ಉಪಗ್ರಹ ಉಡ್ಡಯನಕ್ಕೆ ಮೊದಲುಧರ್ಮಸ್ಥಳಕ್ಕೂ ಮೊರೆ ಹೋಗ್ತಿದ್ರು
ಮಂಗಳೂರು: ಉಪಗ್ರಹ ಉಡ್ಡಯನ ಯಶಸ್ವಿಯಾಗಲಿ ಎಂದು ಬಾಹ್ಯಾಕಾಶ ವಿಜ್ಞಾನಿಗಳು ತಿರುಪತಿ ದೇವರಿಗೆ ಮಾತ್ರ ಮೊರೆ ಹೋಗಿದ್ದಲ್ಲ, ಧರ್ಮಸ್ಥಳಕ್ಕೂ ಉಪಗ್ರಹ ಮಾದರಿ ಅರ್ಪಿಸಿ ಈ ಹಿಂದೆ ಪ್ರಾರ್ಥಿಸಿದ್ದಾರೆ.
ಈ ಬಾರಿ ಪಿಎಸ್‌ಎಲ್‌ವಿ ಯಶಸ್ವಿ ಉಡ್ಡಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ರಾಧಾಕೃಷ್ಣನ್ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪೊಡಮಟ್ಟು ಪ್ರಾರ್ಥಿಸಿದ್ದು ಈಗಿನ ಸಂಗತಿ. ಇದೇ ರೀತಿ ಈ ಹಿಂದೆ ಹಲವು ಸಲ ಉಪಗ್ರಹ ಉಡ್ಡಯನ ಮುನ್ನ ಉಪಗ್ರಹ ಮಾದರಿಯನ್ನು ಧರ್ಮಸ್ಥಳಕ್ಕೆ ಅರ್ಪಿಸಿ ಯಶಸ್ವಿ ಉಡ್ಡಯನಕ್ಕೆ ವಿಜ್ಞಾನಿಗಳೇ ಭಾಷ್ಯ ಬರೆದಿದ್ದಾರೆ.
1983 ಆಗಸ್ಟ್‌ನಲ್ಲಿ ಇನ್‌ಸ್ಯಾಟ್-1 ಬಿ ಸೋಲಾರ್ ಪ್ಯಾನಲ್ ತೆರೆದುಕೊಳ್ಳದೆ ಉಡ್ಡಯನ ಪ್ರಯತ್ನ ವಿಫಲಗೊಂಡಿತ್ತು. ಕೋಟೆಗಟ್ಟಲೆ ವ್ಯಯಿಸಿ ತಾಂತ್ರಿಕತೆ ಕೈಕೊಟ್ಟದ್ದರಿಂದ ಕಂಗೆಟ್ಟ ಇಸ್ರೋ ವಿಜ್ಞಾನಿಗಳು ಯಶಸ್ವಿ ಉಡ್ಡಯನಕ್ಕೆ ದೇವರ ಮೊರೆ ಹೋಗಿದ್ದರು. ಬಳಿಕ ಇಸ್ರೋ ವಿಜ್ಞಾನಿಗಳ ತಂಡ ಧರ್ಮಸ್ಥಳಕ್ಕೆ ಆಗಮಿಸಿ ಉಡ್ಡಯನ ಉಪಗ್ರಹ ಮಾದರಿಯನ್ನು ಅರ್ಪಿಸಿತ್ತು. ನಂತರ ಈ ಉಡ್ಡಯನ ಯಶಸ್ವಿಯಾಗಿತ್ತು. ಬಳಿಕ ಪ್ರತಿ ಬಾರಿ ಉಪಗ್ರಹ ಉಡ್ಡಯನಕ್ಕೆ ಮುನ್ನ ಧರ್ಮಸ್ಥಳಕ್ಕೆ ಆಗಮಿಸುವುದು ವಾಡಿಕೆಯಾಯಿತು.
ಹೊಸದಾಗಿ ಉಪಗ್ರಹ ಉಡ್ಡಯನ ಮಾಡುವ ಮೊದಲು ಅದರ ಮಾದರಿಯನ್ನು ತಿರುಪತಿ ಹಾಗೂ ಧರ್ಮಸ್ಥಳಕ್ಕೆ ಇಸ್ರೋ ವಿಜ್ಞಾನಿಗಳು ತರುತ್ತಿದ್ದರು. ದೇವರ ಎದುರು ಮಾದರಿಯನ್ನಿಟ್ಟು ಪ್ರಾರ್ಥನೆ ನಡೆಸುತ್ತಿದ್ದರು. ನಂತರ ಉಡ್ಡಯನ ನಡೆಸುತ್ತಿದ್ದರು. ಹೀಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಉಡ್ಡಯನ ಕೈಗೊಂಡಾಗ ಅದು ಯಶಸ್ವಿಯಾಗಿತ್ತು. ಈ ಬಗ್ಗೆ ಟೀಕೆಗಳಿಗೆ ಕಿವಿಗೊಡದ ವಿಜ್ಞಾನಿಗಳು ಪ್ರತಿ ಬಾರಿ ಉಡ್ಡಯನ ಬಂದಾಗ ಉಪಗ್ರಹ ಮಾದರಿ ಅರ್ಪಿಸುವುದನ್ನು ತಪ್ಪಿಸುತ್ತಿರಲಿಲ್ಲ.
