ಸಮವಸ್ತ್ರದಲ್ಲಿ ಬಾಲಏಸು, ಮಾತೆ ಮೇರಿ ಚಿತ್ರ
ವಿಶೇಷ ವರದಿ
ಮಂಗಳೂರು: ಸುರತ್ಕಲ್ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಮಕ್ಕಳ ಸಮವಸ್ತ್ರದಲ್ಲಿ ಈ ವರ್ಷ ಮಾತೆ ಮೇರಿಯಮ್ಮ ಮತ್ತು ಬಾಲ ಏಸುವಿನ ಚಿತ್ರ ಹಾಕಿರುವುದು ಕೆಲ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಶಿಕ್ಷಣ ಕಾಶಿ ಎಂದೇ ಹೆಸರಾದ ಕರಾವಳಿಯಲ್ಲಿ ಶಾಲೆ ಆರಂಭಗೊಳ್ಳುತ್ತಿದ್ದಂತೆಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಧಾರ್ಮಿಕ ಭಾವನೆ ಹೇರುವ ಪ್ರಕರಣಗಳು ವಿವಾದ ಪಡೆದುಕೊಳ್ಳುತ್ತಿರುವುದು ಮಾಮೂಲಾಗಿದೆ. ರಾಮಕುಂಜ ಶಾಲೆಯಲ್ಲಿ ಹಿಜಬ್ ನಿಷೇಧ ಪ್ರಕರಣ, ಸೇಂಟ್ ಅಲೋಶಿಯಸ್ ಕಾಲೇಜಲ್ಲಿ ಬುರ್ಕಾ ನಿಷೇಧ ನಿಯಮ. ಈಗ ಸುರತ್ಕಲ್ ಶಾಲೆಯಲ್ಲಿ ಮಾತೆ ಮೇರಿಯಮ್ಮ ಚಿತ್ರವನ್ನು ಸಮವಸ್ತ್ರದ ಅಂಗಿಯಲ್ಲಿ ಮತ್ತು ಸೊಂಟಕ್ಕೆ ಧರಿಸುವ ಬೆಲ್ಟ್ನಲ್ಲಿ ಹಾಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ವಿವಾದ ಬೆಳೆಯುವುದು ಮನಗಂಡ ಹೋಲಿ ಫ್ಯಾಮಿಲಿ ಶಾಲೆ ಆಡಳಿತ ಮಂಡಳಿ ಶುಕ್ರವಾರ ಶಿಕ್ಷಕ ರಕ್ಷಕ ಸಂಘದ ಸಭೆ ಕರೆದು ಇತ್ಯರ್ಥ ಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ.
ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಈ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದು, ಎಲ್ಲ ಧರ್ಮ, ಸಮುದಾಯದ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಕ್ರೈಸ್ತೇತರ ಮಕ್ಕಳ ಸಂಖ್ಯೆಯೇ ಇಲ್ಲಿ ಹೆಚ್ಚು. 'ಮಾತೆ ಮೇರಿಯಮ್ಮ ಮತ್ತು ಏಸುವಿನ ಬಗ್ಗೆ ಅಪಾರ ಗೌರವ ಇದೆ. ಆದರೆ ಶಿಕ್ಷಣ ಸಂಸ್ಥೆಯ ಸಮವಸ್ತ್ರದಲ್ಲಿ ಚಿತ್ರ ಹೇರುವುದಕ್ಕೆ ಮಾತ್ರ ನಮ್ಮ ವಿರೋಧ' ಎನ್ನುವುದು ಪೋಷಕರ ಅಭಿಪ್ರಾಯ. 'ನಾವು ಎಲ್ಲ ಧರ್ಮವನ್ನು ಗೌರವದಿಂದ ಕಾಣುತ್ತೇವೆ. ಹಾಗೆಂದು ನಮ್ಮ ಮಕ್ಕಳ ಸಮವಸ್ತ್ರದಲ್ಲಿ ಅನ್ಯ ಧರ್ಮದ ಚಿತ್ರ, ದೇವರ ಚಿತ್ರ ಪ್ರದರ್ಶಿಸುವುದು ಸಹಿಸಲು ಸಾಧ್ಯವಿಲ್ಲ. ಶಿಕ್ಷಣ ಸಂಸ್ಥೆಯ ನಡೆ ಉಳಿದ ಧರ್ಮಗಳ ಅಸಹನೆ ತೋರ್ಪಡಿಸಿದಂತಾಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ಪೋಷಕರು ಹೇಳುತ್ತಾರೆ. ಶಿಕ್ಷಣ ಸಂಸ್ಥೆಯು ಇದುವರೆಗೆ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಸಮವಸ್ತ್ರದಲ್ಲಿ ಹಾಕಿರಲಿಲ್ಲ. ಈ ಬಾರಿ ಹಾಕಿ ಧಾರ್ಮಿಕ ಭಾವನೆ ತೋರಿಸಿದ್ದಾರೆ ಎನ್ನುತ್ತಾರೆ ಪೋಷಕರು.
