ಹಿಂದೂ ಭಾವನೆ ಕೆರಳಿಸಿದರೆ ಬೃಹತ್ ಹೋರಾಟ: ಕಲ್ಲಡ್ಕ
ಬಂಟ್ವಾಳ: ಮೂಢನಂಬಿಕೆ ನಿಷೇಧ ಕಾಯ್ದೆ ನೆಪದಲ್ಲಿ ಜನರ ನಂಬಿಕೆಗಳನ್ನೇ ಬುಡಮೇಲು ಮಾಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆ ಕೆದಕುವ ಕೆಲಸವನ್ನು ಸರ್ಕಾರ ಮುಂದುವರಿಸಿದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕ್ಷೇತ್ರಿಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ ಕಲ್ಲಡ್ಕ ಎಚ್ಚರಿಸಿದರು. ಕಲ್ಲಡ್ಕದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಳ್ಳುವ ಮೂಲಕ ಹಿಂದುಗಳ ಭಾವನೆ ಮೇಲೆ ಸವಾರಿ ಮಾಡುವ ಕಾರ್ಯ ಸರ್ಕಾರ ಮಾಡುತ್ತಿದೆ. ವಾಸ್ತುವಿನಿಂದ ಸರ್ಕಾರಕ್ಕೇನು ದೋಷ? ಒಂದೆಡೆ ಸರ್ಕಾರದ ಮಂತ್ರಿಗಳೇ ವಾಸ್ತುವಿನ ನೆಪವೊಡ್ಡಿ ವಿಧಾನಸೌಧದ ಕೊಠಡಿಗಳ ಗೋಡೆಗಳನ್ನು ಒಡೆಯುತ್ತಿದ್ದಾರೆ. ಮತ್ತೊಂದೆಡೆ ಕಾಯ್ದೆ ಹೆಸರಿನಲ್ಲಿ ನಂಬಿಕೆಗಳಿಗೆ ಹೊಡೆತ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.