ಬುದ್ಧಿ ಹೇಳಿದ್ದಕ್ಕೆ ಬಸ್ ಚಾಲಕ, ಮಾಲೀಕರ ಮೇಲೆ ಗುಂಪು ಹಲ್ಲೆ
ಉಪ್ಪಿನಂಗಡಿ: 'ಬಸ್ಸಿನ ಬಾಗಿಲಲ್ಲಿ ನಿಂತು ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಬೇಡಿ' ಎಂದು ಹೇಳಿದಕ್ಕೆ ಬಸ್ ಮಾಲೀಕ ಹಾಗೂ ಚಾಲಕರ ಮೇಲೆ ಹೊಂಚು ದಾಳಿ ನಡೆಸಿ ಹಲ್ಲೆ ಮಾಡಿದ ಘಟನೆ ಶನಿವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಯುವಕರ ತಂಡವೊಂದು ಬಸ್ಸಿನ ಮುಂಭಾಗದ ಬಾಗಿಲಲ್ಲಿ ನಿಂತು ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದ್ದರು. ಇದನ್ನು ಕಂಡು ಬಸ್ ಚಾಲಕ ಮತ್ತು ಮಾಲೀಕ ಬಾಗಿಲಿನಿಂದ ತೆರವುಗೊಳ್ಳುವಂತೆ ಸೂಚಿಸಿದರು ಎನ್ನಲಾಗಿದೆ. ಇದನ್ನು ತಮಗಾದ ಅವಮಾನವೆಂದು ತಿಳಿದ ಆ ತಂಡ ಮತೀಯ ಮೂಲಭೂತವಾದಿ ಗುಂಪಿನೊಂದಿಗೆ ಸಂಪರ್ಕ ಸಾಧಿಸಿ, ಐವತ್ತಕ್ಕೂ ಮಿಗಿಲಾದ ಗುಂಪೊಂದು ರಾತ್ರಿ ವೇಳೆ ಬಸ್ಸು ನಿಲ್ದಾಣ ಪ್ರವೇಶಿಸಬೇಕೆನ್ನುವಷ್ಟರಲ್ಲಿ ಮಿಂಚಿನ ಹೊಂಚು ದಾಳಿ ನಡೆಸಿ, ಬಸ್ ಚಾಲಕ ಮನೋಜ್ ಹಾಗೂ ಮಾಲೀಕ ರಘುರಾಮ ಭಟ್ ಮೇಲೆ ಹಲ್ಲೆ ನಡೆಸಿತು.
ಈ ಸಂದರ್ಭ ಉದ್ಯಮಿ ಸ್ವರ್ಣೇಶ್ ಎಂಬವರು ಗಲಾಟೆ ಏನೆಂದು ವಿಚಾರಿಸಲು ಸ್ಥಳಕ್ಕೆ ಹೋದಾಗ ಅವರ ಮೇಲೂ ಗುಂಪು ಹಲ್ಲೆ ನಡೆಸಿ, ಕಾಣಿಸಿಕೊಂಡಷ್ಟೇ ವೇಗದಲ್ಲಿ ಕಣ್ಮರೆಯಾಗಿದೆ. ಉಪ್ಪಿನಂಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.