2006ರ ವರೆಗೆ ಅರ್ಪಣೆ: 1983ರಿಂದ 2006ರ ವರೆಗೆ ಧರ್ಮಸ್ಥಳ ಸನ್ನಿಧಿಗೆ ಉಡ್ಡಯನಗೊಳ್ಳುವ ಉಪಗ್ರಹ ಮಾದರಿ ಅರ್ಪಿಸುವುದನ್ನು ಇಸ್ರೋ ವಿಜ್ಞಾನಿಗಳು ರೂಢಿ ಮಾಡಿಕೊಂಡಿದ್ದರು.
ಇನ್‌ಸ್ಯಾಟ್ ಉಪಗ್ರಹದ ಮಾಸ್ಟರ್ ಕಂಟ್ರೋಲರ್ ಫೆಸಿಲಿಟಿ(ಎಂಸಿಎಫ್) ಮಾದರಿಯನ್ನು ಕೂಡ ಅರ್ಪಿಸಿದ್ದರು. ಉಪಗ್ರಹ ಉಡಾವಣೆ ಬಳಿಕ ಯಶಸ್ವಿಯಾಗಿ ಕಕ್ಷೆಗೆ ಸೇರಿಸುವುದಕ್ಕೆ ಎಂಸಿಎಫ್ ಬಳಕೆಯಾಗುತ್ತದೆ. 2005 ಡಿ.22ರಂದು ಇಸ್ರೋ ಇನ್‌ಸ್ಯಾಟ್-4ಎ ಉಪಗ್ರಹವನ್ನು ಫ್ರೆಂಚ್ ಗಯಾನದಿಂದ ಬಾಹ್ಯಾಕಾಶಕ್ಕೆ ಹಾರಿಸಿತ್ತು. ನಾಲ್ಕನೇ ತಲೆಮಾರಿನ ಸಂಪರ್ಕ ಸಾಧನಕ್ಕೆ ನೆರವಾಗುವ ಈ ಉಪಗ್ರಹ ಮಾದರಿಯನ್ನು ಮೊದಲು ಧರ್ಮಸ್ಥಳಕ್ಕೆ ಅರ್ಪಿಸಲಾಗಿತ್ತು. 2006 ಜುಲೈನಲ್ಲಿ ಇನ್‌ಸ್ಯಾಟ್-4ಸಿ ಮಾದರಿ ಅರ್ಪಿಸಿದ್ದೇ ಕೊನೆ. ನಂತರ ಉಡ್ಡಯನದ ಮಾದರಿ ಧರ್ಮಸ್ಥಳಕ್ಕೆ ಸಲ್ಲಿಕೆಯಾಗಿಲ್ಲ. ಆದರೆ ಇಸ್ರೋ ಮುಖ್ಯಸ್ಥರು ಇದುವರೆಗೆ ಇಲ್ಲಿಗೆ ಬಂದು ಮಾದರಿ ಅರ್ಪಿಸಿದ್ದಿಲ್ಲ, ವಿಜ್ಞಾನಿಗಳ ತಂಡ ಈ ಕಾರ್ಯ ನಡೆಸಿದೆ. ಇದನ್ನು ದೇವಸ್ಥಾನದ ಮೂಲಗಳು ದೃಢಪಡಿಸಿವೆ.
ತಾಂತ್ರಿಕ ಕಾಲೇಜಿಗೆ ಹಸ್ತಾಂತರ: ಈಗ ಧರ್ಮಸ್ಥಳದಲ್ಲಿರುವುದು ಎರಡೇ ಉಪಗ್ರಹ ಮಾದರಿ. ಕ್ಷೇತ್ರಕ್ಕೆ ಸಲ್ಲಿಕೆಯಾದ ನಾಲ್ಕೈದು ಮಾದರಿಗಳನ್ನು ಧಾರವಾಡ ಹಾಗೂ ಉಜಿರೆಯಲ್ಲಿರುವ ಧರ್ಮಸ್ಥಳ ಎಂಜಿನಿಯರಿಂಗ್ ಕಾಲೇಜಿಗೆ ಹಸ್ತಾಂತರಿಸಲಾಗಿದೆ.
ವಿದ್ಯಾರ್ಥಿಗಳಿಗೆ ತಾಂತ್ರಿಕತೆ ಪರಿಚಯ ಸಲುವಾಗಿ ಮಾದರಿಗಳನ್ನು ಎಂಜಿನಿಯರಿಂಗ್ ಕಾಲೇಜಿನಲ್ಲಿ ಇರಿಸಲಾಗಿದೆ. ಇನ್‌ಸ್ಯಾಟ್-4ಸಿ ಮಾದರಿ ಮತ್ತು ಇನ್ನೊಂದು ಸಣ್ಣ ಮಾದರಿ ಧರ್ಮಸ್ಥಳ ವಸ್ತುಸಂಗ್ರಹಾಲಯದಲ್ಲಿದೆ.
- ಆತ್ಮಭೂಷಣ್