ತ್ಯಾಜ್ಯ ಎಸೆದವರೇ ಶುಚಿಗೊಳಿಸಿದಾಗ!
ಸುಳ್ಯ: ರಿಕ್ಷಾದಲ್ಲಿ ಕೋಳಿ ತ್ಯಾಜ್ಯ ತುಂಬಿ ಎಸೆಯಲೆಂದು ಕ್ರೀಡಾಂಗಣದ ವಠಾರಕ್ಕೆ ಬಂದಾಗ ಸ್ಥಳೀಯರು ಗಮನಿಸಿ ರಿಕ್ಷಾ ತಡೆದ ಹಾಗೂ ಎಸೆಯ ಬಂದವರಿಂದಲೇ ತ್ಯಾಜ್ಯ ಹೆಕ್ಕಿಸಿ, ಪರಿಸರ ಶುಚಿಗೊಳಿಸಿ ವಾಪಸ್ ಕಳುಹಿಸಿಕೊಟ್ಟ ಘಟನೆ ಭಾನುವಾರ ಸುಳ್ಯದಲ್ಲಿ ನಡೆದಿದೆ.
ಸುಳ್ಯ ಚೆನ್ನಕೇಶವದ ದೇವಸ್ಥಾನದ ಸಮೀಪವಿರುವ ಪ್ರಭು ಕ್ರೀಡಾಂಗಣದ ವಠಾರದಲ್ಲಿ ಕಳೆದ ಕೆಲವು ತಿಂಗಳಿನಿನಿಂದ ಕೋಳಿ ತ್ಯಾಜ್ಯವನ್ನು ಮಾಂಸ ದಂಗಡಿಯವರು ಎಸೆದು ಹೋಗುತ್ತಿದ್ದರು. ಇದರಿಂದ ಅಲ್ಲಿನ ಪರಿಸರ ದುರ್ನಾತ ಬೀರುತ್ತಿತ್ತು. ತ್ಯಾಜ್ಯ ಎಸೆಯುವ ಕುರಿತು ಸ್ಥಳೀಯ ನಿವಾಸಿಗಳು ಸುಳ್ಯ ನಗರ ಪಂಚಾಯಿತಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.
ಕೊನೆಗೂ ಸಿಕ್ಕರು: ಭಾನುವಾರ ರಿಕ್ಷಾವೊಂದು ತ್ಯಾಜ್ಯ ಹೇರಿಕೊಂಡು ಕ್ರೀಡಾಂಗಣದ ವಠಾರಕ್ಕೆ ಬಂತು. ರಿಕ್ಷಾದಿಂದ ಚಾಲಕ ಇಳಿದು ಹಿಂಬದಿಗೆ ಬಂದು ತ್ಯಾಜ್ಯದ ಕಟ್ಟು ಹಿಡಿದು ಹೊರಗೆ ತೆಗೆಯುವುದನ್ನು ಗಮನಿಸಿದ ಸ್ಥಳೀಯ ನಿವಾಸಿಯೊಬ್ಬರು ಅಲ್ಲಿಗೆ ಬಂದು ಆತನನ್ನು ಪ್ರಶ್ನಿಸಿದರು. ಹಾಗೂ ಇತರರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದರು.
ಸ್ಥಳಕ್ಕೆ ನ.ಪಂ. ಸದಸ್ಯ ಗಿರೀಶ್ ಕಲ್ಲುಗದ್ದೆ, ಪ್ರವೀಣ್ ಪ್ರಕಾಶ್, ಜಯಂತ್ ಶೆಟ್ಟಿ ದೇವಸ್ಯ, ಹೇಮಪ್ರಕಾಶ್, ಸುನೀಲ್ ಮೊದಲಾದವರು ಬಂದರು. ವಿಷಯ ತಿಳಿದು ಜಾಗದ ಮಾಲಕ ಅಶೋಕ್ ಪ್ರಭು ಕೂಡಾ ಬಂದರು.
ರಿಕ್ಷಾ ಚಾಲಕ ಇವರೆಲ್ಲರನ್ನು ನೋಡಿ ಸ್ಥಳದಿಂದ ಪರಾರಿ ಯಾದ. ರಿಕ್ಷಾದೊಳಗೆ 5 ಪ್ಲಾಸ್ಟಿಕ್ ಚೀಲದಲ್ಲಿ ಕೋಳಿ ಗರಿ ಹಾಗೂ ಕೋಳಿಯ ತ್ಯಾಜ್ಯ ಮತ್ತು ಆಡಿನ ಮಾಂಸದ ತ್ಯಾಜ್ಯಗಳು ಇದ್ದವು.
ಸದಸ್ಯ ಗಿರೀಶ್ ಕಲ್ಲುಗದ್ದೆ ನ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲೊಹೀತಾಶ್ವಗೆ ತಿಳಿಸಿದರು. ಅವರು ಬಂದ ಬಳಿಕ ಅಲ್ಲಿ ಸೇರಿದವರೆಲ್ಲರೂ ಇಲ್ಲಿ ತುಂಬಾ ದಿವಸ ಗಳಿಂದ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ಯಾರೆಂದು ತಿಳಿಯುತ್ತಿರಲಿಲ್ಲ. ಇಂದು ತ್ಯಾಜ್ಯ ಎಸೆಯುವವರು ಸಿಕ್ಕಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇಲ್ಲಿ ಈ ಹಿಂದೆ ಎಸೆದಿರುವ ತ್ಯಾಜ್ಯ ಹಾಗೂ ಗರಿಗಳನ್ನು ಅವರಿಂದಲೇ ಹೆಕ್ಕಿಸುವಂತೆ ಪಟ್ಟು ಹಿಡಿದರು. ಅದರಂತೆ ಚಿಕನ್ ಅಂಗಡಿಯ ಮಾಲೀಕರಿಗೆ ವಿಷಯ ತಿಳಿಸಿದಾಗ ಅವರ ಕಡೆಯ ಕೆಲಸದವರು ಬಂದು ಕ್ರೀಡಾಂಗಣದ ವಠಾರದಲ್ಲಿ ಎಸೆಯಲಾಗಿದ್ದ ತ್ಯಾಜ್ಯ ಹೆಕ್ಕಿಕೊಂಡು ಹೋದರು.