ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸೌಜನ್ಯಾ ಪ್ರಕರಣ-ಸರ್ಕಾರದ ಬ್ರಿಟಿಷ್ ಪಾಳೆಗಾರಿಕೆ ನೀತಿ: ತಿಮರೋಡಿ ಟೀಕೆ

Vishwanath S
Updated On : 7 Nov 2013, 11:37 am

ಮಂಗಳೂರು: 'ಸೌಜನ್ಯಾ ಹತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸಂಘಟನೆಗಳು ಹಾಗೂ ಕುಟುಂಬಸ್ಥರು ಸರ್ಕಾರವನ್ನು ಕೇಳಿಕೊಂಡಿದ್ದಾಗ ಒಪ್ಪದ ಸರ್ಕಾರ, ಇಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದ ಕೂಡಲೇ ಸ್ಪಂದಿಸುತ್ತಿರುವ ಕ್ರಮ ಬ್ರಿಟಿಷ್ ಪಾಳೆಗಾರಿಕೆ ನೀತಿ' ಎಂದು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ.
 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವ ಮುನ್ಸೂಚನೆ ದೊರಕಿದೆ. ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಸಿಐಡಿ ತನಿಖೆಯಲ್ಲಿ ಪ್ರಕರಣದ ಸತ್ಯಾಸತ್ಯತೆ ಮುಚ್ಚಿ ಹಾಕಿದ ಪರಿಣಾಮ, ಸಿಬಿಐ ತನಿಖೆಯಲ್ಲಿಯೂ ಜನರಿಗೆ ನಂಬಿಕೆ ಇಲ್ಲವಾಗಿದೆ ಎಂದರು.
ಒಂದು ವರ್ಷದಲ್ಲಿ ಸಿಐಡಿ ತನಿಖಾಧಿಕಾರಿಗಳು ಸೌಜನ್ಯ ಪ್ರಕರಣದ ಬಗ್ಗೆ 3 ಬಾರಿ ತನಿಖೆ ನಡೆಸಿದ್ದಾರೆ. 4ನೇ ಬಾರಿ ತನಿಖೆ ನಡೆಸಿದಾಗ ಸಂಘಟನೆಯ ಕೆಲವು ಮಂದಿಯನ್ನು ವಿಚಾರಣೆ ಕರೆದಿದ್ದು, ಹೋಗಿರುವುದಿಲ್ಲ. ಆದರೂ 13 ಪುಟದ ಸಿಐಡಿ ತನಿಖಾ ವರದಿ ನೀಡಲಾಗಿದೆ. ಅಲ್ಲದೆ ಇದರಲ್ಲಿ ಆರೋಪಿ ಸಂತೋಷ್ ಮೇಲಿನ ಆರೋಪದ ಗುರುತರ ಆಧಾರಗಳಿಲ್ಲ.
ಸೌಜನ್ಯ ಪರ ವಾದ ಮಾಡುತ್ತಿರುವ ಇಬ್ಬರು ವಕೀಲರು ಕೂಡ ಪ್ರಭಾವಿ ವ್ಯಕ್ತಿಗಳ ಕೈಯಾಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
 ಸೌಜನ್ಯ ಪ್ರಕರಣ ನಡೆದಿರುವ ಸಂದರ್ಭ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಅಶೋಕ್ ಹಾಗೂ ಇತ್ತೀಚೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಸೌಜನ್ಯ ಮನೆಗೆ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಎಂದು ಟೀಕಿಸಿದರು.
 'ನನ್ನನ್ನೂ ಕೊಲೆ ಮಾಡುವ ಸಂಚು ನಡೆಯುತ್ತಿದೆ. ಆದರೂ ನ್ಯಾಯ ಸಿಕ್ಕಿ ನಿಜವಾದ ಆರೋಪಿಗೆ ಶಿಕ್ಷೆ ಆಗುವವರೆಗೆ ಹೋರಾಟ ಮಾಡುತ್ತೇನೆ' ಎಂದು ಮಹೇಶ್ ಶೆಟ್ಟಿ ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಗೌಡ ಸಮಾಜ ಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ, ಮುಖಂಡರಾದ ರವಿ ಕುಮಾರ್ ಪೂಜಾರಿ, ವಾಸುದೇವ ಗೌಡ, ಆನಂದ್ ಕುಲಾಲ್ ಇದ್ದರು.
9ರಂದು 'ಜಿಲ್ಲಾಮಟ್ಟದ ಪ್ರತಿಭಟನಾ ಸಭೆ'
ಸೌಜನ್ಯಾ ಹತ್ಯಾಚಾರ ಪ್ರಕರಣದ ಜತೆಗೆ ವೇದವಲ್ಲಿ ಹರಳೆ, ವಿದ್ಯಾರ್ಥಿನಿ ಪದ್ಮಲತಾ ಅತ್ಯಾಚಾರ ಪ್ರಕರಣ ಹಾಗೂ ಕಳೆದ 10 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ 460ಕ್ಕೂ ಹೆಚ್ಚಿನ ಅಸಹಜ ಸಾವುಗಳು ಮತ್ತು  ಭೂ ಕಬಳಿಕೆ, ತೆರಿಗೆ ವಂಚನೆಗಳಿಗೆ ಸಂಬಂಧಿಸಿ ಎಲ್ಲ ಪ್ರಕರಣಗಳನ್ನು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ಸಿಬಿಐ ಸಂಸ್ಥೆ ತನಿಖೆ ನಡೆಸುವಂತೆ ಆಗ್ರಹಿಸಿ ನ. 9 ರಂದು ಮಧ್ಯಾಹ್ನ 12 ರಿಂದ 4ರವರೆಗೆ ನೆಹರೂ ಮೈದಾನದಲ್ಲಿ 'ಜಿಲ್ಲಾಮಟ್ಟದ ಪ್ರತಿಭಟನಾ ಸಭೆ' ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement