ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೈಗಾರಿಕೆಗಳ ಮಾಲಿನ್ಯ ಪತ್ತೆಗೆ ಉನ್ನತ ಸಮಿತಿ ಭೇಟಿ

Vishwanath S
Updated On : 10 Nov 2013, 12:22 pm

ಮಂಗಳೂರು: ಕೈಗಾರಿಕೆಗಳ ಪರಿಸರ ಮಾಲಿನ್ಯ ಅಂಶ ಪತ್ತೆಗೆ ರಾಜ್ಯದಲ್ಲಿ ರಚಿಸಲಾಗುವ ಉನ್ನತ ಸಮಿತಿ ಹಠಾತ್ ಭೇಟಿ ನೀಡಿ ತಪಾಸಣೆ ನಡೆಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
 ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಫಿಕ್ಕಿ) ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿರುವ ಕೈಗಾರಿಕೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ, ಅವು ಎಷ್ಟು ಜನಸ್ನೇಹಿ, ಪಸರಸ್ನೇಹಿಯಾಗಿವೆ ಎಂಬುದನ್ನು ಈ ಕಮಿಟಿ ಅವಲೋಕನ ಮಾಡಲಿದೆ ಎಂದರು.
42 ಕೋಟಿ ಅನುದಾನ: ಕೇಂದ್ರ ರಸ್ತೆ ನಿಧಿ(ಸಿಆರ್‌ಎಫ್)ನಡಿ ದ.ಕ. ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ರು. 42 ಕೋಟಿ ಬಿಡುಗಡೆಯಾಗಿದೆ. ಆಗುಂಬೆ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಲಾಗಿದೆ. ಅದೇ ರೀತಿ ಹಾಸನ-ಬಿಸಿ ರೋಡ್ ರಸ್ತೆ ನಾಲ್ಕು ಪಥ ಪರಿವರ್ತನೆಗೆ ಕ್ರಮ ಜರುಗಿಸಲಾಗುವುದು. ಮಂಗಳೂರು-ಸುರತ್ಕಲ್ ಚತುಷ್ಪಥ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿದೆ. ಮಾಣಿ-ಸಂಪಾಜೆ ರಸ್ತೆ ಕಾಮಗಾರಿ ಪೂರ್ಣಕ್ಕೆ ಆದ್ಯತೆ ನೀಡಲಾಗುವುದು. ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್)ವಿನಾಯ್ತಿ ನೀಡಿ ಕಡಲ ತಡಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರಕ್ಕೆ ನಿಯೋಗ ಕರೆದೊಯ್ಯಲಾಗುವುದು. ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ, ಎನ್‌ಎಂಪಿಟಿ ಅಭಿವೃದ್ಧಿ, ಹಾಸನದಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಹಾಗೂ ಶಿರಾಡಿ ಘಾಟ್ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
7.50 ಕೋಟಿ ಮಂಜೂರು: ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ತೊಕ್ಕೊಟ್ಟುವಿನಿಂದ ಇನ್ಫೋಸಿಸ್ ವರೆಗೆ ರಸ್ತೆ ಅಭಿವೃದ್ಧಿಗೆ ರು. 7.50 ಕೋಟಿ ಮಂಜೂರಾಗಿದೆ. ಮಳೆ ಮುಗಿದ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು. ವಾಣಿಜ್ಯೋದ್ಯಮಿಗಳು ಪ್ರತಿ 3 ತಿಂಗಳಿಗೊಮ್ಮೆ ಇಂಥ ಸಭೆ ಮಾಡಬೇಕು. ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸಬೇಕು. ರಾಜ್ಯಾದ್ಯಂತ ಹೆಲ್ತ್ ಟೂರಿಸಂ ಕಾರ್ಯಯೋಜನೆ ಜಾರಿಗೆ ತರವಾಗುವುದು. ಇಲ್ಲಿನ ಮಂದಿ ವಿದೇಶಿ ಚಿಕಿತ್ಸೆಗೆ ತೆರಳುವ ಬದಲು ಇಲ್ಲಿನ ಚಿಕಿತ್ಸೆಯನ್ನು ವಿದೇಶಿಯರಿಗೆ ಆಕರ್ಷಿಸುವಂತೆ ಮಾಡಲಾಗುವುದು ಎಂದರು.
