ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಮದುಘಾ ಉತ್ಪನ್ನಕ್ಕೆ ಕೇರಳ ಸರ್ಕಾರ ಮಾನ್ಯತೆ

Lingaraj Badiger
Updated On : 11 Nov 2013, 12:45 pm

ಮಂಗಳೂರು: ಭಾರತೀಯ ಗೋತಳಿ ಗೋವುಗಳ ಸಂರಕ್ಷಣೆ, ಸಂವರ್ಧನೆ  ಗುರಿಯೊಂದಿಗೆ ಹೊಸನಗರ ಶ್ರೀರಾಮಚಂದ್ರಾಪುರ ಮಠ ಕಾಮದುಘಾ ಯೋಜನೆಯಲ್ಲಿ ಪ್ರಾರಂಭಿಸಿದ ವಿವಿಧ ಗವ್ಯ ಉತ್ಪನ್ನಗಳನ್ನು ಪರಿಶೀಲಿಸಿದ ಕೇರಳ ಸರ್ಕಾರದ ಆರೋಗ್ಯ ಇಲಾಖೆ, ಈ ಔಷಧಗಳು ಕ್ರಮಬದ್ಧವಾಗಿದ್ದು, ಉಪಯೋಗಕ್ಕೆ ಯೋಗ್ಯವಾಗಿವೆ ಎಂದು ದೃಢೀಕರಿಸಿದೆ.
ಕಾಸರಗೋಡು ಜಿಲ್ಲೆಯ ಪುಲ್ಲೂರುನಲ್ಲಿ ಸೆ.22ರಂದು ಎಂಡೋಸಲ್ಫಾನ್ ಪೀಡಿತ ಮಕ್ಕಳಿಗೆ ಗವ್ಯ ಉತ್ಪನ್ನ ಚಿಕಿತ್ಸೆ ಯ 'ನಿರಾಮಯ' ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇರಳ ಆರೋಗ್ಯ ಸಚಿವ ಶಿವಕುಮಾರ್, ಈ ಔಷಧಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ ಸುದೀರ್ಘ ಪರಿಶೀಲನೆಗೆ ಆದೇಶಿಸಿದ್ದರು. ಕೇರಳ ಸರ್ಕಾರದ ಪ್ರಯೋಗಶಾಲೆಗಳ ಪರಿಶೀಲನಾ ವರದಿ ಬಂದ ಬಳಿಕವೇ ಈ ಯೋಜನೆ ಅನುಷ್ಠಾನಿಸುವಂತೆ ತಿಳಿಸಿದ್ದರು.
ಕೇಂದ್ರ ಸರ್ಕಾರದ ಆಯುಷ್ ಪ್ರಯೋಗಶಾಲೆಯ ಸರ್ಟಿಫಿಕೇಟ್ ನೀಡಿದ್ದರೂ ಸಚಿವರು ತೃಪ್ತಿಹೊಂದಿರಲಿಲ್ಲ. ಹಾಗಾಗಿ ಉಚಿತ ಚಿಕಿತ್ಸಾ ಕಾರ್ಯಕ್ರಮವನ್ನು ಅನಿವಾರ್ಯವಾಗಿ ರದ್ದುಪಡಿಸಬೇಕಾಯಿತು. ಹೊಸನಗರ ಮಠಾಧೀಶ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಪರಿಶೀಲನೆಗೆ ಬೆಂಬಲ ವ್ಯಕ್ತಪಡಿಸಿದರು.
ಕಲ್ಲಿಕೋಟೆ ವಿಭಾಗದ ಡ್ರಗ್ಸ್ ಇನ್‌ಸ್ಪೆಕ್ಟರ್ ಡಾ.ಜಯಾ ವಿ ದೇವ್ ಆಗಮಿಸಿ ಗವ್ಯ ಉತ್ಪನ್ನಗಳಾದ ಪಂಚಗವ್ಯ ಘೃತ, ಅಭ್ಯಂಗ, ಗೋತೀರ್ಥ ಅರ್ಕ, ಶಮನ ತೈಲ, ವೈಶ್ವಾನರಚೂರ್ಣಗಳನ್ನು ವಿಸ್ತೃತ ಅಧ್ಯಯನಕ್ಕೆ ಕೊಂಡೊಯ್ದರು. ಈಗ ಪರಿಶೀಲನಾ ವರದಿ ಬಂದಿದ್ದು, ಈ ಗವ್ಯ ಉತ್ಪನ್ನಗಳು ಕ್ರಮಬದ್ಧವಾಗಿವೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ನಿರಾಮಯ ಯೋಜನೆ ಮುಂದುವರಿಸಲು ಎಂಡೋಪೀಡಿತರಿಂದ ಬೇಡಿಕೆ ವ್ಯಕ್ತವಾಗಿದೆ. ಮುಂದಿನ ಹಂತಗಳಲ್ಲಿ ಯೋಜನೆ ಮುಂದುವರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕಾರ್ಯಕ್ರಮ ವ್ಯವಸ್ಥಾಪಕ ಪೂಚಕ್ಕಾಡು ವಿಷ್ಣುಪ್ರಸಾದ್ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement