ಮಳೆಗಾಲ ಬಂದರೂ ಬಗೆಹರಿದಿಲ್ಲ ಕುದ್ರು ಸಮಸ್ಯೆ, ಚರಂಡಿ ಸಿದ್ಧ ಆಗಿಲ್ಲ!
ಮಂಗಳೂರು: ಪ್ರತಿ ಮಳೆಗಾಲದಂತೆ ಈ ಬಾರಿಯೂ ಕುದ್ರು (ಸುತ್ತಲೂ ಜಲ, ಮಧ್ಯೆ ಭೂಪ್ರದೇಶ) ನಿವಾಸಿಗಳ ಬವಣೆ ದೂರವಾಗಿಲ್ಲ, ಮುಖ್ಯರಸ್ತೆಗಳ ಬದಿ ಚರಂಡಿ ತಾಪತ್ರಯವೂ ತಪ್ಪಿಲ್ಲ. ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಳೆಗಾಲದ ಹಿನ್ನೋಟ. ಎಷ್ಟೇ ಸಿದ್ಧತೆ ಮಾಡಿದರೂ ಈವರೆಗೆ ಅನುಭವಿಸಿದ ಮಳೆಗಾಲದ ತೊಂದರೆಗಳಿಂದ ಮುಕ್ತಿದೊರಕಿಸುವಲ್ಲಿ ಪಾಲಿಕೆ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಈ ಬಾರಿಯೂ ರಾಚುತ್ತಿದೆ.
ಎರಡ್ಮೂರು ದಿನ ನೆರೆ ನೀರು ತಗ್ಗಲ್ಲ: ಉಳ್ಳಾಲ ನೇತ್ರಾವತಿ ಸೇತುವೆ ಬಳಿಯ ಪಡ್ಪು, ನ್ಯೂಪಡ್ಪು ಮತ್ತು ಅಡಂಕುದ್ರು ಪ್ರದೇಶ ಮಳೆಗಾಲದಲ್ಲಿ ಅಕ್ಷರಶಃ ನೆರೆ ನೀರಿನಿಂದ ಆವೃತ್ತವಾಗುತ್ತದೆ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಇದನ್ನು ಸುಧಾರಿಸುವತ್ತ ಪಾಲಿಕೆ ಸದಸ್ಯರಾಗಲೀ, ಅಧಿಕಾರಿಗಳಾಗಲೀ ಗಮನ ಹರಿಸಿಲ್ಲ.
ಮುಖ್ಯ ರಸ್ತೆಯಿಂದ ಪಡ್ಪುವಿಗೆ ತೆರಳಲು ಕಚ್ಚಾರಸ್ತೆ ಇದೆ. ರಸ್ತೆಯ ಒಂದು ಪಾರ್ಶ್ವದಲ್ಲಿ ತೋಡು ಇದ್ದು, ಇದರಲ್ಲಿ ಸದಾ ಕಾಲ ನೀರು ತುಂಬಿರುತ್ತದೆ. ನದಿ ದಾಟುವ, ಮರಳು ಸಾಗಿಸುವ ದೋಣಿಗಳಿಗೆ ಇಲ್ಲಿ ವಿಶ್ರಾಂತಿ. ಈ ತೋಡಿನಲ್ಲಿ ನದಿಯ ಹಿನ್ನೀರು ಇದ್ದು, ಮಳೆಗಾಲದಲ್ಲಿ ಪ್ರವಾಹ ಜಾಸ್ತಿಯಾದಾಗ ನೀರು ತಗ್ಗು ಪ್ರದೇಶದಲ್ಲಿರುವ ತೋಟಗಳಿಗೆ ನುಗ್ಗುತ್ತದೆ. ಅಲ್ಲದೇ ಪಡ್ಪು, ನ್ಯೂಪಡ್ಪುಗಳಲ್ಲಿ ನದಿ ಕಿನಾರೆಯಲ್ಲಿರುವ ಕಚ್ಚಾರಸ್ತೆ ತಗ್ಗಿನಲ್ಲಿದ್ದು, ನದಿಯಲ್ಲಿ ಪ್ರವಾಹ ಬಂದರೆ ಸಂಚಾರ ದುಸ್ತರ.
'ಮಳೆಗಾಲದಲ್ಲಿ ವಿಪರೀತ ಪ್ರವಾಹ ಇದ್ದಾಗ ನದಿನೀರು ಉಕ್ಕಿಹರಿದು ರಸ್ತೆ ಮುಳುಗುತ್ತದೆ. ನೀರು ಕಡಿಮೆಯಾಗಲು ಎರಡ್ಮೂರು ದಿನ ಬೇಕು. ಅಲ್ಲಿವರೆಗೆ ನಮ್ಮದು ದ್ವೀಪಸದೃಶ ಬದುಕು. ಈ ರಸ್ತೆಯನ್ನು ಸ್ವಲ್ಪ ಎತ್ತರಿಸಿದರೆ ಸಮಸ್ಯೆಯಾಗದು. ಮಹಾನಗರ ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪಡ್ಪು ನಿವಾಸಿ ಫೆಲಿಕ್ಸ್ ಡಿಸೋಜ.
