ಧರ್ಮಸ್ಥಳಕ್ಕೆ ಸೂಕ್ತ ರಕ್ಷಣೆ ಅಗತ್ಯ: ಜಗದೀಶ್ ಕಾರಂತ
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳವನ್ನು ಸರ್ಕಾರ ಪವಿತ್ರ ಕ್ಷೇತ್ರವೆಂದು ಘೋಷಿಸಿ ಸೂಕ್ತ ರಕ್ಷಣೆ ನೀಡಬೇಕು ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಜಗದೀಶ್ ಕಾರಂತ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾನತನಾಡಿದ ಅವರು, ಸೌಜನ್ಯಾ ಪ್ರಕರಣ ಹೋರಾಟದ ನೆಪದಲ್ಲಿ ಪುಣ್ಯ ಕ್ಷೇತ್ರ ಮತ್ತು ಅಲ್ಲಿನ ಧರ್ಮಾಧಿಕಾರಿಗಳ ಪೀಠದ ಘನತೆಗೆ ಕುಂದುಂಟಾಗುವ ರೀತಿಯಲ್ಲಿ ಕೆಲ ಶಕ್ತಿಗಳು ಮಾತನಾಡುತ್ತಿವೆ. ಸಾತ್ವಿಕ ಸಂತನ ಮೇಲೆ ಇಂತಹ ಆರೋಪ ಮಾಡುವುದನ್ನು ನಾವು ಕ್ಷಮಿಸುವುದಿಲ್ಲ. ಇದರ ಹಿಂದೆ ವ್ಯವಸ್ಥಿತ ಪಿತೂರಿದೆ ಎಂದು ದೂರಿದರು. ಕಾಂಚಿ ಪೀಠದ ಮಠಾಧೀಶರ ಮೇಲೆ, ಮಾತಾ ಅಮೃತಾನಂದಮಯಿ ಮತ್ತು ಪೇಜಾವರ ಶ್ರೀಗಳ ವಿರುದ್ಧ ಇದೇ ಸ್ವಾರ್ಥ ಸಾಧನೆಯ ಶಕ್ತಿಗಳು ಸಂಚು ರೂಪಿಸಿದ್ದರು. ಸುಬ್ರಹ್ಮಣ್ಯದ ಮಡೆ ಮಡೆ ಸ್ನಾನದ, ಉಡುಪಿ ಕ್ಷೇತ್ರದಲ್ಲಿನ ಪಂಕ್ತಿಭೇದದ ನೆಪವನ್ನಿಟ್ಟುಕೊಂಡು ಇವರು ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ದಾಳಿ ಮಾಡಿದ್ದರು. ಇಂತಹ ತಪ್ಪು ಆಚರಣೆಗಳಿಲ್ಲದ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಇದೀಗ ಸೌಜನ್ಯಾ ಪ್ರಕರಣವನ್ನು ನೆಪವಾಗಿಸಿ ಆರೋಪ ಮಾಡುತ್ತಿದ್ದಾರೆ. ಸೌಜನ್ಯಾಳ ಹೆಸರಲ್ಲಿ ಪೀಠಕ್ಕೆ ಕಳಂಕ ತರಲು ಪ್ರಯತ್ನಿಸಿದರೆ ಅಂಥವರ ವಿರುದ್ಧ ಹಿಂದೂ ಜಾಗರಣ ವೇದಿಕೆ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ನರಸಿಂಹ ನಾಯಕ್ ಉಪಸ್ಥಿತರಿದ್ದರು.