ಕುತ್ಲೂರು ಕಾಡಿನಲ್ಲಿ ಕೂಂಬಿಂಗ್ ಮುಂದುವರಿಕೆ
ಬೆಳ್ತಂಗಡಿ/ಮಂಗಳೂರು: ಶುಕ್ರವಾರ ರಾತ್ರಿ ನಕ್ಸಲರಿಂದ ವಿಧ್ವಂಸಕ ಕೃತ್ಯ ನಡೆದ ಕುತ್ಲೂರಿನ ಕಾಡಿನಲ್ಲಿ ಮತ್ತು ಆಸುಪಾಸಿನಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಬಿಂಗ್ ನಡೆಸುತ್ತಿದ್ದು ನಕ್ಸಲರ ಶೋಧ ಮುಂದುವರಿದಿದೆ.
ಡಿಐಜಿ, ಎಸ್ಪಿ ಮತ್ತಿತರ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೂಂಬಿಂಗ್ ಮುಂದುವರಿದಿದೆ ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕುಕ್ಕಾಜೆ ಕ್ರಾಸ್ ಬಳಿಯ ನಾರಾವಿ ಗ್ರಾ.ಪಂ. ಮಾಜಿ ಸದಸ್ಯ ರಾಮಚಂದ್ರ ಭಟ್ಟರ ಮನೆಗೆ ದಾಳಿ ನಡೆಸಿದ ನಕ್ಸಲರ ತಂಡ ಭಟ್ಟರ ಕಾರನ್ನು ಸುಟ್ಟು ಹಾಕಿ ಅವರನ್ನು ಬೆದರಿಸಿ ತೆರಳಿತ್ತು. ಸುಮಾರು 15-20 ಮಂದಿಯಿದ್ದ ತಂಡದಲ್ಲಿ ಸ್ಥಳೀಯರೇ ಹೆಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಾಡಿನಲ್ಲೂ ಶೋಧ ಮುಂದುವರಿದಿದೆ. ನಿಗ್ರಹ ಪಡೆಯ ಏಳೆಂಟು ಸಿಬ್ಬಂದಿ ಭಟ್ಟರ ಮನೆಯ ಸುತ್ತ ಪಹರೆ ನಡೆಸುತ್ತಿದ್ದಾರೆ. ಇನ್ನಷ್ಟು ಸಿಬ್ಬಂದಿ ಕೂಬಿಂಗ್ನಲ್ಲಿ ನಿರತರಾಗಿದ್ದಾರೆ.
ನಕ್ಸಲರು ಸಿಕ್ಕಿಲ್ಲ: 2012 ಮಾ.10 ರಂದು ಮಲವಂತಿಗೆ ಗ್ರಾಮದ ಪಶ್ಚಿಮಘಟ್ಟದ ಉರ್ದ್ಯಾರು ಜಲಪಾತದ ಬಳಿ ಗುಂಡಿನ ಚಕಮಕಿ ನಡೆದು, ನಕ್ಸಲರ ಅಂತಾರಾಜ್ಯ ಸಮಾವೇಶದ ಕ್ಯಾಂಪ್ ಪತ್ತೆಯಾಗಿ ಶಸ್ತ್ರಾಸ್ತ್ರ, ಗ್ರೇನೇಡ್, ಸಾಹಿತ್ಯ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಯಾರೊಬ್ಬರೂ ಪೊಲೀಸರಿಗೆ ಸಿಕ್ಕಿರಲಿಲ್ಲ.
ಬಳಿಕ ಕುತ್ಲೂರಿನ ಕಾಡಿನಲ್ಲಿ ಕೂಂಬಿಂಗೆ ವೇಳೆ ಕೆಲ ಸಾಹಿತ್ಯಗಳು ಸಲಕರಣೆಗಳು ಸಿಕ್ಕಿದ್ದವು. ಆಗಲೂ ಪೊಲೀಸರಿಗೆ ಯಾರೆಂದು ಪತ್ತೆಯಾಗದೆ ಹೋಯಿತು. ನಂತರ ತಾಲೂಕಿನ ಶಿಶಿಲದಲ್ಲಿ ನಕ್ಸಲರ ಚಟುವಟಿಕೆ ಕಂಡುಬಂದಿದ್ದರೂ ಯಾರೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇದೀಗ ಕುತ್ಲೂರಿನ ಕುಕ್ಕುಜೆ ರಾಮಚಂದ್ರ ಭಟ್ಟರ ಮನೆಗೆ ನಕ್ಸಲರು ದಾಳಿಯಿಟ್ಟು ವಿಧ್ವಂಸಕ ಕೃತ್ಯ ನಡೆಸಿದ್ದಾರೆ.
