ವಿಭಜಿಸುವ ಶಕ್ತಿಗಳಿಗೆ ಸಾಮರಸ್ಯ ಮೂಲಕ ಉತ್ತರ ನೀಡಿ: ಸಚಿವ ರೈ
ಮಂಗಳೂರು: ಧರ್ಮ, ಭಾಷೆ ಹೆಸರಲ್ಲಿ ಪರಸ್ಪರ ಅಸೂಯೆ ಹುಟ್ಟು ಹಾಕಲು ಪ್ರಯತ್ನಿಸುವ ವಿಭಾಜಕ ಶಕ್ತಿಗಳಿಗೆ ಸಾಮಾಜಿಕ ಸಾಮರಸ್ಯ ಮೂಲಕ ಸೂಕ್ತ ಉತ್ತರ ನೀಡಬೇಕು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
'ಶಾಂತಿ ಪ್ರಕಾಶನ' ಸಂಸ್ಥೆಯ 25ನೇ ವರ್ಷಾಚರಣೆ ಸಂಭ್ರಮವನ್ನು ಪುರಭವನದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನದಲ್ಲಿ ಅದನ್ನು ಸರಿ ಮಾಡಿಕೊಂಡು ಉತ್ತಮ ಭವಿಷ್ಯ ನಿರ್ಮಾಣದತ್ತ ಸಾಗಬೇಕು. ಇತರರ ತಪ್ಪುಗಳತ್ತ ಬೊಟ್ಟು ಮಾಡದೆ, ನಮ್ಮನ್ನು ನಾವು ಸರಿಪಡಿಸಬೇಕು. ಸಂಕುಚಿತ ದೃಷ್ಟಿಕೋನ ಬಿಡಿ, ಹೃದಯಗಳ ನಡುವೆ ಪ್ರೀತಿ ಹುಟ್ಟುಹಾಕಿ. ವಿಶಾಲ ಮನೋಭಾವ ಬೆಳೆಸಿ, ಶಾಂತಿ, ಪ್ರೀತಿ, ಸೌಹಾರ್ದ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಲಿ ಎಂದರು.
ಈ ಸಂದರ್ಭ 'ತಫ್ಹೀಮುಲ್ ಕುರ್‌ಆನ್ ಭಾಗ-3' ಪುಸ್ತಕ ಬಿಡುಗಡೆಗೊಳಿಸಿದರು. 'ಆ ನಂತರ ಮಾತು ಹೇಗಿರಬೇಕು' ಕೃತಿ ಬಿಡುಗಡೆಗೊಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ, ಆರೋಗ್ಯಯುತ ಸಮಾಜಕ್ಕೆ ದೈಹಿಕ ಆರೋಗ್ಯ ಮಾತ್ರವಲ್ಲದೆ ಆರೋಗ್ಯಯುತ ಚಿಂತನೆಗಳು ಅಗತ್ಯ. ಬದುಕಲ್ಲಿ ಮಾತುಗಳಿಂದಲೇ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಎಂಥ ಮಾತುಗಳನ್ನು ಯಾವ ರೀತಿಯಲ್ಲಿ ಆಡಬೇಕು ಎಂಬುದು ಈ ಪುಸ್ತಕದಲ್ಲಿ ಅಡಕವಾಗಿದೆ ಎಂದರು.
ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಮನುಷ್ಯ ಬದುಕಲ್ಲಿ ಸಾಹಿತ್ಯ ಮಹತ್ತರ ಪಾತ್ರ ವಹಿಸುತ್ತದೆ. ಅನ್ಯೋನ್ಯ ಸಂಬಂಧಕ್ಕೆ ಸಾಹಿತ್ಯ ಅಗತ್ಯ ಎಂದರು. ಶಾಸಕ ಜೆ.ಆರ್.ಲೋಬೊ 'ವಿಷನ್ ಎಕ್ಸ್‌ಪೋ' ಉದ್ಘಾಟಿಸಿದರು. ಅಬ್ದುಲ್ ಜಾವೇದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಮೊಯ್ದಿನ್ ಬಾವ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಸಚಿವ ಬಿ.ಎ.ಮೊಯ್ದಿನ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕೆ.ಎಸ್. ಮಹಮ್ಮದ್ ಮಸೂದ್, ಕಾಂಗ್ರೆಸ್ ದ.ಕ.ಜಿಲ್ಲಾ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಮಿಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಸಾದುದ್ದೀನ್ ಎಂ.ಸಾಲಿಹ್, ಯೇನೆಪೊಯ ಮಹಮ್ಮದ್ ಕುಂಞ ಸಿ.ಟಿ.ಅಬೀಬ್ ರೆಹೆಮಾನ್ ಇದ್ದರು.