ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಲಿಪ ಭಾಗವತ ಭವನ ನಿರ್ಮಾಣ ಯೋಜನೆ

Lingaraj Badiger
Updated On : 1 Jun 2013, 12:10 pm

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಅಭಿವಂದನೆ ಸಲ್ಲಿಸುವ ಸಲುವಾಗಿ ಭವನ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದು ಯಕ್ಷಗಾನದ ಖ್ಯಾತ ಅರ್ಥಧಾರಿ, ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ.  ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಮೂಡುಬಿದಿರೆಯ ಬಲಿಪ ಭಾಗವತರ ಮನೆಯ ಬಳಿ ಸುಮಾರು ರು. 10 ಲಕ್ಷ ವೆಚ್ಚದಲ್ಲಿ  ಗ್ರಂಥ ಸಂಗ್ರಹ, ಸನ್ಮಾನ ವಸ್ತುಗಳು, ಅಧ್ಯಯನ ಮತ್ತು ಜಿಜ್ಞಾಸೆಗಳ ಸಮಾಲೋಚನೆಗಾಗಿ ಈ ಭವನ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಮೂಡುಬಿದಿರೆ ಬಲಿಪ ಭಾಗವತ ಮಿತ್ರವೃಂದ ಸಮಿತಿ ರಚಿಸಲಾಗಿದೆ ಎಂದು ಹೇಳಿದರು. ಸಮಿತಿಯಿಂದ ದೇಣಿಗೆ ಸಂಗ್ರಹಿಸಿ ಮಳೆಗಾಲ ಮುಗಿದ ನಂತರ ಭವನ ನಿರ್ಮಾಣ ಕಾರ್ಯ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. 2014ನೇ ಮೇ ತಿಂಗಳಿನಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ ಎಂದರು. ಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಕೆ. ಶ್ರೀಪತಿಭಟ್ ಹಾಜರಿದ್ದರು.
ತುಳುವಿಗೆ ಅಗೌರವ
ಸಲ್ಲ: ಪುನರೂರು
ಮಂಗಳೂರು: ವಿಧಾನಸಭೆಯಲ್ಲಿ ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಶಾಸಕ ವಸಂತ ಬಂಗೇರ ಅವರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು ಸಮಂಜಸವಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದ್ದಾರೆ.  ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ಪ್ರಾಚೀನ ಭಾಷೆ ತುಳು. 8ನೇ ಪರಿಚ್ಛೇದಕ್ಕೆ ಸೇರಲಿಲ್ಲ ಎಂಬ ಕಾರಣ ನೀಡಿ ಕೋಟಿ ತುಳುವರ ಮನಸ್ಸಿಗೆ ನೋವುಂಟು ಮಾಡಿರುವುದು ಸರಿಯಲ್ಲ.  ಮರಾಠಿ, ಇಂಗ್ಲಿಷ್, ತಂದೆ, ತಾಯಿ, ದೇವರುಗಳ ಹೆಸರಿನಲ್ಲಿ ಪ್ರಮಾಣ ವಚನಕ್ಕೆ ಅವಕಾಶವಿದ್ದಾಗ ತುಳುವಿಗೆ ಅಗೌರವ ನೀಡಿರುವುದು ಸರಿಯಲ್ಲ. ಸರ್ಕಾರ ಇಂಥ ಧೋರಣೆ ಅನುಸರಿಸಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement