ಜಲವಳ್ಳಿಗೆ 'ಚಿಟ್ಟಾಣಿ ಪ್ರಶಸ್ತಿ', ರಘುರಾಮ ಶೆಟ್ಟಿಗೆ 'ಟಿ.ವಿ.ರಾವ್ ಪ್ರಶಸ್ತಿ' ಪ್ರದಾನ
ಉಡುಪಿ: ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅಭಿಮಾನಿ ಬಳಗದ ವತಿಯಿಂದ ಉಡುಪಿ ರಾಜಾಂಗಣದಲ್ಲಿ ನಡೆದ ಚಿಟ್ಟಾಣಿ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭ ಸೋಮವಾರ ನಡೆಯಿತು. ಈ ಸಂದರ್ಭ ಯಕ್ಷಗಾನದ ಹಿರಿಯ ವೇಷಧಾರಿ ಜಲವಳ್ಳಿ ವೆಂಕಟೇಶ ರಾವ್ಗೆ 'ಚಿಟ್ಟಾಣಿ ಪ್ರಶಸ್ತಿ' ಮತ್ತು ಹಿರಿಯ ಅರ್ಥಧಾರಿ ರಘುರಾಮ ಶೆಟ್ಟಿಗೆ 'ಟಿ. ವಿ. ರಾವ್ ಪ್ರಶಸ್ತಿ'ಯನ್ನು ಪರ್ಯಾಯ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಪ್ರದಾನ ಮಾಡಿದರು. ಸ್ವತಃ ಚಿಟ್ಟಾಣಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಅಂಬಲಪಾಡಿ ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ನಿರ್ದೇಶಕ ಡಾ. ಟಿ.ಎಸ್. ರಾವ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಕಿಶನ್ ಹೆಗ್ಡೆ ಕೊಳ್ಕೆಬೈಲು, ಚಿಟ್ಟಾಣಿ ಪುತ್ರ ಸುಬ್ರಹ್ಮಣ್ಯ ಹೆಗಡೆ, ಚಿಟ್ಟಾಣಿ ಅಭಿಮಾನಿ ಬಳಗದ ಕಾರ್ಯದರ್ಶಿ ಗೋಪಿಕೃಷ್ಣ, ಜಿ. ಎಸ್. ಭಟ್ ಮೈಸೂರು, ರವಿರಾಜ್ ಕುಮಾರ್ ಇದ್ದರು. ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ನಾರಾಯಣ ಹೆಗಡೆ ನಿರೂಪಿಸಿದರು.