ಸೌಜನ್ಯಾ ಹತ್ಯಾಚಾರ: ಸಹಿ ಸಂಗ್ರಹ ಅಭಿಯಾನ
ಮಂಗಳೂರು: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು ಎಂದು ಮಂಗಳೂರಿನ ಪ್ರಜಾಪ್ರಭುತ್ವ ವೇದಿಕೆ ಹೇಳಿದೆ.
ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವೇದಿಕೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಸಿಐಡಿ ತನಿಖೆ ನ್ಯಾಯ ಒದಗಿಸದ ಕಾರಣ ಸಿಬಿಐ ತನಿಖೆಯಲ್ಲಿ ವಿಶ್ವಾಸವಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ನೇತೃತ್ವದಲ್ಲೇ ಸಿಬಿಐ ತನಿಖೆ ನಡೆಯಬೇಕು. ಸರಿಯಾಗಿ ತನಿಖೆ ನಡೆಸದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಅಲ್ಲಿವರೆಗೆ ಹೋರಾಟ ಮುಂದುವರಿಯುವುದು ಎಂದರು.
ಸೌಜನ್ಯಾ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ಕಳೆದ 13 ತಿಂಗಳಿಂದ ಹೋರಾಟ ನಡೆಸಲಾಗುತ್ತಿದೆ. ಸಿಐಡಿ ಸರಿಯಾಗಿ ತನಿಖೆ ನಡೆಸದೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರವೂ ಅದೇ ಆಧಾರದಲ್ಲಿ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ ಸರ್ಕಾರಕ್ಕೆ ದೇವರ ಶಾಪ ತಟ್ಟಲಿದೆ, ಅನ್ಯಾಯದ ವಿರುದ್ಧ ಹೋರಾಡುವವರನ್ನು ದಮನಿಸಲು ಮುಂದಾದರೆ ನಾವೂ ನಕ್ಸಲರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶವಿಠಲದಾಸ ಸ್ವಾಮೀಜಿ ಮಾತನಾಡಿ, ಸೌಜನ್ಯಾ ಕುಟುಂಬಕ್ಕೆ ನ್ಯಾಯ ಒದಗಿಸುವ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಈಗ ಸಿಬಿಐ ವಿರುದ್ಧವೇ ಆರೋಪ ಕೇಳಿಬರುತ್ತಿರುವುದರಿಂದ ಇನ್ನು ಯಾರಲ್ಲಿ ನ್ಯಾಯ ಕೇಳಬೇಕು ಎಂದು ಪ್ರಶ್ನಿಸಿದರು.
ಸಾಮಾಜಿಕ ಹೋರಾಟಗಾರ ವಿಷ್ಣುಮೂರ್ತಿ ಭಟ್, ಸೌಜನ್ಯಾ ತಾಯಿ ಕುಸುಮ, ಉಜಿರೆಯ ಡಾ.ಬಿ.ಆರ್.ಹರಳೆ, ಹೋರಾಟಗಾರ್ತಿ ಅತ್ರಾಡಿ ಅಮೃತಾ ಶೆಟ್ಟಿ, ಉಜಿರೆ ದೇವಾನಂದ ಹಾಜರಿದ್ದರು.