 ಫಿಕ್ಕಿ ಅಧ್ಯಕ್ಷ ಆರ್.ಶಿವಕುಮಾರ್ ಅಧ್ಯಕ್ಷತೆ ವಹಿಸಿ, ಜಿಲ್ಲೆಯನ್ನು ಸಂಪರ್ಕಿಸುವ ಹದಗೆಟ್ಟ ರಸ್ತೆ ದುರಸ್ತಿಪಡಿಸಬೇಕು. ಬೆಂಗಳೂರಿನ ನೆಲಮಂಗಲ ಮೂಲಕ ನೇರ ರೈಲು ಯಾನಕ್ಕೆ ಅನುವು ಮಾಡಿಕೊಡಬೇಕು. ನವಮಂಗಳೂರು ಬಂದರಲ್ಲಿ ರಫ್ತಿಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
 ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ 900 ಎಕರೆ ಜಮೀನಿನನ್ನು ಜಯಪ್ರಕಾಶ್ ಹೆಸರಿನ ಇಂಡಸ್ಟ್ರೀಸ್‌ಗೆ 20 ವರ್ಷ ಹಿಂದೆ ನೀಡಿದೆ. ಆ ಜಾಗದಲ್ಲಿ ಇನ್ನೂ ಕೈಗಾರಿಕೆ ಸ್ಥಾಪಿಸಿಲ್ಲ. ಆದ್ದರಿಂದ ಆ ಜಾಗವನ್ನು ಸರ್ಕಾರ ಸ್ವಾಧೀನಪಡಿಸಿ ಬೇರೆ ಉದ್ಯಮಿಗಳಿಗೆ ನೀಡಬೇಕು. ಕಳೆದ ವರ್ಷ ಕರಾವಳಿ ವ್ಯಾಪಾರ ಅಭಿವೃದ್ಧಿ ಶೃಂಗದಲ್ಲಿ 37 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿತ್ತು. ಇದರ ಒಟ್ಟು ಮೊತ್ತ ರು. 1700 ಕೋಟಿ. ಈ ಪೈಕಿ 19 ಉದ್ದಿಮೆಗಳು ಕೆಲಸ ಆರಂಭಿಸಿದ್ದು, 1620 ಮಂದಿಗೆ ಉದ್ಯೋಗ ಕಲ್ಪಿಸಿದೆ. ಇಲ್ಲಿ ರು. 1200.50 ಕೋಟಿ ಬಂಡವಾಳ ಹೂಡಿದ್ದು, 23 ಉದ್ದಿಮೆಗಳು ಮುಕ್ತಾಯ ಹಂತದಲ್ಲಿವೆ. ಇವು ಉತ್ಪಾದನೆ ಪ್ರಾರಂಭಿಸಿದಾಗ 3676 ಮಂದಿಗೆ ಉದ್ಯೋಗ ಸಿಗಲಿದೆ. ಇದೇ ರೀತಿಯ ಶೃಂಗ ಸಭೆಗಳನ್ನು ಬೆಳಗಾವಿ, ಮೈಸೂರು, ಮಡಿಕೇರಿಯಲ್ಲಿ ನಡೆಸಿದ್ದು, ರು. 1400 ಕೋಟಿ ಮೊತ್ತದ ಹೂಡಿಕೆಗಳಿಗೆ ಸಹಿ ಹಾಕಲಾಗಿದೆ. ಶೀಘ್ರವೇ ಚಾಮರಾಜನಗರ, ಶಿವಮೊಗ್ಗ, ಹಾಸನಗಳಲ್ಲಿ ಹೂಡಿಕೆ ಸಮಾವೇಶ ಜರುಗಿಸಲಾಗುವುದು ಎಂದರು.
ತೊಕ್ಕೊಟ್ಟುನಿಂದ ಇನ್ಫೋಸಿಸ್ ವರೆಗೆ ರಸ್ತೆ ಅಭಿವೃದ್ಧಿಗೆ ರು. 7.50 ಕೋಟಿ ಮಂಜೂರಾಗಿದೆ. ಮಳೆ ಮುಗಿದ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು.
- ಯು.ಟಿ. ಖಾದರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement