ಕಾರ್ಪೊರೇಟ್ ಶೈಲಿಯ ಪ್ರಥಮ ಸ್ನಾತಕೋತ್ತರ ಕೇಂದ್ರ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪ್ರಥಮ ಸ್ನಾತಕೋತ್ತರ ಕೇಂದ್ರ ಕೊಡಗಿನ ಚಿಕ್ಕ ಅಳುವಾರಿನಲ್ಲಿ ಶಿಕ್ಷಣಾರ್ಥಿಗಳನ್ನು ಕೈಬೀಸಿ ಕರೆಯುತ್ತಿದೆ. ಸುಮಾರು ರು. 28 ಕೋಟಿ ವೆಚ್ಚದಲ್ಲಿ ಕಾರ್ಪೊರೇಟ್ ಶೈಲಿಯಲ್ಲಿ ನಿರ್ಮಿಸಲಾದ ಈ ಕೇಂದ್ರ ಡಿಸೆಂಬರ್ನಲ್ಲಿ ಉದ್ಘಾಟನೆಗೊಳ್ಳಲಿದೆ.
ಕುಶಾಲನಗರದಿಂದ 16 ಕಿ.ಮೀ. ದೂರದ ಚಿಕ್ಕಳುವಾರಿನ 72.50 ಎಕರೆ ಜಾಗದಲ್ಲಿ ಈ ಕೇಂದ್ರ ನಿರ್ಮಾಣವಾಗಿದ್ದು, ಎಲ್ಲ ಸೌಲಭ್ಯಗಳನ್ನು ಹೊಂದಿ ಉದ್ಘಾಟನೆಗೊಳ್ಳುವ ಕೇಂದ್ರ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇನ್ನೂ 30 ಎಕರೆ ಜಾಗ ಒದಗಿಸಲು ಸರ್ಕಾರ ಬದ್ಧವಾಗಿದ್ದು, ಒಟ್ಟು 100 ಎಕರೆ ವಿಶಾಲ ಪ್ರದೇಶವನ್ನು ಈ ಕ್ಯಾಂಪಸ್ ಒಳಗೊಳ್ಳಲಿದೆ.
ಎರಡು ಕಡೆ ಸ್ನಾತಕ ಕೇಂದ್ರ: ಕೊಣಾಜೆ ಮಂಗಳಗಂಗೋತ್ರಿ ಕ್ಯಾಂಪಸ್ನಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿ ಕೊಡಗು ಹಾಗೂ ಉಡುಪಿ ಜಿಲ್ಲೆ. ಈ ಜಿಲ್ಲೆಗಳ ವಿದ್ಯಾರ್ಥಿಗಳು ಇದುವರೆಗೆ ಸ್ನಾತಕೋತ್ತರ ವ್ಯಾಸಂಗಕ್ಕೆ ಮಂಗಳೂರು ವಿ.ವಿ.ಗೆ ಬರಬೇಕಾಗಿತ್ತು. ಮಂಗಳೂರು ವಿವಿಯ ವಿವಿಧ ಸ್ನಾತಕೋತ್ತರ ಕೋರ್ಸ್ಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿದ್ದಾರೆ.
ಈಗ ಕೊಡಗಿನಲ್ಲಿ ಸ್ನಾತಕೋತ್ತರ ಕೇಂದ್ರ ಸಿದ್ಧಗೊಂಡಿದ್ದು, ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ಗಳಲ್ಲಿ ಕಲಿಯಲು ಅವಕಾಶವಿದೆ. ಉಡುಪಿಯ ಬೆಳಪು ಗ್ರಾಮದಲ್ಲಿ ಎರಡನೇ ಕೇಂದ್ರಕ್ಕೆ ಜಾಗ ಗುರುತಿಸಲಾಗಿದೆ. 22 ಎಕರೆ ಪ್ರದೇಶದಲ್ಲಿ ರು. 20 ಕೋಟಿ ವೆಚ್ಚದಲ್ಲಿ ಇನ್ನೊಂದು ಸ್ನಾತಕೋತ್ತರ ಕೇಂದ್ರ ತಲೆ ಎತ್ತಲಿದೆ. ಪ್ರಥಮ ಹಂತದಲ್ಲಿ ರು. 5 ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಡಿಸೆಂಬರ್ಗೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲು ವಿವಿ ಉದ್ದೇಶಿಸಿದೆ.
