ಯಾಸೀನ್ ತಂಗಿದ್ದ ಮನೆ ಮುಟ್ಟುಗೋಲಾಗಲಿ
ಮಂಗಳೂರು: 2011ರ ಶಬರಿಮಲೆ ದುರಂತದಲ್ಲಿ 110 ಮಂದಿ ಅಯ್ಯಪ್ಪ ಭಕ್ತರ ಸಾವಿನ ಹಿಂದೆ ಯಾಸೀನ್ ಭಟ್ಕಳ ಕೈವಾಡ ಇದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಶ್ರೀ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಕಾರವಾರ ಜೀಪು ಇತ್ತು. ಇದರಲ್ಲಿ ಯಾಸೀನ್ ಭಟ್ಕಳ ಸಹಚರರು ಇದ್ದ ಬಗ್ಗೆ ಸಂಶಯ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಯಾಸೀನ್ ಭಟ್ಕಳ ಮಂಗಳೂರಲ್ಲಿ ತಂಗಿದ್ದ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
'ಖಡ್ಗ ದೀಕ್ಷೆ ನೀಡುವುದಾಗಿ ಹೇಳಿಕೆ ನೀಡಿದ್ದಕ್ಕೆ ಕೆಲ ಸಂಘಟನೆಗಳ ಒತ್ತಡದಿಂದಾಗಿ ಬಂದರು ಠಾಣೆ ಪೊಲೀಸರು ಸಭಾ ಪದಾಧಿಕಾರಿಗಳ ಮೇಲೆ ಮತ್ತು ನನ್ನ ಮೇಲೆ ಪ್ರಕರಣ ದಾಖಲು ಮಾಡಿದ್ದು ಖಂಡನೀಯ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಖಡ್ಗ ದೀಕ್ಷೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇವೆ. ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ನ.15ರಂದು ನಾಥೂರಾಮ್ ಗೋಡ್ಸೆ ಬಲಿದಾನ ದಿನಾಚರಣೆ ನಡೆಯಲಿದೆ' ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಾದಿ ಭಾಗ್ಯ ಯೋಜನೆ ಆರಂಭಿಸಿರುವುದು ಓಲೈಕೆ ರಾಜಕಾರಣ. ಹಿಂದೂ ಬಡವರಿಗೂ ಯೋಜನೆ ವಿಸ್ತರಿಸಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಯನ್ನು ದಾರಿ ಮಧ್ಯೆ ತಡೆಯಲು ಹಿಂದೂ ಮಹಾಸಭೆ ನಿರ್ಧರಿಸಿದೆ ಎಂದರು. ಶ್ರೀರಾಮ, ಸೀತೆ ವಿರುದ್ಧ ಅವಹೇಳನಕಾರಿಯಾಗಿ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ ಬೀದರ್ ಡೀಸಿ ಪಿ.ಸಿ. ಜಾಫರ್ನನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಠಾಣೆಗೆ ಹಾಜರು: ಖಡ್ಗದೀಕ್ಷೆ ಹೇಳಿಕೆ ಪ್ರಕರಣದಲ್ಲಿ ಮಂಗಳೂರು ಕೋರ್ಟ್ನಿಂದ ಜಾಮೀನು ಪಡೆದು ಗುರುವಾರ ಮಧ್ಯಾಹ್ನ ಬಂದರು ಪೊಲೀಸ್ ಠಾಣೆಗೆ ತೆರಳಿದ್ದ ಸ್ವಾಮೀಜಿ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು. ಹಿಂದೂ ಸಭಾ ಯುವ ವಿಭಾಗದ ರಾಜೇಶ್ ಪವಿತ್ರನ್, ಜಿಲ್ಲಾ ಉಪಾಧ್ಯಕ್ಷ ಜಯಂತ ಕುಂಪಲ, ಸಂಘಟನೆ ಕಾರ್ಯದರ್ಶಿ ಮಾರಪ್ಪ ರೈ, ಕಿಶೋರ್ ದುರ್ಗಾನಗರ ಇದ್ದರು.