ನಕ್ಸಲರ ಹೊಸ ತಂಡ?
ಕುತ್ಲೂರಿನಲ್ಲಿ ಕಾಣಿಸಿದ ನಕ್ಸಲರ ಹಿಂದೆ ಹೊಸ ಟೀಂ ಉದಯವಾಗಿದೆಯೇ? ಹೀಗೊಂದು ಸಂಶಯ ಪೊಲೀಸರನ್ನು ಕಾಡುತ್ತಿದೆ.
ಶನಿವಾರ ನಸುಕಿನ ಜಾವ ಕುತ್ಲೂರಿನ ರಾಮಚಂದ್ರ ಭಟ್ಟರ ಮನೆ ಆವರಣಕ್ಕೆ ಬಂದು ವಿಧ್ವಂಸಕ ಕೃತ್ಯವೆಸಗಿದ ನಕ್ಸಲರು ಬಳಿಕ ಪರಾರಿಯಾಗಿದ್ದರು. ಇದು ವಿಕ್ರಂ ಗೌಡ ನೇತೃತ್ವದ ತಂಡದ ಕೃತ್ಯ ಎನ್ನಲಾಗಿದ್ದರೂ ಆತನಲ್ಲದೆ 15 ಮಂದಿ ನಕ್ಸಲರ ಹೊಸ ತಂಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರದಲ್ಲಿ ನಡೆದ ಪೊಲೀಸ್ ಉನ್ನತಾಧಿಕಾರಿಗಳ ಸಭೆಯಲ್ಲೂ ಈ ವಿಷಯ ಪ್ರಸ್ತಾಪಕ್ಕೆ ಬಂದಿದೆ ಎನ್ನಲಾಗಿದೆ.
ಕಳೆದ ಒಂದು ವರ್ಷದಿಂದ ವಿಕ್ರಂ ಗೌಡ ಕೊಡಗನ್ನು ಕಾರಸ್ಥಾನ ಮಾಡಿಕೊಂಡಿದ್ದ. ಕೇರಳ ಜತೆ ನಕ್ಸಲ್ ಕಾರಿಡಾರ್ ವಿಸ್ತರಿಸಲು ಪ್ರಯತ್ನಿಸುತ್ತಿದ್ದ. ಇದೀಗ ಆತನೇ ಬಂದಿರುವುದಾದರೆ ಮರಳಿ ಇಲ್ಲಿಗೆ ಯಾಕೆ ಬಂದ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ. ಉನ್ನತಾಧಿಕಾರಿಗಳ ಸಭೆಯಲ್ಲಿ ಈ ವಿಚಾರವೂ ಚರ್ಚೆಗೆ ಬಂದಿದೆ. ರಾಮಚಂದ್ರ ಭಟ್ಟರ ಮನೆಗೆ ಬಂದ ನಕ್ಸಲರಲ್ಲಿ ಶಸ್ತ್ರಾಸ್ತ್ರಗಳಿದ್ದವು. ಎಲ್ಲರಲ್ಲೂ ಶಸ್ತ್ರಾಸ್ತ್ರ ಹೇಗೆ ಬಂತು? ಛತ್ತೀಸ್ಗಡ ಸೇರಿದಂತೆ ಅನ್ಯ ರಾಜ್ಯಗಳಿಂದ ತರಿಸಿದರೇ? ತಂಡದಲ್ಲಿ ಯುವಕರೇ ಕಂಡುಬರುತ್ತಿದ್ದರು ಎಂಬ ಸಂಗತಿಯೂ ಪೊಲೀಸರ ಹೊಸ ತಲೆನೋವಿಗೆ ಕಾರಣವಾಗಿದೆ. ಈ ಎಲ್ಲ ಅಂಶಗಳ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಯಿಂದ ಮಾಹಿತಿ ಒದಗಿಸುವಂತೆ ಅಧಿಕಾರಿಗಳ ಸಭೆಯಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.
ಭಟ್ಟರ ವಿರುದ್ಧ ಪ್ರತೀಕಾರವೇ?
ಕುತ್ಲೂರಿನ ನಕ್ಸಲರ ಕೃತ್ಯ ಪ್ರಕರಣ ಗಮನಿಸಿದರೆ, ಬೆರಳೆಣಿಕೆಯಲ್ಲಿರುವ ನಕ್ಸಲರೊಂದಿಗೆ ಸ್ಥಳೀಯರು ಕೈ ಜೋಡಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
ಕಳೆದ ಐದು ವರ್ಷಗಳಿಂದೀಚೆಗೆ ಸರ್ಕಾರ ರಾಷ್ಟ್ರೀಯ ಉದ್ಯಾನವನಗಳಲ್ಲಿ ವಾಸಿಸುತ್ತಿರುವವರು ಸ್ವಯಂ ಆಗಿ ಹೊರಬರುವವರಿಗೆ ಪ್ಯಾಕೇಜ್ ಘೋಷಿಸಿ ಪುನರ್ವಸತಿ ಕಲ್ಪಿಸುವ ಬಗ್ಗೆ ಆದೇಶ ಹೊರಡಿಸಿತ್ತು. ಸುಪ್ರೀಂಕೋರ್ಟ್ನ ಮಾರ್ಗದರ್ಶನವೂ ಇದಕ್ಕೆ ಕಾರಣ. ಅದೇ ರೀತಿ ಕುದುರೆಮುಖ ರಾಷ್ಟೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಅನೇಕ ಕುಟುಂಬಗಳು ಪರಿಹಾರ ಪಡೆದು ಪುನರ್ವಸತಿ ಕಲ್ಪಿಸಿಕೊಂಡಿದ್ದವು.
ಹೀಗೆ ಬರಬರುತ್ತಾ ಕಾಡಿನಲ್ಲಿರುವ ಜನ ನಾಡಿಗೆ ಬಂದರೆ ವರ್ಷದ ಹೆಚ್ಚಿನ ಸಮಯವನ್ನು ಅಂದರೆ ಮಳೆಗಾಲ ಹೊರತು ಪಡಿಸಿ ಕಾಡಿನಲ್ಲೇ ಕಳೆಯುವ ನಕ್ಸಲರಿಗೆ ಮುಂದೆ ಜೀವನ ನಿರ್ವಹಣೆಗೆ ಅಡಚಣೆ ಉಂಟಾಗಬಹುದು ಎಂಬ ಭೀತಿ ಕಾಡತೊಡಗಿರಬಹುದು. ಏಕೆಂದರೆ ಕಾಡಿನಲ್ಲಿರುವ ಜನ ನಕ್ಸಲರಿಗೆ ಆಹಾರ ಧಾನ್ಯಗಳನ್ನು ನೀಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಕುತ್ಲೂರಿನ ರಾಮಚಂದ್ರ ಭಟ್ಟರು ವೈಲ್ಡ್ ಕ್ಯಾನ್ ಎಂಬ ಎನ್ಜಿಒದಲ್ಲಿ ಫೀಲ್ಡ್ ಆಫಿಸರ್ ಆಗಿದ್ದಾರೆ. ನಾರಾವಿ ಗ್ರಾಪಂ ಮಾಜಿ ಸದಸ್ಯರೂ ಹೌದು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಕಾಡಿನಲ್ಲಿದ್ದವರು ಸ್ವಯಂ ಆಗಿ ಹೊರಬರಲಿಚ್ಛಿಸುವವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ, ಅವರಿಗೆ ಸರ್ಕಾರದಿಂದ ದೊರೆಯುವ ಅತಿ ಹೆಚ್ಚಿನ ಪರಿಹಾರ ದೊರಕಿಸುವಲ್ಲಿ ಶ್ರಮಿಸುತ್ತಿದ್ದರು. ಇವರ ಪ್ರಯತ್ನದಿಂದಾಗಿ ಬೆಳ್ತಂಗಡಿ,ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಸುಮಾರು 35ಕ್ಕೂ ಹೆಚ್ಚು ಕುಟುಂಬಗಳು ಆಸ್ತಿಯ ಮಾರುಕಟ್ಟೆಯ ಮೌಲ್ಯದಷ್ಟೇ ಪರಿಹಾರ ಪಡೆದು ಹೊರಬಂದಿದ್ದಾರೆ. ಇನ್ನೂ 80 ಕುಟುಂಬಗಳು ಇದೇ ಹಾದಿ ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಶೇ. 90 ಕುಟುಂಬಗಳು ಹೊರಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಡಿನಲ್ಲಿರುವ ಕುಟುಂಬಗಳಿಗೆ ಬಲಾತ್ಕಾರವಾಗಿ ಒಕ್ಕಲೆಬ್ಬಿಸುವ ಭಯ ಇಲ್ಲವಾಗಿದೆ. ಈ ಭಯ ಹೋಗಲಾಡಿಸುವಲ್ಲಿ ರಾಮಚಂದ್ರ ಭಟ್ಟರ ಶ್ರಮ ಇದೆ. ಸದ್ಯ ಈ ಸ್ಥಿತಿ ನಕ್ಸಲರನ್ನು ಕೆರಳಿಸಲು ಕಾರಣವಾಗಿದೆ ಎಂದು ಶಂಕಿಸಲಾಗಿದೆ.