ಇಂದು ವಿವೇಕ ವಿಜಯಪಥ ರಥಯಾತ್ರೆ ಮಂಗಳೂರಿಗೆ
ಮಂಗಳೂರು: ಸ್ವಾಮಿ ವಿವೇಕಾನಂದರ 150ನೇ ಜನ್ಮಶತಮಾನೋತ್ಸವ ಸಲುವಾಗಿ 'ವಿವೇಕ ವಿಜಯಪಥ' ರಥಯಾತ್ರೆ ನ.5ರಂದು ಮಂಗಳೂರಿಗೆ ಆಗಮಿಸಲಿದೆ ಎಂದು ಮಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಜಿತಕಾಮನಂದಜೀ ಭಾನುವಾರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಳಗ್ಗೆ 8.30ಕ್ಕೆ ಮಹಾನಗರ ಪಾಲಿಕೆ ಮುಂಭಾಗ ಜಿಲ್ಲಾಧಿಕಾರಿ ಪ್ರಕಾಶ್ ವಿದ್ಯಾರ್ಥಿ ಜಾಥಾ ಉದ್ಘಾಟಿಸುವರು. ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ಬೆಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜಿ, ಸ್ವಾಮಿ ಮಹಾವಾಕ್ಯಾನಂದಜಿ ಪಾಲ್ಗೊಳ್ಳುವರು. ಬೆಳಗ್ಗೆ 11.15ರಿಂದ ರಾಮಕೃಷ್ಣ ಮಠದಲ್ಲಿ ಸಭಾ ಕಾರ್ಯಕ್ರಮವನ್ನು ಎಸ್ಸಿಎಸ್ ಆಸ್ಪತ್ರೆ ನಿರ್ದೇಶಕ ಡಾ.ಜೀವರಾಜ್ ಸೊರಕೆ ಉದ್ಘಾಟಿಸುವರು. ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಪಾಲ್ಗೊಳ್ಳುವರು. ಸಂಜೆ 4.30ಕ್ಕೆ ರಾಮಕೃಷ್ಣ ಮಠಕ್ಕೆ ಸಂಚರಿಸುವ ವಿವೇಕ ಮೆರವಣಿಗೆಗೆ ನೆಹರೂ ಮೈದಾನದಲ್ಲಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡುವರು. ಮಾಜಿ ಶಾಸಕ ಯೋಗೀಶ್ ಭಟ್ ಹಾಜರಿರುವರು. ಸಂಜೆ 5.30ಕ್ಕೆ ರಾಮಕೃಷ್ಣ ಮಠದಲ್ಲಿ ನಡೆಯುವ ಸಭಾಕಾರ್ಯಕ್ರಮವನ್ನು ಮಂಗಳೂರು ವಿವಿ ಕ್ರೈಸ್ತ ಧರ್ಮ ಅಧ್ಯಯನ ಪೀಠ ಪೂರ್ವ ಮುಖ್ಯಸ್ಥ ಫಾ.ಜಾನ್ ಫೆರ್ನಾಂಡಿಸ್ ಉದ್ಘಾಟಿಸುವರು. ಚೊಕ್ಕಬೆಟ್ಟು ಎಂಜೆಎಂನ ಮೌಲಾನಾ ಯು.ಕೆ.ಅಬ್ದುಲ್ ಅಜೀಜ್ ಧರ್ಮಿ ಅತಿಥಿಯಾಗಿ ಆಗಮಿಸಲಿದ್ದು, ಮಂಗಳೂರು ವಿವಿ ಕನ್ನಡ ವಿದ್ವಾಂಸ ಪ್ರೊ.ಶಿವರಾಮ ಶೆಟ್ಟಿ ಮುಖ್ಯ ಭಾಷಣ ಮಾಡುವರು ಎಂದರು.
ರಥಯಾತ್ರೆ ಎಲ್ಲೆಲ್ಲಿಗೆ?: ವಿವೇಕಾನಂದ ರಥಯಾತ್ರೆ 6ರಂದು ಬೆಳಗ್ಗೆ 8.30ಕ್ಕೆ ತೊಕ್ಕೊಟ್ಟು, 9.30 ದೇರಳಕಟ್ಟೆ ಯೇನೆಪೋಯ ವಿವಿ, 11.30 ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು, 12.30 ಕೊಣಾಜೆ ಮಾರ್ಗವಾಗಿ ಕಲ್ಲಡ್ಕ, ಕಲ್ಲಡ್ಕದಲ್ಲಿ ಮೆರವಣಿಗೆ, ಸಭೆ, ಸಂಜೆ 6ಕ್ಕೆ ವಿಟ್ಲದಲ್ಲಿ ಮೆರವಣಿಗೆ, ರಾತ್ರಿ ಕಂಬಳಬೆಟ್ಟಿಗೆ.
7ರಂದು ಬೆಳಗ್ಗೆ 8.50ಕ್ಕೆ ನೆಹರೂನಗರ, 9ಕ್ಕೆ ವಿವೇಕಾನಂದ ಕಾಲೇಜು, ಮಧ್ಯಾಹ್ನ 12ಕ್ಕೆ ಮಹಾಲಿಂಗೇಶ್ವರ ದೇವಸ್ಥಾನ, ಸಂಜೆ 3.30 ತೆಂಕಿಲ ವಿವೇಕಾನಂದ ಸಂಸ್ಥೆಗಳು, 5ಕ್ಕೆ ಕುಂಬ್ರ, ಅಲ್ಲಿಂದ ಈಶ್ವರಮಂಗಲಕ್ಕೆ ತೆರಳುವುದು. 8ರಂದು ಇಡೀ ದಿನ ಸುಳ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ರಾಜ್ಯದ 22 ಕಡೆ ಈ ರಥ ಸಂಚರಿಸಲಿದ್ದು, ಯುವಜನಾಂಗದಲ್ಲಿ ಉದಾತ್ತ ಮನೋಭಾವನೆ ಮೂಡಿಸುವುದು, ಅವರನ್ನು ಎಚ್ಚರಿಸಿ, ಉತ್ಸಾಹ ತುಂಬಿಸುವ ಕೆಲಸ ಮಾಡಲಿದೆ. ವಿವೇಕಾನಂದರ ಜೀವನ ಸಂದೇಶವನ್ನು ಬಿತ್ತರಿಸಲಿದೆ. ಪುಸ್ತಕಗಳನ್ನು ವಿತರಿಸಲಿದೆ ಎಂದರು.
2014 ಜನವರಿ 12ರಂದು ವಿವೇಕಾನಂದ ಜನ್ಮಶತಮಾನೋತ್ಸವ ಸಮಾರೋಪ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ಆಚರಿಸಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಶುಭೋದಯ ಆಳ್ವ, ಅಧ್ಯಕ್ಷ ಪಿ.ವಿ.ಮೋಹನ್, ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪದಾಧಿಕಾರಿಗಳಾದ ಮಹಮ್ಮದ್ ಬದ್ರುದ್ದೀನ್, ಸುರೇಶ್ ಶೆಟ್ಟಿ ಮತ್ತಿತರರಿದ್ದರು.