ಐಟಿ ಕನ್ನಡ ತಂತ್ರಾಂಶ ಅಭಿವೃದ್ಧಿ: ಡೀವಿ ಆಗ್ರಹ
ಮಂಗಳೂರು: ತಂತ್ರಜ್ಞಾನ ಮಾಹಿತಿ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಲು ಕನ್ನಡ ತಂತ್ರಾಂಶ ಅಭಿವೃದ್ಧಿ ಶಿಫಾರಸ್ಸನ್ನು ಸರ್ಕಾರ ಜಾರಿಗೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆಗ್ರಹಿಸಿದ್ದಾರೆ.
ನಗರದ ಟಿ.ವಿ.ರಮಣ ಪೈ ಹಾಲ್ನಲ್ಲಿ ಶುಕ್ರವಾರ 2 ದಿನಗಳ ಮಂಗಳೂರು ಐಟಿ ಡೀಲರ್ಸ್ ಎಸೋಸಿಯೇಶನ್(ಮಿಟ್ಡಾ) ಹಮ್ಮಿಕೊಂಡ 'ಎಕ್ಸ್ಪೋ' ಐಟಿ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಐಟಿ, ಬಿಟಿ ತಂತ್ರಜ್ಞಾನ ಬೆಳವಣಿಗೆ ಆಂಗ್ಲ ಭಾಷೆಯಿಂದ ಮಾತ್ರ ಎಂಬುದು ಸರಿಯಲ್ಲ. ಪ್ರಾದೇಶಿಕ ಭಾಷೆಯಲ್ಲೂ ತಂತ್ರಜ್ಞಾನ ಮುಂದುವರಿಯಬೇಕು. ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಮೂರೂವರೆ ವರ್ಷ ಹಿಂದೆ ತಂತ್ರಜ್ಞಾನ ಮಾಹಿತಿ ಎಲ್ಲರಿಗೆ ತಲುಪುವಂತಾಗಲು ಸರ್ಕಾರ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಡಾ.ಚಿದಾನಂದ ಗೌಡ ನೇತೃತ್ವದಲ್ಲಿ ಸಮಿತಿ ನೇಮಿಸಿತ್ತು. ಈ ಸಮಿತಿ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ವರದಿ ನೀಡಿದ್ದರೂ ಸರ್ಕಾರ ಅದರತ್ತ ಕಣ್ಣೆತ್ತಿಯೂ ನೋಡಿಲ್ಲ.
ಆದ್ದರಿಂದ ಸಮಿತಿ ಶಿಫಾರಸ್ಸು ಅನುಷ್ಠಾನಕ್ಕೆ ಕೂಡಲೇ ಮುಂದಾಗುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸುವುದಾಗಿ ಡೀವಿ ನುಡಿದರು. ಕರಾವಳಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಗೆ ವಿಪುಲ ಅವಕಾಶವಿದೆ. ರಾಜ್ಯದಲ್ಲಿ ವಾರ್ಷಿಕ ರು. 1.35 ಲಕ್ಷ ಕೋಟಿ ಮೌಲ್ಯದ ಸಾಫ್ಟ್ವೇರ್ ರಫ್ತಾಗುತ್ತಿದ್ದು, ಕರ್ನಾಟಕದಲ್ಲಿ 2,500 ನೋಂದಾಯಿತ ಐಟಿ ಕಂಪನಿಗಳಿವೆ. ಮಂಗಳೂರಲ್ಲಿ ಕೂಡ ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಎಂಜಿನಿಯರ್ಗಳ ಕ್ಷಮತೆ ಅಭಿವೃದ್ಧಿಗೆ ಇಲ್ಲಿನ ಶೈಕ್ಷಣಿಕ ಸಂಸ್ಥೆಗಳು ಒತ್ತು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಐಟಿ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ ಎಂದರು.
ಮಿಟ್ಡಾ ಅಧ್ಯಕ್ಷ ಕೇತನ್ ಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಪ್ರಭು, ಮಹಾನಗರ ಪಾಲಿಕೆ ಮಾಜಿ ಸದಸ್ಯ ದೇವಾನಂದ ಪೈ, ಮಿಟ್ಡಾ ಉಪಾಧ್ಯಕ್ಷ ಸುಜಯ ಮೊಂತೆರೊ, ಕಾರ್ಯದರ್ಶಿ ಮೆಲ್ವಿನ್ ಡಯಾಸ್, ಕೋಶಾಧಿಕಾರಿ ಅರುಣ್ ಪ್ರಭು ಹಾಜರಿದ್ದರು. 2 ದಿನಗಳ ಐಟಿ ವಸ್ತುಪ್ರದರ್ಶನದಲ್ಲಿ ನವೀನ ಮಾದರಿಯ ಲ್ಯಾಪ್ಟಾಪ್, ಡೆಸ್ಕ್ಟಾಪ್, ಸ್ಮಾರ್ಟ್ಫೋನ್, ಸಾಫ್ಟ್ವೇರ್ ಎಜುಕೇಶನ್, ಸರ್ವೇಕ್ಷಣಾ ವ್ಯವಸ್ಥೆ, ಎನರ್ಜಿ ಸಿಸ್ಟಮ್, ವಿವಿಧ ಕಂಪನಿಗಳ ಮೊಬೈಲ್ಸೆಟ್ ಸೇರಿದಂತೆ 65 ವಿವಿಧ ಸ್ಟಾಲ್ಗಳು ಇವೆ.