ಫೋಷಕರ ಮನವಿ: ಮಕ್ಕಳ ಸಮವಸ್ತ್ರದಲ್ಲಿ ಕ್ರೈಸ್ತ ಧಾರ್ಮಿಕ ಚಿಹ್ನೆ, ಚಿತ್ರ ಹೇರಿದ್ದನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಪೋಷಕರು ಗುರುವಾರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯನ್ನು ಭೇಟಿಯಾಗಿ ವಿನಂತಿಸಿದ್ದಾರೆ.
ಈ ಬಗ್ಗೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉರ್ಬನ್ ಪಿಂಟೊ, ಹೋಮಿ ಫ್ಯಾಮಿಲಿ ಎಂದರೆ ದೇವರ ಕುಟುಂಬ. ಹಿಂದೆ ಬೆಲ್ಟ್ ಮತ್ತು ಐಡಿ ಕಾರ್ಡ್ನಲ್ಲಿತ್ತು. ಈ ಬಾರಿ ಟೈ ತೆಗೆದು ಕಿಸೆಗೆ ಸ್ಟಿಕ್ಕರ್ ಮಾಡಲಾಗಿದೆ. ಕಳೆದ ಹತ್ತು ವರ್ಷಗಳಿಂದಲೂ ಹೋಲಿ ಫ್ಯಾಮಿಲಿ ಲೋಗೋ ಸಮವಸ್ತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಒಂದು ಹೆಣ್ಣುಮಗು, ಗಂಡು ಮಗು ತಂದೆ ತಾಯಿ ಹಾಗಿದ್ದ ಲೋಗೋ ಇತ್ತು. ಆದರೆ ಈ ಬಾರಿ ಒಂದು ಮಗುವಿನ ಚಿತ್ರ ತೆಗೆದ ಹಿನ್ನೆಲೆಯಲ್ಲಿ ಬಾಲ ಏಸು ಮತ್ತು ಏಸುವಿನ ತಂದೆ, ತಾಯಿ ಆದ ಮೇರಿಯಮ್ಮ, ಜೋಸೆಫ್ ಚಿತ್ರದಂತೆ ಕಾಣುತ್ತಿದೆ. ಚಿತ್ರ ಮಾಡುವ ಟೈಲರ್ ಮಾಡಿದ ಪ್ರಿಂಟಿಂಗ್ ಮಿಸ್ಟೇಕ್. ಅಂಗಿಯ ಕಿಸೆಯಲ್ಲಿ ಚಿತ್ರದ ಸ್ಟಿಕ್ಕರ್ ಹಾಕಲಾಗಿದ್ದು, ಇಷ್ಟ ಇಲ್ಲದವರು ಅದನ್ನು ತೆಗೆಯಬಹುದು ಎನ್ನುತ್ತಾರೆ.
ಇಂದು ಸಭೆ: ಶಿಕ್ಷಣ ಸಂಸ್ಥೆ ಮುಖ್ಯಸ್ಥರೂ ಆಗಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಮೇ 31ರಂದು ಶಿಕ್ಷಕ ರಕ್ಷಕ ಸಂಘದ ಸಭೆ ಕರೆಯುವಂತೆ ಸೂಚಿಸಿದ್ದಾರೆ. ಇಷ್ಟ ಇದ್ದವರು ಸಮವಸ್ತ್ರ ಹಾಕಬಹುದು ಇಲ್ಲದೇ ಇದ್ದವರು ಸ್ಟಿಕ್ಕರ್ ತೆಗೆಯಬಹುದು ಎಂದು ಸೂಚಿಸಿದ್ದಾರೆ ಎಂದು ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಉರ್ಬನ್ ಪಿಂಟೊ ಹೇಳುತ್ತಾರೆ.