ಪ್ರಾಚೀನ ದೇಗುಲದಲ್ಲಿ 16 ವರ್ಷ ಉತ್ಸವ ಪೂಜೆ ಸ್ಥಗಿತ
ಮಂಗಳೂರು: ಸಹಸ್ರಾರು ಭಕ್ತರ ಸಮ್ಮುಖ ವೈಭವದಿಂದ ಉತ್ಸವ ನಡೆಯುತ್ತಿದ್ದ 121 ವರ್ಷ ಪುರಾತನ ವಿಠೋಬ ರುಕಮಾಯಿ ದೇವಸ್ಥಾನಕ್ಕೆ 19 ವರ್ಷಗಳ ಹಿಂದೆ ಆಡಳಿತ ಲಾಲಸೆ ಕಾರಣಕ್ಕೆ ಬೀಗ ಜಡಿಯಲಾಗಿತ್ತು. 16 ವರ್ಷ ಉತ್ಸವಾದಿಗಳು ಸ್ಥಗಿತಗೊಂಡಿತ್ತು. 2010ರ ನವೆಂಬರ್ನಲ್ಲಿ ಭಕ್ತರ ಒತ್ತಾಸೆಯಲ್ಲಿ ಮತ್ತೆ ಉತ್ಸವ ಆರಂಭಗೊಂಡಿತು. ಆದರೆ ಅಂದು ಬೀಗ ತೆಗೆದು ಉತ್ಸವ ಆರಂಭಿಸಿದ ಟ್ರಸ್ಟಿಗಳ ವಿರುದ್ಧ 3 ವರ್ಷಗಳ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಮತ್ತೊಂದು ವಿಶೇಷ!
ವಿಠೋಬ ದೇವಸ್ಥಾನದಲ್ಲಿ ಪಂಚಪರ್ವಕ್ಕೆ ಸಹಸ್ರಾರು ಮಂದಿ ಸೇರುತ್ತಾರೆ. ನವೆಂಬರ್ನಲ್ಲಿ ನಡೆಯುವ ಕಾರ್ತಿಕ ಮಾಸದ ಅಹೋರಾತ್ರಿ ಭಜನೆ ಸಪ್ತಾಹ ಜಾತ್ರೆ ಬಹಳ ಪ್ರಸಿದ್ಧ.
1994ರಲ್ಲಿ ದೇವಸ್ಥಾನ ತಮಗೆ ಸೇರಿದೆ ಎಂದು ಮಟ್ಟಿ ವರದರಾಜ ಪ್ರಭುಗಳು ತಗಾದೆ ಎತ್ತಿ ಕೋರ್ಟ್ಗೆ ಹೋಗಿದ್ದರು. ಕೋರ್ಟ್ನಲ್ಲಿ 16ವರ್ಷ ವಾದ, ವಿವಾದ ನಡೆಯಿತು. ಹೈಕೋರ್ಟ್ ವ್ಯಾಜ್ಯ ವಜಾ ಗೊಳಿಸಿದ ಹಿನ್ನೆಲೆಯಲ್ಲಿ ಭಕ್ತರು 2010ರ ನವೆಂಬರ್ನಲ್ಲಿ ದೇವಸ್ಥಾನ ಬೀಗ ತೆಗೆದು ಪೂಜೆ ಆರಂಭಿಸಿದ್ದರು.
ಆಗ ಬಂದರು ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಕೋರ್ಟ್ ಆದೇಶ ಪ್ರತಿ ನೋಡಿದ್ದರಿಂದ ಪ್ರಕರಣ ದಾಖಲಾಗಿರಲಿಲ್ಲ.
ಮೂರು ವರ್ಷಗಳ ಬಳಿಕ ಕೋರ್ಟ್ಗೆ ಖಾಸಗಿ ದೂರು ನೀಡಿದ್ದು, ಅದರಂತೆ ನ.5ರಂದು ಪ್ರಕರಣ ದಾಖಲಾಗಿದೆ.
ನಿರೀಕ್ಷಣಾ ಜಾಮೀನು: ದೇವಸ್ಥಾನದಲ್ಲಿ ಈಗ ಸಪ್ತಾಹ ನಡೆಯುತ್ತಿದೆ. ಇದೇ ವೇಳೆ ದೇಗುಲದ ಹೊಸ ಟ್ರಸ್ಟಿಗಳನ್ನು ಮತ್ತು ಭಜನೆ ಸಪ್ತಾಹ ಸಮಿತಿ ಸಂಚಾಲಕ ಹನುಮಂತ ಕಾಮತ್ ಅವರನ್ನು ಬಂಧಿಸಲು ಒತ್ತಡವೂ ಬಂದಿತ್ತು. ಎಲ್ಲ ಟ್ರಸ್ಟಿಗಳಿಗೆ ಮತ್ತು ಸಂಚಾಲಕರು ಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
ವಿಠೋಬ ಪುರಾಣ: ದೇಗುಲವನ್ನು 121 ವರ್ಷಗಳ ಹಿಂದೆ ನಾರಾಯಣತೀರ್ಥ ಎಂಬ ಸನ್ಯಾಸಿ ಸ್ಥಾಪನೆ ಮಾಡಿದರು. ತಾವು ತೀರ್ಥಯಾತ್ರೆಗೆ ಹೋಗುವ ಮೊದಲು ದೇವಸ್ಥಾನವನ್ನು ಗೌಡ ಸಾರಸ್ವತ ಬ್ರಾಹ್ಮಣರ ಬೇರೆ, ಬೇರೆ ಕುಟುಂಬದ ಹಿರಿಯ ಮಕ್ಕಳಿಗೆ ಆಡಳಿತ ನಡೆಸಲು ಧರ್ಮ ಶಾಸನ ಬರೆದಿದ್ದರು.
ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ ರಥೋತ್ಸವ ಸಂದರ್ಭ ದೂರದೂರಿಂದ ಬರುವ ಭಕ್ತರಿಗೆ ವಾಸ್ತವ್ಯ ಊಟೋಪಚಾರಕ್ಕೆ ಕಷ್ಟವಾಗುತ್ತಿತ್ತು. ರಥೋತ್ಸವ ಸಂದರ್ಭ ಮಧ್ಯಾಹ್ನ ಊಟ ಆಗುವಾಗ ಸಂಜೆ ಆಗುತ್ತಿತ್ತು. ಆದ್ದರಿಂದ ಈ ಸ್ಥಳದಲ್ಲಿ ಗಂಜಿ ಊಟ ವ್ಯವಸ್ಥೆಗೆ ದೇವಸ್ಥಾನ ನಿರ್ಮಾಣ ಮಾಡಿದ್ದರು.
ಹಿಂದೆ ದೇವಸ್ಥಾನ ಸುತ್ತಮುತ್ತ ಕಾಲು ಹಾಕಲು ಜಾಗ ಇರಲಿಲ್ಲ, ಅಷ್ಟೊಂದು ಜನ, 1994ರಿಂದ 2010ರವರೆಗೆ ಆ ಕಡೆಗೆ ಜನ ಕಾಲು ಹಾಕುತ್ತಿರಲಿಲ್ಲ. ದೇವಸ್ಥಾನ ಆಡಳಿತ, ಅಧಿಕಾರ ವಿಚಾರದಲ್ಲಿ ವೈಮನಸ್ಯದಿಂದ ಈ ದೇಗುಲದಲ್ಲಿ 16 ವರ್ಷಗಳ ಕಾಲ ಪಂಚಪರ್ವ ಉತ್ಸವಗಳು ನಡೆಯಲೇ ಇಲ್ಲ ಎಂದು ಟ್ರಸ್ಟಿಗಳು ಹೇಳುತ್ತಾರೆ.
ಬೆಳ್ಳಿ ಬಂಗಾರ ಕಳವು!: 2010ರ ನವೆಂಬರ್ನಲ್ಲಿ ದೇವಸ್ಥಾನ ಬೀಗ ಒಡೆದು ಬಂಗಾರ, ಬೆಳ್ಳಿ ಪಾತ್ರೆ ಕದ್ದಿರುವುದಾಗಿ ಹನುಮಂತ ಕಾಮತ್ ಮತ್ತು ಹೊಸ ಟ್ರಸ್ಟಿಗಳ ವಿರುದ್ಧ ವರದರಾಜ ಪ್ರಭುಗಳು ಕೋರ್ಟ್ನಲ್ಲಿ ಖಾಸಗಿ ದೂರು ನೀಡಿದ್ದು, 2013ರ ನ.5ರಂದು ಪ್ರಕರಣ ದಾಖಲಾಗಿದೆ.
'ಇಲ್ಲಿ ವೈಭವೋಪೇತವಾಗಿ ಜಾತ್ರೆ ನಡೆಯುತ್ತಿತ್ತು. ದೇವಸ್ಥಾನ ಖಾಸಗಿ ಆಸ್ತಿ ಎಂದು ಒಬ್ಬರು ಬೀಗ ಹಾಕಿದ್ದರು. ಕೋರ್ಟ್ ತೀರ್ಪು ಭಕ್ತರ ಪರವಾಗಿ ಬಂದ ಹಿನ್ನೆಲೆಯಲ್ಲಿ 2010ರ ನೆಂಬರ್ನಲ್ಲಿ ಭಕ್ತರ ಸಮ್ಮುಖ ಬೀಗ ತೆಗೆದು ಪೂಜೆ ಮಾಡಿಸಿದೆವು. ಈಗ ಪಂಚಪರ್ವ ಉತ್ಸವ ಮತ್ತೆ ಆರಂಭವಾಗಿ ವೈಭವದಿಂದ ನಡೆಯುತ್ತಿದೆ. ಹಿಂದೆ ಇಲ್ಲಿ ಜಾತ್ರೆ ಆದಾಗ ದೇವಸ್ಥಾನ ಮುಂದೆ ಅಂಗಡಿಗಳ ಸಂತೆಯೇ ನೆರೆಯುತ್ತಿತ್ತು. ಗುಜರಾತ್ ಡಾಂಡಿಯಾ ನಡೆಯುತ್ತಿತ್ತು. ಮೂರು ವರ್ಷಗಳಿಂದ ಭಜನೆ ಸಪ್ತಾಹ ನಡೆಯುತ್ತಿದ್ದು, ಕ್ಷೇತ್ರ ಗತವೈಭವಕ್ಕೆ ಮರಳುವ ದಾರಿಯಲ್ಲಿದೆ' ಎಂದು ಭಜನೆ ಸಪ್ತಾಹ ಸಮಿತಿ ಸಂಚಾಲಕ ಹನುಮಂತ ಕಾಮತ್ ಹೇಳುತ್ತಾರೆ.
-ಜಿತೇಂದ್ರ ಕುಂದೇಶ್ವರ