ಪ್ರಕೃತಿ ವಿಕೋಪ ನಿರ್ವಹಣೆ: ಸುಳ್ಯದಲ್ಲಿ ಮುಂಜಾಗ್ರತಾ ಸಭೆ
ಸುಳ್ಯ: ಎಲ್ಲಾ ಇಲಾಖೆಗಳೂ ತಮ್ಮ ಇಲಾಖೆಯ ವತಿಯಿಂದ ಕಂಟ್ರೋಲ್ ರೂಂ ತೆರೆದು ಅದರ ವರದಿಯನ್ನು ತಾಲೂಕು ಕಚೇರಿಗೆ ನೀಡಬೇಕು ಎಂದು ಸುಳ್ಯ ತಹಸೀಲ್ದಾಲ್ ಟಿ.ಎಂ. ವೇಣುಗೋಪಾಲ್ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಳೆಗಾಲಕ್ಕೆ ಮುಂಚಿತವಾಗಿ ಮುಂಜಾಗ್ರತಾ ಕ್ರಮಗಳ ಕುರಿತಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಇಲಾಖೆಗಳೂ 24 ಗಂಟೆ ಕೆಲಸ ಮಾಡುವ ಕಂಟ್ರೋಲ್ ರೂಂ ತೆರೆಯಬೇಕು ಮತ್ತು ಕಾರ್ಯಾಚರಣೆಗೆ ತಂಡವನ್ನು ರಚಿಸಬೇಕು ಎಂದು ಅವರು ಸೂಚಿಸಿದರು.
ರಸ್ತೆಯ ಮೇಲೆ ಜಲಾವೃತವಾಗುವ ಸ್ಥಳಗಳಲ್ಲಿ, ರಸ್ತೆ ಮೇಲೆ ನೀರು ಹರಿಯುವ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಚರಂಡಿಗಳನ್ನು ಶುಚಿಗೊಳಿಸಿ ನೀರು ಹರಿಯುವಂತೆ ಮಾಡಬೇಕು. ಮಳೆಗಾಲದಲ್ಲಿ ಪರಿಹಾರ ಕಾರ್ಯಗಳಿಗೆ ಬೇಕಾದ, ಕ್ರೇನ್, ಜೆಸಿಬಿ, ದೋಣಿ, ಗರಗಸ, ಈಜುಗಾರರ ಮತ್ತಿತರರ ವಿವರಗಳನ್ನು ಪಡೆದು ಸಂಗ್ರಹಿಸಿಡಬೇಕು ಎಂದು ಅವರು ಸೂಚಿಸಿದರು.
ಅಗ್ನಿಶಾಮಕ ದಳ, ಗೃಹರಕ್ಷಕ ದಳಗಳಿಗೆ ಬೇಕಾದ ಸಲಕರಣೆಗಳು ಸರಿಯಾಗಿ ಸರಬರಾಜು ಅಗುತ್ತಿಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಅದಕ್ಕೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಮಳೆಗಾಲದಲ್ಲಿ ಮಾನವ ಅಥವಾ ಪ್ರಾಣಿಗಳ ಅಸಹಜ ಸಾವು ಸಂಭವಿಸಿದರೆ ಮರಣೋತ್ತರ ವರದಿಯನು ಕೂಡಲೇ ದೊರೆಯುವಂತೆ ವ್ಯವಸ್ಥೆ ಮಾಡಲು ಮತ್ತು ಸಾಂಕ್ರಾಮಿಕ ರೋಗಗಳ ತಡೆಗೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಮತ್ತು ಪಶು ಸಂಗೋಪನಾ ಇಲಾಖೆಗೆ ತಿಳಿಸಲಾಯಿತು. ತುಂಬಿ ಹರಿಯುವ ಕುಮಾರಧಾರಾ ನದಿಯ ಮೇಲಿನ ಮುಳುಗು ಸೇತುವೆಗೆ ಹೆಚ್ಚು ಸುರಕ್ಷ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ತುಂಬಿ ಹರಿಯುವ ಸಂದರ್ಭದಲ್ಲಿ ಹಗ್ಗ ಕಟ್ಟಿ ನೀರಿನ ಹರಿವು ತೋರಿಸುವ ಮತ್ತು ಹೆಚ್ಚು ವಿದ್ಯುತ್ ದೀಪ ಅಳವಡಿಸಲು ನಿರ್ಧರಿಸಲಾಯಿತು. ಮಳೆಗಾಲದಲ್ಲಿ ಅತೀ ಹೆಚ್ಚು ಸಮಸ್ಯೆ ಕಂಡು ಬರುವ ಮೆಸ್ಕಾಂ ಮತ್ತು ಬಿಎಸ್ಎನ್ಎಲ್ ವತಿಯಿಂದ ಹೆಚ್ಚು ಗಮನ ಹರಿಸಲು ಅವರು ಸೂಚಿಸಿದರು. ಸಕಲೇಶಪುರ, ಮಡಿಕೇರಿಗಳಲ್ಲಿ ಹೆಚ್ಚು ಮಳೆ ಸುರಿದಾಗ ಕುಮಾರಧಾರ ತುಂಬಿ ಹರಿಯುವ ಸಾಧ್ಯತೆಯಿದೆ. ಆದುದರಿಂದ ಅಲ್ಲಿ ಮಳೆಯಾದರೂ ಇಲ್ಲಿಗೂ ಮಾಹಿತಿ ನೀಡುವಂತೆ ವ್ಯವಸ್ಥೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು. ಮಳೆಗಾಲದಲ್ಲಿನ ಎಲ್ಲಾ ಪರಿಸ್ಥಿತಿಯನ್ನೂ ಎದುರಿಸಿ ಸಾರ್ವಜನಿಕರಿಗೆ ಸೇವೆ ನೀಡಲು ಸಜ್ಜರಾಗುವಂತೆ ತಹಸೀಲ್ದಾರರು ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮಲ್ಲೇಸ್ವಾಮಿ, ಆರೋಗ್ಯಾಧಿಕಾರಿ ಡಾ. ಸುಬ್ರಹ್ಮಣ್ಯ, ನ.ಪಂ. ಮುಖ್ಯಾಧಿಕಾರಿ ರೋಹಿತಾಶ್ವ, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್, ಆರಕ್ಷಕ ಉಪನಿರೀಕ್ಷಕರಾದ ಗಿರೀಶ್, ಎಲ್.ಎನ್. ರಾವ್ ಇದ್ದರು.