ತುಳುಭವನ ಕಾಮಗಾರಿ ಆರಂಭ: ಕೋಟ್ಯಾನ್
ಮಂಗಳೂರು: ರಾಜಕೀಯದಲ್ಲಿ ತೊಡಗಿ ಮತ್ತೆ ಅಕಾಡೆಮಿಗೆ ಬರಲು ಇಷ್ಟವಿಲ್ಲದ ಕಾರಣ ತುಳು ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ತುಳು ಅಕಾಡೆಮಿ ಕಚೇರಿ ಬಾಡಿಗೆಯಲ್ಲಿದ್ದು, ತುಳು ಭವನ ನಿರ್ಮಾಣಕ್ಕಾಗಿ ಸರ್ಕಾರ ಅನುಮೋದನೆ ದೊರಕಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ. ಇನ್ನೊಂದು ವರ್ಷದಲ್ಲಿ ಅಕಾಡೆಮಿ ಕಟ್ಟಡ ಬಳಸಿಕೊಳ್ಳಲು ಸಾಧ್ಯವಾಗಬಹುದು ಎಂದರು.
ಅಕಾಡೆಮಿಯಲ್ಲಿ ಒಂದೂವರೆ ವರ್ಷ ಕಾರ್ಯನಿರ್ವಹಿಸಿದ್ದು, ತುಳು ಭಾಷೆಯ ಏಳಿಗೆಗಾಗಿ ಶ್ರಮಿಸಿದ್ದೇನೆ. ಅಧ್ಯಕ್ಷನಾಗಿರುವ ಸಂದರ್ಭ 485 ದಿನದಲ್ಲಿ ಅಕಾಡೆಮಿ ಕಚೇರಿಯಲ್ಲಿ ಒಟ್ಟು 357 ದಿನ ಕಾರ್ಯನಿರ್ವಹಿಸಿದ್ದೇನೆ. 120 ದಿನ ಅಕಾಡೆಮಿ ನಿಮಿತ್ತ ಇತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಲುವಾಗಿ ಬಂಟ್ವಾಳದ ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿ ನಡೆದ ಕಾರ್ಯಾಗಾರದ ಮಾಹಿತಿಯನ್ನು ದೆಹಲಿ ತುಳು ಸಮಾವೇಶದಲ್ಲಿ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದರು. ಅಧ್ಯಕ್ಷ ಸ್ಥಾನದಿಂದ ಹೊರಗುಳಿದರೂ, ತುಳುನಾಡಿನ ಅಭಿವೃದ್ಧಿಗಾಗಿ ತುಳುವನಾಗಿ ಅಕಾಡೆಮಿ ಜತೆ ಕಾರ್ಯನಿರ್ವಹಿಸುತ್ತೇನೆ ಎಂದರು.