ದೇಶ, ದೇವ ಭಕ್ತಿ ಇದ್ದರೆ ದೇಶ ಉದ್ಧಾರ: ಪೇಜಾವರ ಶ್ರೀ
ಸುಳ್ಯ: ಕಲೆಗೆ ರಾಷ್ಟ್ರವನ್ನು ಒಗ್ಗೂಡಿಸುವ ಶಕ್ತಿ ಇದ್ದು, ದೇಶಭಕ್ತಿ ಮತ್ತು ದೇವ ಭಕ್ತಿ ನಮ್ಮಲ್ಲಿ ಬೆಳಗಿದಾಗ ದೇಶ ಉದ್ಧಾರವಾಗುತ್ತದೆ. ತಾಂಜಾವೂರಿನಲ್ಲಿ ಸಂಗೀತ ಕಲಾವಿದರೆಲ್ಲ ಸೇರಿ ಗಾನ ಸೇವೆ ನಡೆಸಿದಂತೆ ಸಂಪಾಜೆ ಯಕ್ಷಗಾನ ಕಲಾ ಕ್ಷೇತ್ರವಾಗಿ ಹೊರ ಹೊಮ್ಮಬೇಕಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶಿಸಿದರು. ಕಲ್ಲುಗುಂಡಿಯಲ್ಲಿ ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಯಕ್ಷೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಸಂಪಾಜೆಯಲ್ಲಿ ನಡೆಯುತ್ತಿರುವ ಯಕ್ಷೋತ್ಸವ ಕಲೆಯ ಬೆಳವಣಿಗೆಯೊಂದಿಗೆ ಕಲಾವಿದ ಉನ್ನತಿ ಸಾಧಿಸಲಿ ಎಂದು ಅಧ್ಯಕ್ಷತೆ ವಹಿಸಿದ್ದ ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.