ವಿಜ್ಞಾನ ವಿಭಾಗ ಶಿಫ್ಟ್: ಈವರೆಗೆ ಮಡಿಕೇರಿಯ ಫೀಲ್ಡ್ ಮಾರ್ಷಿಯಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿರುವ ಬಯೋ ಕೆಮಿಸ್ಟ್ರಿ ಮತ್ತು ಮೈಕ್ರೋಬಯೋಲಜಿ ಸ್ನಾತಕೋತ್ತರ ಕೋರ್ಸ್ಗಳ ಅಂತಿಮ ಸೆಮಿಸ್ಟರ್ ಡಿಸೆಂಬರ್ನಿಂದ ಚಿಕ್ಕ ಅಳುವಾರಿನ ಸ್ನಾತಕ ಕೇಂದ್ರಕ್ಕೆ ವರ್ಗಾವಣೆಯಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕೇಂದ್ರದಲ್ಲಿ ಕೆಮಿಸ್ಟ್ರಿ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ ಮತ್ತು ಸಮಾಜಶಾಸ್ತ್ರ ಸ್ನಾತಕ ಕೋರ್ಸ್ ಪ್ರಾರಂಭವಾಗಲಿದೆ.
ಸುಸಜ್ಜಿತ ಕೇಂದ್ರವಿದು: ಚಿಕ್ಕ ಅಳುವಾರಿನಲ್ಲಿ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯ ರೂಪಿಸಲಾಗಿದೆ.
ವಿಜ್ಞಾನ ವಿಭಾಗದಲ್ಲಿ ವಿಶಾಲ ಸಭಾಂಗಣ ಇದೆ. ಕಲಾ ಮತ್ತು ವಾಣಿಜ್ಯ ವಿಭಾಗ ಪೂರ್ಣವಾಗಿದ್ದು, ಉಪನ್ಯಾಸಕರಿಗೆ ವಸತಿಗೃಹ, 20 ಕೊಠಡಿಗಳ ಮಹಿಳಾ ಹಾಸ್ಟೆಲ್, ತಲಾ 80 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಅಂತಿಮ ಹಂತದಲ್ಲಿದೆ.
ವಿಶ್ವ ವಿದ್ಯಾಲಯದ ಕ್ಯಾಂಪಸ್ಗೆ ಬೇಕಾಗುವ ಎಲ್ಲ ಸೌಲಭ್ಯ ಈ ಕೇಂದ್ರಕ್ಕೆ ಕಲ್ಪಿಸಲಾಗಿದೆ.
ಮಂಗಳೂರು ವಿ.ವಿ. 1968ರಿಂದ 1980ರ ವರೆಗೆ ಮೈಸೂರು ವಿವಿಯ ಸ್ನಾತಕ ಕೇಂದ್ರವಾಗಿತ್ತು. ಬಳಿಕ ಸ್ವತಂತ್ರ ವಿ.ವಿ.ಯಾಗಿ ರೂಪುಗೊಂಡಿತ್ತು.
'ಚಿಕ್ಕ ಅಳುವಾರಿನಲ್ಲಿ ವಿವಿಯ ಪ್ರಥಮ ಸ್ನಾತಕೋತ್ತರ ಕೇಂದ್ರ ಸಿದ್ಧಗೊಂಡಿದೆ. ಡಿಸೆಂಬರ್ ಪ್ರಥಮದಲ್ಲಿ ಉದ್ಘಾಟನೆಗೆ ನಿರ್ಧರಿಸಲಾಗಿದೆ. ಇದೇ ವೇಳೆ ಎರಡನೇ ಸ್ನಾತಕೋತ್ತರ ಕೇಂದ್ರಕ್ಕೆ ಬೆಳಪುವಿನಲ್ಲಿ ಜಾಗ ಗುರ್ತಿಸಲಾಗಿದ್ದು, ಡಿಸೆಂಬರ್ನಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು. ಈ ಎರಡೂ ಕಡೆಗಳಲ್ಲಿ ವಿ.ವಿ. ಸ್ನಾತಕೋತ್ತರ ಕೋರ್ಸ್ಗಳು ಪ್ರಾರಂಭವಾಗಲಿದೆ.'
- ಪ್ರೊ.ಶಿವಶಂಕರಮೂರ್ತಿ, ಉಪಕುಲಪತಿ
ಮಂಗಳೂರು ವಿವಿ.
-ಆತ್ಮಭೂಷಣ್