ಇಲ್ಲಿ ಕುಡಿಯಲು ಉಪ್ಪು ನೀರು. ಪಾಲಿಕೆಯಿಂದ ಪೈಪ್ ಅಳವಡಿಸಿದ್ದರೂ ನೀರು ಬರುತ್ತಿಲ್ಲ. ಮಳೆಗಾಲದಲ್ಲಿ ನೆರೆ ಬಂದರೆ ಶಾಲೆಗೆ ಮಕ್ಕಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಸಮಸ್ಯೆಯನ್ನು ಕೇಳುವವರಿಲ್ಲ ಎನ್ನುತ್ತಾರೆ ನಿವಾಸಿ ಫಿಲೋಮಿನಾ. ಅಡಂಕುದ್ರುವಿನಲ್ಲಿ 12 ಮನೆ ಇದ್ದು, ನೆರೆಗೆ ದೋಣಿಯಲ್ಲೇ ನದಿ ದಾಟುತ್ತಾರೆ. ಸೇತುವೆ ರಚನೆಯ ಪ್ರಯತ್ನವನ್ನು ಯಾರೂ ಮಾಡಿಲ್ಲ.
ಕೊಟ್ಟಾರಚೌಕಿ, ಕಣ್ಣೂರಿನಲ್ಲಿ...: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುತ್ತಿದೆ.
ಅಡ್ಯಾರಿನ ಕಣ್ಣೂರಿನಲ್ಲಿ ಹೆದ್ದಾರಿ ಬದಿ ಚರಂಡಿಯನ್ನು ಸರಿಯಾಗಿ ನಿರ್ಮಿಸದೆ ಅಲ್ಲಿಯೂ ಧಾರಾಕಾರ ಮಳೆಗೆ ನೀರು ರಸ್ತೆಯಲ್ಲಿ ಸಂಗ್ರಹವಾಗಿ ಸಂಚಾರಕ್ಕೆ ಅಡಚಣೆಯಾಗುತ್ತದೆ. ಕೊಟ್ಟಾರಚೌಕಿಯಲ್ಲಿ ಇದೇ ಪರಿಸ್ಥಿತಿ ಸುಧಾರಿಸಿಲ್ಲ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ (ಎನ್‌ಎಚ್‌ಐಎ)ಹೆದ್ದಾರಿ ಬದಿಯ ಎಲ್ಲ ಚರಂಡಿ ಹೂಳೆತ್ತುವಿಕೆ, ಹೊಸ ಚರಂಡಿ ರಚನೆಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
ಪಾಲಿಕೆ ಅಧಿಕಾರಿಗಳ ಸಮಜಾಯಿಷಿ
ಮಳೆಗಾಲ ಸಿದ್ಧತೆಗೆ ಪಾಲಿಕೆಯ ಎಲ್ಲ 60 ವಾರ್ಡ್‌ಗಳಿಗೆ ಪ್ರತ್ಯೇಕ ತಂಡ ರಚಿಸಲಾಗಿದೆ. ರಾತ್ರಿ ವೇಳೆ ಕಾರ್ಯನಿರ್ವಹಿಸಲು ಮಂಗಳೂರು ಹಾಗೂ ಸುರತ್ಕಲ್ ಪ್ರದೇಶಕ್ಕೆ ಎರಡು ತಂಡ ರಚಿಸಲಾಗಿದೆ. ಈಗಾಗಲೇ ರು. 70 ಲಕ್ಷ ವೆಚ್ಚದಲ್ಲಿ 37 ಕಡೆ ತೋಡುಗಳ ಹೂಳೆತ್ತುವಿಕೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆರೋಗ್ಯ ವಿಭಾಗದಿಂದ ಎಲ್ಲ ಚರಂಡಿಗಳ ಹೂಳೆತ್ತಲಾಗುತ್ತಿದೆ. ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ ಎನ್ನುವುದು ಅಧಿಕಾರಿಗಳ ಸಮಜಾಯಿಸಿ. ಆದರೆ ಪ್ರತಿ ವರ್ಷ ತೊಂದರೆ ಕೊಡುವ ಕುದ್ರುವಿಂಥ ತಗ್ಗುಪ್ರದೇಶಗಳ ಸಮಸ್ಯೆ ನಿವಾರಣೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರೆ ನಿರುತ್ತರ.
-ಆತ್ಮಭೂಷಣ್