವ್ಯಾಪ್ತಿಯ ನೆಟ್ಟಣದಲ್ಲಿರುವ ಸೇತುವೆಯು ತೀರ ಹಳೆಯದಾಗಿದ್ದು, ದುಃಸ್ಥಿತಿಯಲ್ಲಿದೆ. ಅಲ್ಲದೆ, ಮಳೆಗಾಲದಲ್ಲಿ ನಿರಂತರವಾಗಿ ಮುಳುಗುತ್ತ ಪ್ರಯಾಣಿಕರನ್ನು ಸಂಕಷ್ಟಕ್ಕೀಡುಮಾಡುತ್ತಿದ್ದು, ಈ ಸೇತುವೆಗೆ ಕಾಯಕಲ್ಪ ನೀಡುವುದು ಅಥವಾ ನೂತನ ಸೇತುವೆ ನಿರ್ಮಿಸುವ ಅನಿವಾರ್ಯತೆಯಿದೆ.
ನೆಟ್ಟಣ ಹೊಳೆಗೆ ಅಡ್ಡಲಾಗಿ ಸೇತುವೆಯೊಂದನ್ನು ಅನೇಕ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಘಟ್ಟ ಪ್ರದೇಶದಿಂದ ರಭಸವಾಗಿ ನೀರಿನ ಪ್ರವಾಹವು ಈ ನದಿಯಲ್ಲಿ ಹರಿದು ಬಂದು ಅತಿ ತಗ್ಗಿನಲ್ಲಿರುವ ಈ ಸೇತುವೆಯು ನಿರಂತರವಾಗಿ ಮುಳುಗಡೆಯಾಗುತ್ತದೆ. ಇದರಿಂದಾಗಿ ಪ್ರಯಾಣಿಕರು ರಸ್ತೆಯ ಇಕ್ಕೆಲಗಳಲ್ಲಿ ತಾಸುಗಟ್ಟಲೆ ಕಾಯಬೇಕಾಗುತ್ತದೆ. ಸಮೀಪದಲ್ಲೇ ಇರುವ ರೈಲು ನಿಲ್ದಾಣಕ್ಕೆ ತೆರಳುವ ಭಕ್ತರು ಕಷ್ಟಪಡಬೇಕಾಗುತ್ತದೆ. ಸೇತುವೆಯ ಮುಳುಗಡೆಯಿಂದ ಅನೇಕ ಭಕ್ತರು ರೈಲನ್ನು ತಪ್ಪಿಸಿಕೊಂಡ ಉದಾಹರಣೆಗಳೂ ಇವೆ. ಅಲ್ಲದೆ ನೆಟ್ಟಣ- ಮರ್ದಾಳ- ಇಚ್ಲಂಪಾಡಿ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳುವ ಮತ್ತು ಅಲ್ಲಿಂದ ಬರುವ ಭಕ್ತರು ಸೇತುವೆ ಮುಳುಗಡೆಯಿಂದ ತ್ರಾಸಪಡಬೇಕಾಗುತ್ತದೆ. ಶಾಲೆ- ಕಾಲೇಜುಗಳು ಬಿಡುವ ಸಂದರ್ಭ ಸೇತುವೆ ಮುಳುಗಡೆಯಾದರೆ ವಿದ್ಯಾರ್ಥಿಗಳು ಮನೆ ತಲುಪುವಾಗ ಮಧ್ಯರಾತ್ರಿಯಾದ ಉದಾಹರಣೆಗಳು ಅನೇಕ ಇವೆ.
ಶಿಥಿಲಗೊಂಡ ಸೇತುವೆ ಕಂಬಗಳು: ಮಳೆಗಾಲದಲ್ಲಿ ಸುಮಾರು 3-4 ಬಾರಿ ಸೇತುವೆ ಮೇಲೆ ನೀರು ಉಕ್ಕಿ ಹರಿದು ಹಲವು ತಾಸುಗಳ ಕಾಲ ಸಂಚಾರ ಸ್ಥಗಿತಗೊಳ್ಳುತ್ತದೆ. ಪ್ರವಾಹದೊಂದಿಗೆ ದೊಡ್ಡ ಮರಗಳು ನೀರಿನ ಸೆಳೆತದೊಂದಿಗೆ ಬರುತ್ತವೆ. ಇಂತಹ ಮರಗಳು ಸೇತುವೆ ಕಂಬಗಳಿಗೆ ಬಡಿದು ಕಂಬಗಳು ಶಿಥಿಲಗೊಂಡಿವೆ. ಅಲ್ಲದೆ ಸೇತುವೆ ಸುತ್ತಲೂ ಮರಗಳು ರಾಶಿ ಬಿದ್ದಿವೆ. ಆದ್ದರಿಂದ ಮಳೆಗಾಲಕ್ಕೆ ಮೊದಲು ಸೇತುವೆ ಪಕ್ಕದಲ್ಲಿದ್ದ ಮರಗಳನ್ನು ತೆಗೆದು ಇಕ್ಕೆಲಗಳಲ್ಲಿ ಹೂಳೆತ್ತುವ ಕಾರ್ಯ ನೆರವೇರಿಸಿದರೆ ಸೇತುವೆ ಮುಳುಗುವ ಪ್ರಮಾಣವನ್ನು ಕಡಿಮೆಗೊಳಿಸಬಹುದು ಎನ್ನುತ್ತಾರೆ ಸ್ಥಳೀಯರು. ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸುವುದು ಅತ್ಯವಶ್ಯಕ. ಸೇತುವೆಯ ಕಂಬಗಳನ್ನು ದುರಸ್ತಿಗೊಳಿಸುವತ್ತ ಕೂಡ ಇಲಾಖೆ ಗಮನ ಹರಿಸುವುದು ಸೂಕ್ತ. ಸೇತುವೆಗೆ ಇಕ್ಕೆಲಗಳಲ್ಲಿ ಅಡೆತಡೆಗಳನ್ನು ನಿರ್ಮಿಸಬೇಕಾದುದು ಅನಿವಾರ್ಯವಾಗಿದೆ.