ಮೇಲಂಗಡಿ ಮಸೀದಿಯಲ್ಲಿ ಖುತ್ಬಾ, ನಮಾಜ್ ನಿರ್ವಿಘ್ನ
ಮಂಗಳೂರು: ಉಳ್ಳಾಲ ಮೇಲಂಗಡಿ ಮೊಹಿಯುದ್ದೀನ್ ಮಸೀದಿಯಲ್ಲಿ ಜುಮಾ ನಮಾಜ್ ಸಂದರ್ಭ ನಡೆದ ಅಹಿತಕರ ಘಟನೆಯ ಮೂರನೇ ವಾರ ಶುಕ್ರವಾರ ಖುತ್ಬಾ ಪಾರಾಯಣಕ್ಕೆ ನ್ಯಾಯಾಲಯ ಅನುಮತಿ ನೀಡಿದ್ದರಿಂದ ಖುತ್ಬಾ ಹಾಗೂ ನಮಾಜ್ ನಿರ್ವಿಘ್ನವಾಗಿ ನೆರವೇರಿತು.
ಶುಕ್ರವಾರ 11.30ರ ವರೆಗೆ ನಮಾಜ್ಗೆ ಬಂದವರನ್ನು ಪೊಲೀಸರು ಒಳಗೆ ಬಿಟ್ಟು ಬಳಿಕ ತಡೆದರು. ಈ ಬಾರಿ ಖುತ್ಬಾ ತಡೆಯಲು ಮುಂದಾಗಿದ್ದ ದರ್ಗಾ ಸಮಿತಿ ಪರ ದರ್ಗಾ ಗೇಟ್ ಬಳಿ ಜಮಾಯಿಸಿದ್ದರು. ಮಧ್ಯಾಹ್ನ ವೇಳೆ ಘೋಷಣೆ ಕೂಗಿದ ಭಕ್ತರು ಮಸೀದಿಗೆ ನುಗ್ಗಲು ಮುಂದಾದಾಗ ಪೊಲೀಸರು ತಡೆದರು. ಮಸೀದಿಯಲ್ಲಿ ಸುಮಾರು 300 ಮಂದಿ ಸಮ್ಮುಖದಲ್ಲಿ ಕೊನೆಗೂ ಖತೀಬ್ ಯೂಸುಫ್ ಮಿಸ್ಬಾ ನೇತೃತ್ವದಲ್ಲಿ ಹಾಗೂ ಮೊಹಿಯುದ್ದೀನ್ ಅಬ್ದುಲ್ ಜಬ್ಬಾರ್ ದಾರಿಮಿ ಉಪಸ್ಥಿತಿಯಲ್ಲಿ ಖುತ್ಬಾ ಮತ್ತು ಜಮಾಜ್ ನೆರವೇರಿತು.
ಹಿನ್ನೆಲೆ ಘಟನೆ: ದರ್ಗಾ ಸಮಿತಿ ಧೋರಣೆ ವಿರುದ್ಧ ಸ್ಥಳೀಯರು ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಎದುರಿನ ಮೊಹಿಯುದ್ದೀನ್ ಮಸೀದಿಯಲ್ಲಿ ಅ.18ರಂದು ಪ್ರತ್ಯೇಕ ಜುಮಾ ನಮಾಜ್ಗೆ ಚಾಲನೆ ನೀಡಿದ್ದರು. ದರ್ಗಾ ಸಮಿತಿ ಪರ ಇರುವವರು ನಡೆಸಿದ ದಾಂದಲೆಗೆ ಇಬ್ಬರು ಚೂರಿ ಇರಿತಕ್ಕೊಳಗಾದರೆ, ಇನ್ನಿಬ್ಬರು ಗಾಯಗೊಂಡಿದ್ದರು. ಮಸೀದಿಗೆ ಕಲ್ಲೆಸೆತಯೂ ಆಗಿತ್ತು.
ಈ ಹಿನ್ನೆಲೆಯಲ್ಲಿ ಜುಮಾ ನಮಾಜ್ ನಿಲ್ಲಿಸುವಂತೆ ವಕ್ಪ್ ಮಂಡಳಿ ಸೂಚನೆ ನೀಡಿತ್ತು.
ದರ್ಗಾ ಸಮಿತಿ ಪರ ಇರುವವರ ಒತ್ತಡೆ ನಡುವೆಯೇ ಅ.25ರಂದು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ 65 ಮಂದಿ ಉಪಸ್ಥಿತಿಯಲ್ಲಿ ಖುತ್ಬಾ ಹಾಗೂ ನಮಾಜ್ ನಡೆದಿತ್ತು. ಇದೇ ವೇಳೆ ಮೊಹಿಯುದ್ದೀನ್ ಮಸೀದಿ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರತಿದಿನ ಈ ಮಸೀದಿಯಲ್ಲಿ ನಮಾಜ್ಗೆ ಅವಕಾಶ ಇದೆ. ಆದ್ದರಿಂದ ಶುಕ್ರವಾರ ಖುತ್ಬಾ ಹಾಗೂ ನಮಾಜ್ಗೆ ಅನುಮತಿ ನೀಡುವಂತೆ ಕೋರಿತ್ತು. ಇದನ್ನೇ ನ್ಯಾಯಾಲಯ ವಕ್ಫ್ ಮಂಡಳಿಗೆ ಆದೇಶಿಸಿ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಿತ್ತು.