ಕಳವಾದ ಲಾರಿ ಪತ್ತೆ
ಮಂಗಳೂರು: ನಗರದ ನೀರುಮಾರ್ಗದಿಂದ ಕಳವಾದ ಲಾರಿ ಶಿರಾಡಿ ಘಾಟ್‌ನಲ್ಲಿ ಪತ್ತೆಯಾಗಿದೆ. ಪ್ರವೀಣ್ ಕುಮಾರ್ ಮಾಲಕತ್ವದ ಲಾರಿಯನ್ನು ಶುಕ್ರವಾರ ನೀರುಮಾರ್ಗದ ಮನೆ ಬಳಿಯ ಶೆಡ್‌ನಲ್ಲಿ ನಿಲ್ಲಿಸಿದ್ದರು. ಅಂದೇ ರಾತ್ರಿ ಲಾರಿ ಕಳವಾಗಿತ್ತು. ಈ ಬಗ್ಗೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಪತ್ತೆಯ ಜಾಡು ಹಿಡಿದ ಪೊಲೀಸರು ಭಾನುವಾರ ಶಿರಾಡಿ ಘಾಟ್‌ನಲ್ಲಿ ಲಾರಿ ಇರುವುದನ್ನು ಪತ್ತೆ ಮಾಡಿದರು. ಆದರೆ ಲಾರಿ ಕಳವು ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಈಗ ಖಾಲಿ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು: ಅಸಹಜ ಸಾವು
ಮಂಗಳೂರು: ಕೊಡಿಯಾಲಬೈಲ್ ವಿವೇಕನಗರ ನಿವಾಸಿ ಸುಲೋಚನಾ(50)ಅಸೌಖ್ಯದಿಂದ ಸಾವಿಗೀಡಾದ ಘಟನೆ ಭಾನುವಾರ ನಡೆದಿದೆ. ಒಂದು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಉಲ್ಬಣಗೊಂಡ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು ಎಂದು ಉರ್ವ ಪೊಲೀಸರಿಗೆ ದೂರಲಾಗಿದೆ.
ಕೂಳೂರು: ಮನೆಗೆ ಬೆಂಕಿ
ಮಂಗಳೂರು: ಕೂಳೂರು ಪಡುಕೋಡಿ ನಿವಾಸಿ ರುಕ್ಮಯ ಪೂಜಾರಿ ಎಂಬವರ ಮನೆ ಬೆಂಕಿ ಆಕಸ್ಮಿಕಕ್ಕೆ ಒಳಗಾಗಿ ಭಸ್ಮಗೊಂಡಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಬೆಂಕಿ ಕಂಡು ಮನೆಯವರು ಹೊರಗೋಡಿ ಬಚಾವ್ ಆಗಿದ್ದಾರೆ. ಬೆಂಕಿ ಯಿಂದ ಸುಮಾರು ರು. 1 ಲಕ್ಷ ನಷ್ಟ ಅಂದಾಜಿಸಲಾಗಿದೆ. ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ.